ಮರಾಠರಿಗೆ ಮೀಸಲಾತಿ ನೀಡುವುದಾದರೆ ಮುಸ್ಲಿಮರಿಗೆ ಏಕಿಲ್ಲ: ಉವೈಸಿ

Update: 2018-11-30 04:16 GMT

ಹೈದರಾಬಾದ್, ನ. 30: ಮಹಾರಾಷ್ಟ್ರದಲ್ಲಿ ಮರಾಠರಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಶೇಕಡ 16 ಮೀಸಲಾತಿ ನೀಡುವ ಮಸೂದೆಯನ್ನು ಅಲ್ಲಿನ ವಿಧಾನಸಭೆ ಆಂಗೀಕರಿಸಿದ ಬೆನ್ನಲ್ಲೇ, ಮೀಸಲಾತಿಯಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಕೋಟಾ ನಿಗದಿಪಡಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಒತ್ತಾಯಿಸಿದ್ದಾರೆ.

"ಮುಸ್ಲಿಮರು ಕೂಡಾ ಹಲವು ತಲೆಮಾರುಗಳಿಂದ ಬಡತನದಲ್ಲಿ ಬದುಕುತ್ತಿದ್ದು, ಮೀಸಲಾತಿ ಸೌಲಭ್ಯಕ್ಕೆ ಅವರೂ ಅರ್ಹರು" ಎಂದು ಆಲ್ ಇಂಡಿಯಾ ಮಜ್ಲೀಸ್ ಇ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಭಿಪ್ರಾಯಪಟ್ಟಿದ್ದಾರೆ.

ಹಿಂದುಳಿದ ಮುಸ್ಲಿಮರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ನ್ಯಾಯಬದ್ಧ ಪಾಲು ನಿರಾಕರಿಸುವುದು ದೊಡ್ಡ ಅನ್ಯಾಯ ಎಂದು ಹೈದರಾಬಾದ್ ಸಂಸದರಾದ ಉವೈಸಿ ಟ್ವೀಟ್‌ನಲ್ಲಿ ಪ್ರತಿಪಾದಿಸಿದ್ದಾರೆ. "ಮುಸ್ಲಿಮರಲ್ಲಿಯೂ ತಲೆಮಾರುಗಳಿಂದ ಬಡತನದ ವರ್ತುಲದಲ್ಲೇ ಜೀವಿಸುತ್ತಾ ಬಂದಿದ್ದಾರೆ ಎಂದು ನಾನು ಪ್ರತಿಪಾದಿಸುತ್ತಲೇ ಬಂದಿದ್ದೇನೆ. ಈ ವರ್ತುಲದಿಂದ ಹೊರಬರಲು ಮೀಸಲಾತಿ ಪ್ರಮುಖ ಸಾಧನ" ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಪಾಟಿದಾರ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಹೇಳಿಕೆ ನೀಡಿ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಮರಾಠರಿಗೆ ಮೀಸಲಾತಿ ಕಲ್ಪಿಸಬಹುದು ಎಂದಾದರೆ, ಗುಜರಾತ್ ಬಿಜೆಪಿ ಸರ್ಕಾರ, ಇಲ್ಲಿನ ಪಾಟಿದಾರ ಸಮಾಜಕ್ಕೆ ಮೀಸಲಾತಿ ಸೌಲಭ್ಯವನ್ನು ಏಕೆ ಕಲ್ಪಿಸಬಾರದು ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದ ಸಮೀಕ್ಷೆ ನಡೆಸಿದ ಮಾದರಿಯಲ್ಲೇ ಗುಜರಾತ್ ಬಿಜೆಪಿ ಸರ್ಕಾರ ಕೂಡಾ, ಇಲ್ಲಿ ಪಾಟೀದಾರ ಸಮುದಾಯದ ಸಮೀಕ್ಷೆ ನಡೆಸಲಿ ಎಂದು ಅವರು ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News