ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ: ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖ

Update: 2018-11-27 15:18 GMT

 ವಿಶ್ವಸಂಸ್ಥೆ, ನ.27: ವರದಕ್ಷಿಣೆ ನಿಷೇಧಿಸುವ ಕಾನೂನು ಇದ್ದರೂ ಈಗಲೂ ಭಾರತದಲ್ಲಿ ಅತ್ಯಧಿಕ ಪ್ರಮಾಣದ ಮಹಿಳಾ ಹತ್ಯೆ ವರದಕ್ಷಿಣೆಗೆ ಸಂಬಂಧಿಸಿಯೇ ನಡೆಯುತ್ತಿದ್ದು, ಭಾರತವು ವಿಶ್ವದಲ್ಲೇ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

  ಕಳೆದ ವರ್ಷ ವಿಶ್ವದಲ್ಲಿ ಹತ್ಯೆಯಾದ ಮಹಿಳೆಯರ ಪ್ರಮಾಣ ಸುಮಾರು 87 ಸಾವಿರವಾಗಿದ್ದು, ಇದರಲ್ಲಿ ಶೇ.58ರಷ್ಟು ಅಥವಾ ಸುಮಾರು 50 ಸಾವಿರದಷ್ಟು ಮಹಿಳೆಯರು ನಿಕಟ ಸಹಭಾಗಿಯಿಂದ ಅಥವಾ ಕುಟುಂಬದ ಸದಸ್ಯರಿಂದಲೇ ಹತರಾಗುತ್ತಿದ್ದಾರೆ. ಪ್ರತೀ ಆರುಗಂಟೆಗೆ ಒಬ್ಬ ಮಹಿಳೆ ತಮ್ಮ ಪರಿಚಿತರಿಂದಲೇ ಹತ್ಯೆಯಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ‘ಡ್ರಗ್ಸ್ ಆ್ಯಂಡ್ ಕ್ರೈಮ್’ ಕಚೇರಿ(ಯುಎನ್‌ಒಡಿಸಿ) ಪ್ರಕಟಿಸಿರುವ ಹೊಸ ಸಂಶೋಧನಾ ವರದಿ ತಿಳಿಸಿದೆ.

  2016ರಲ್ಲಿ ಭಾರತದಲ್ಲಿ ಮಹಿಳೆಯರ ಹತ್ಯೆಯ ಪ್ರಮಾಣ ಶೇ.2.8ರಷ್ಟಿದ್ದರೆ, ಕೀನ್ಯಾದಲ್ಲಿ ಶೇ.2.6, ತಾಂಝಾನಿಯಾ ಶೇ.2.5, ಅಝರ್‌ಬೈಜಾನ್ ಶೇ.1.8, ಜೋರ್ಡಾನ್ ಶೇ.0.8, ತಜಕಿಸ್ತಾನ್ ಶೇ.0.4 ಆಗಿತ್ತು. 1995ರಿಂದ 2013ರವರೆಗಿನ ಅಂಕಿಅಂಶದ ಪ್ರಕಾರ , ಭಾರತದಲ್ಲಿ 15ರಿಂದ 49ರವರೆಗಿನ ವಯೋಮಾನದ ಶೇ. 33.5ರಷ್ಟು ಮಹಿಳೆಯರು ತಮ್ಮ ಜೀವಮಾನದಲ್ಲಿ ಕನಿಷ್ಟ ಒಂದು ಬಾರಿ, ಶೇ.18.9ರಷ್ಟು ಮಹಿಳೆಯರು ಕಳೆದ 12 ತಿಂಗಳಲ್ಲಿ ದೈಹಿಕ ಹಿಂಸೆಗೆ ಒಳಪಟ್ಟಿದ್ದಾರೆ.

   ಮಹಿಳೆಯರ ವಿರುದ್ಧದ ಹಿಂಸಾಚಾರವನ್ನು ತೊಲಗಿಸುವ ಅಂತರಾಷ್ಟ್ರೀಯ ದಿನಾಚರಣೆಯಂದು ಬಿಡುಗಡೆಗೊಂಡಿರುವ ಈ ವರದಿಯು ಮಹಿಳೆಯರು ಹಾಗೂ ಹುಡುಗಿಯರ ಹತ್ಯೆ ಪ್ರಮಾಣದ ಅಂಕಿಅಂಶ ಹಾಗೂ ಇದು ಮಹಿಳೆಯರ ಪಾತ್ರ ಹಾಗೂ ಸ್ಥಾನಮಾನಕ್ಕೆ ಯಾವ ರೀತಿ ಸಂಬಂಧಿಸಿದೆ ಎಂಬುದರ ವಿಶ್ಲೇಷಣೆಯಾಗಿದ್ದು, ನಿಕಟ ಸಹಭಾಗಿಯ ಕುರಿತು ಹೆಚ್ಚಿನ ಒತ್ತು ನೀಡಲಾಗಿದೆ.

ಭಾರತದಲ್ಲಿ ವರದಕ್ಷಿಣೆಗೆ ಸಂಬಂಧಿಸಿದ ಸಾವಿನ ಪ್ರಕರಣಗಳು ಆತಂಕಕ್ಕೆ ಕಾರಣವಾಗುತ್ತಿದೆ. ಭಾರತದಲ್ಲಿ ವರ್ಷದಲ್ಲಿ ಸಂಭವಿಸುವ ಮಹಿಳೆಯರ ಹತ್ಯೆಯಲ್ಲಿ ಶೇ.40ರಿಂದ 50ರಷ್ಟು ವರದಕ್ಷಿಣೆಗೆ ಸಂಬಂಧಿಸಿ ನಡೆದಿರುವ ಹತ್ಯೆಯಾಗಿದೆ ಎಂದು ನ್ಯಾಷನಲ್ ಕ್ರೈಮ್ ಬ್ಯೂರೋ ತಿಳಿಸಿದೆ. 1961ರಲ್ಲಿ ಭಾರತ ಸರಕಾರ ವರದಕ್ಷಿಣೆಯನ್ನು ನಿಷೇಧಿಸಿ ಕಾನೂನು ಜಾರಿಗೊಳಿಸಿದರೂ ಈ ಪದ್ಧತಿ ದೇಶದಾದ್ಯಂತ ಮುಂದುವರಿದಿದೆ ಮತ್ತು ಮಹಿಳೆಯರ ಸಾವಿನ ಪ್ರಮಾಣದಲ್ಲಿ ವರದಕ್ಷಿಣೆ ಸಾವಿನ ಪ್ರಮಾಣ ಗಮನಾರ್ಹ ಪ್ರಮಾಣದಲ್ಲೇ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

 ಆಫ್ರಿಕಾ, ಏಶ್ಯಾ ಮತ್ತು ಓಶಿಯಾನಾ ದೇಶಗಳಲ್ಲಿ ವಾಸಿಸುತ್ತಿರುವ ಕೆಲವು ಮಹಿಳೆಯರ ಸಾವಿಗೆ ಮಾಟಗಾತಿಯೆಂಬ ಆರೋಪವೂ ಕಾರಣವಾಗಿದೆ. ಇಂತಹ ವಿದ್ಯಮಾನ (ಮಾಟ ಮಾಡುತ್ತಾರೆಂಬ ನಂಬಿಕೆ) ಈಗಲೂ ಅಲ್ಪಪ್ರಮಾಣದಲ್ಲಿ ಅಸ್ತಿತ್ವದಲ್ಲಿದೆ ಎಂಬುದು ಪಪುವ ನ್ಯೂಗಿನಿ ಮತ್ತು ಭಾರತದಿಂದ ಪಡೆದಿರುವ ಮಾಹಿತಿಯಿಂದ ಸ್ಪಷ್ಟವಾಗಿದೆ. ಮಾಹಿತಿಯಲ್ಲಿ ಲಿಂಗ ಸರಾಸರಿಯ ಬಗ್ಗೆ ತಿಳಿಸಿಲ್ಲವಾದರೂ, ಸಂತ್ರಸ್ತೆಯರಲ್ಲಿ ಮಹಿಳೆಯರ ಪ್ರಮಾಣ ಅತ್ಯಧಿಕವಾಗಿರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

     ವಿಶ್ವದಲ್ಲಿ 1 ಲಕ್ಷ ಮಹಿಳೆಯರಲ್ಲಿ 1.3ರಷ್ಟು ಸಂತ್ರಸ್ತರು ನಿಕಟ ಸಂಬಂಧಿಕರು ಅಥವಾ ಕುಟುಂಬದ ಸದಸ್ಯರಿಂದಲೇ ಹತ್ಯೆಗೊಳಗಾಗುತ್ತಾರೆ. ಈ ರೀತಿ ಸಾವಿಗೀಡಾಗುವ ಮಹಿಳೆಯರ ಪ್ರಮಾಣ ಅಮೆರಿಕ ಮತ್ತು ಆಫ್ರಿಕಾದಲ್ಲಿ ಅಧಿಕವಾಗಿದೆ. ಆಫ್ರಿಕಾದಲ್ಲಿ ಈ ಪ್ರಮಾಣ 3.1 ಆಗಿದ್ದರೆ (1 ಲಕ್ಷ ಮಹಿಳೆಯರಲ್ಲಿ) ಅಮೆರಿಕದಲ್ಲಿ ಶೇ.1.6, ಓಶಿಯಾನದಲ್ಲಿ 1.3, ಏಶಿಯಾದಲ್ಲಿ 0.9, ಯುರೋಪ್‌ನಲ್ಲಿ 0.7 ಆಗಿದೆ. ಮಹಿಳೆಯರ ವಿರುದ್ಧದ ಹಿಂಸೆಯನ್ನು ನಿರ್ಮೂಲನೆ ಮಾಡಲು ಕಾನೂನು ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೂ , ಸಂಬಂಧಿಗಳಿಂದ ಅಥವಾ ನಿಕಟ ಸಹಭಾಗಿಗಳಿಂದ ಮಹಿಳೆಯರ ಜೀವಕ್ಕೆ ಅಪಾಯ ಬಾರದಂತೆ ತಡೆಯುವ ಪ್ರಯತ್ನದಲ್ಲಿ ಸ್ಪಷ್ಟವಾದ ಪ್ರಗತಿ ಕಂಡುಬಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಲಿಂಗ ಅಸಮಾನತೆ

  ಲಿಂಗ ಅಸಮಾನತೆ, ನಕಾರಾತ್ಮಕ ಗ್ರಹಿಕೆ ಮತ್ತು ತಾರತಮ್ಯದ ಧೋರಣೆಯಿಂದಾಗಿ ಮಹಿಳೆಯರು ಹೆಚ್ಚಿನ ತೊಂದರೆಗೆ ಸಿಲುಕುತ್ತಾರೆ. ಅಲ್ಲದೆ ನಿಕಟ ಸಹಭಾಗಿ ಅಥವಾ ಕುಟುಂಬದ ಸದಸ್ಯರಿಂದಲೇ ಹತ್ಯೆಯಾಗುವ ಸಂಭವ ಇರುತ್ತದೆ ಎಂದು ಯುಎನ್‌ಒಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಯೂರಿ ಫೆಡೊಟೊವ್ ಹೇಳಿದ್ದಾರೆ. ಲಿಂಗ ಸಂಬಂಧಿತ ಕೊಲೆಗಳನ್ನು ಕೊನೆಗೊಳಿಸಲು ಉದ್ದೇಶಿತ ಅಪರಾಧ ಕಾನೂನಿನ ಅಗತ್ಯವಿದೆ.. 2018ರಲ್ಲಿ ಮಹಿಳೆಯರ ವಿರುದ್ಧದ ಹಿಂಸಾಚಾರ ಪ್ರಕರಣ ವನ್ನು ನಿರ್ಮೂಲನೆ ಮಾಡಲು ಹಾಗೂ ತಿಳುವಳಿಕೆ ಹೆಚ್ಚಬೇಕು ಎಂಬ ಉದ್ದೇಶದಿಂದ ಈ ವರದಿ ಬಿಡುಗಡೆಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News