ಅಂಬರೀಷ್ ಅಂತ್ಯ ಸಂಸ್ಕಾರಕ್ಕೆ ರಮ್ಯಾ ಬಾರದಿರಲು ಕಾರಣ ತಿಳಿಸಿದ ಸಚಿವ ಡಿಕೆಶಿ

Update: 2018-11-27 13:38 GMT

ಬೆಂಗಳೂರು, ನ. 27: ಮಾಜಿ ಸಂಸದೆ, ನಟಿ ರಮ್ಯಾರ ಕಾಲಿನ ಸಮಸ್ಯೆ ಹಿನ್ನೆಲೆಯಲ್ಲಿ ಹಿರಿಯ ನಟ ಅಂಬರೀಷ್ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಣೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಮ್ಯಾ ಅವರ ಕಾಲಿನ ಮೂಳೆ ಮುರಿದಿದ್ದು, ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ಇರುವುದರಿಂದ ಅವರು ಅಂಬರೀಷ್ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಆಗಿಲ್ಲ ಎಂದರು.

ಅಭಿನಂದನೆ: ಅಂಬರೀಷ್ ಅವರ ಅಂತಿಮ ಯಾತ್ರೆ ಅತ್ಯಂತ ಶಾಂತಿಯುತ ಮತ್ತು ವ್ಯವಸ್ಥಿತವಾಗಿ ನಡೆದಿರುವುದಕ್ಕೆ ರಾಜ್ಯದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು, ರಾಜ್ಯ ಸರಕಾರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಹೇಳಿದರು.

ಅಂಬರೀಷ್ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ಯುವ ನಿರ್ಧಾರವನ್ನು ನಮ್ಮ ಸರಕಾರ ಕೈಗೊಂಡಿತ್ತು. ಇಲ್ಲದೆ ಹೋದರೆ ಜನ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಅನಂತರ ಎಲ್ಲ ಪಕ್ಷದವರು, ಹೊರಗಿನಿಂದ ಬಂದವರಿಗೂ ಹಾಗೂ ಕಲಾವಿದರಿಗೂ ಅಂತಿಮ ದರ್ಶನಕ್ಕೆ ವ್ಯವಸ್ಥಿತವಾಗಿ ಅವಕಾಶ ಕಲ್ಪಿಸಲಾಗಿತ್ತು. ಕೆಲವರಿಗೆ ಅವಕಾಶ ಸಿಕ್ಕದೆ ಇದ್ದರೂ ಅಂಬರೀಷ್ ಅಂತಿಮ ಯಾತ್ರೆ ಯಶಸ್ವಿಯಾಗಿ ನಡೆದಿದೆ ಎಂದರು.

ರಾಜ್ಯ ಸರಕಾರವಾಗಿ ನಾವು ನಮ್ಮ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಕಾಲಕ್ಕೆ ಸೇನಾ ಹೆಲಿಕಾಫ್ಟರ್ ಒದಗಿಸಿ ಸಹಾಯ ಮಾಡಿದ್ದು, ಅವರಿಗೂ ಅಭಿನಂದನೆ ಸಲ್ಲಿಸುವೆ ಎಂದು ಶಿವಕುಮಾರ್ ಹೇಳಿದರು.

ಸ್ಮಾರಕ ನಿರ್ಮಾಣ: ಅಂಬರೀಷ್ ಅವರ ಸ್ಮಾರಕ ನಿರ್ಮಾಣಕ್ಕೆ ಸರಕಾರ ಕ್ರಮ ಕೈಗೊಳ್ಳಲಿದೆ. ಜತೆಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲೇ ನಿರ್ಮಿಸಬೇಕೆಂಬ ಬೇಡಿಕೆ ಸೃಷ್ಟಿಯಾಗಿದೆ. ಈ ಬಗ್ಗೆಯೂ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News