ಮರಾಠವಾಡ ವಿವಿ ಮರುನಾಮಕರಣ ಚಳವಳಿ ಹಿಂಸೆಗೆ ಸಾಕ್ಷಿಯಾದ ಆ ದಿನಗಳು...

Update: 2018-11-30 18:40 GMT

12 ವಿಶ್ವವಿದ್ಯಾನಿಲಯಗಳ ಹೆಸರುಗಳನ್ನು ಬದಲಾಯಿಸಲಾಯಿತು. ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಹೆಸರನ್ನು ಬಿ.ಎನ್. ಚಕ್ರವರ್ತಿ ವಿವಿ ಎಂದು ಮಾರ್ಪಡಿಸಲಾಯಿತು. ಕುರುಕ್ಷೇತ್ರವು ಮಹಾಭಾರತ ಯುದ್ಧ ನಡೆದ ರಣರಂಗದ ಹೆಸರಾಗಿದೆ. ಈ ಹೆಸರಿನ ಬದಲಾವಣೆಯು ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತಂದಿರಲಿಲ್ಲ. ಆದರೆ, ಭಾರತದ ಸಂವಿಧಾನ ರಚಿಸಿದಾತನ ಹೆಸರನ್ನು ವಿವಿಗೆ ಇಡುವುದಕ್ಕೆ ಮರಾಠವಾಡದ ಊಳಿಗಮಾನ್ಯ ಮನೋಭಾವನೆಗೆ ಸಮಸ್ಯೆಯನ್ನೊಡ್ಡಿತು.

ಮರಾಠವಾಡ ವಿವಿ ಮರುನಾಮಕರಣ ಚಳವಳಿಯು ಇದೀಗ ನೆನಪಿನಿಂದ ಜಾರಿದೆ. ನೂರಾರು ಸುಶಿಕ್ಷಿತ ಪುರುಷರು ಹಾಗೂ ಮಹಿಳೆಯರು ಅದಕ್ಕಾಗಿ ತಮ್ಮ ರಕ್ತವನ್ನು ಹರಿಸಿದ್ದಾರೆ.

 ಬಾಬಾಸಾಹೇಬ್ ಅವರ ಜೀವಿತಾವಧಿಯಲ್ಲಿ ದಲಿತ ಚಳವಳಿಯು ಮಹಾಡ್ ಚಾವ್ದಾರ್ ಟ್ಯಾಂಕ್ ಸತ್ಯಾಗ್ರಹದಂತಹ ಪ್ರಸಂಗಗಳಿಗೆ ಸಾಕ್ಷಿಯಾಗಿದೆ. ಮರಾಠವಾಡ ವಿಶ್ವವಿದ್ಯಾನಿಲಯವನ್ನು ಬಾಬಾಸಾಹೇಬ್ ಅಂಬೇಡ್ಕರ್ ವಿವಿಯೆಂದು ಪುನರ್‌ನಾಮಕರಣಗೊಳಿಸುವುದು ದಲಿತರಿಗೆ ಹೋರಾಡಲು ಅವರು ಬಿಟ್ಟುಹೋಗಿರುವ ಪ್ರಮುಖ ವಿಷಯಗಳಲ್ಲೊಂದಾಗಿದೆ.

ಶರದ್‌ಪವಾರ್ ನೇತೃತ್ವದ ಪ್ರಗತಿಪರ ಪ್ರಜಾಸತ್ತಾತ್ಮಕ ರಂಗವು ಅಧಿಕಾರಕ್ಕೇರಿದ ಬಳಿಕ ಮರಾಠವಾಡ ವಿಶ್ವವಿದ್ಯಾನಿಲಯದ ಹೆಸರನ್ನು ಮರುನಾಮಕರಣಗೊಳಿಸಬೇಕೆಂಬ ಬೇಡಿಕೆಯನ್ನು 1974ರಲ್ಲಿ ಮೊದಲ ಬಾರಿಗೆ ಮುಂದಿಡಲಾಯಿತು. ವಿವಿ ಹೆಸರನ್ನು ಬದಲಾಯಿಸಲು ವಿಧಾನಪರಿಷತ್‌ನ ಉಭಯಸದನಗಳಲ್ಲಿ ನಿರ್ಣಯವೊಂದನ್ನು ಜಾರಿಗೆ ತರಲಾಯಿತು.

ಈ ಬಗ್ಗೆ ಉಭಯಸದನಗಳಲ್ಲಿ ನಿರ್ಣಯಗಳನ್ನು ಅಂಗೀಕರಿಸಲಾಯಿತು ಹಾಗೂ ರೇಡಿಯೋದಲ್ಲಿ ಸುದ್ದಿ ಪ್ರಕಟಿಸಲಾಯಿತು. ಮರಾಠವಾಡವು ಹೊತ್ತಿ ಉರಿಯತೊಡಗಿತು. ಇಡೀ ಸಮಾಜವು ವಿವಿಯ ಹೆಸರು ಬದಲಾವಣೆಯನ್ನು ಬೆಂಬಲಿಸಿದವರ ಹಾಗೂ ಅದನ್ನು ವಿರೋಧಿಸಿದವರ ನಡುವೆ ವಿಭಜಿಸಲ್ಪಟ್ಟಿತು. ಅಂತಿಮವಾಗಿ ವಿವಿಯ ಹೆಸರನ್ನು 1994ರಲ್ಲಿ ಬದಲಾಯಿಸಲಾಯಿತು. ಅಂತೂ ಹತ್ತಿರಹತ್ತಿರ 20 ವರ್ಷಗಳ ಕಾಲ ನಡೆದ ಈ ಹೋರಾಟವು ಕೊನೆಗೊಂಡಿತು. ಈ ಚಳವಳಿಯಲ್ಲಿ ಶಾಮೀಲಾದ ಹಲವಾರು ದಲಿತ ಯುವಜನರಂತೆ ಈ ಎರಡು ದಶಕಗಳು ನನ್ನ ಬದುಕಿಗೆ ನಿರ್ದಿಷ್ಟ ರೂಪವನ್ನು ನೀಡಿದವು. ಮರುನಾಮಕರಣ ಚಳವಳಿಯಲ್ಲಿ ನನ್ನ ಸಹಭಾಗಿತ್ವದಿಂದ ನನ್ನ ಭವಿಷ್ಯದ ಖಾಸಗಿ ಹಾಗೂ ಸಾಮಾಜಿಕ ಹೋರಾಟಗಳು ರೂಪುಗೊಂಡವು.

 ಮರಾಠವಾಡ ವಿವಿಗೆ ಬಾಬಾಸಾಹೇಬ್ ಅಂಬೇಡ್ಕರ್ ವಿವಿ ಎಂಬುದಾಗಿ ಮರು ನಾಮಕರಣ ಮಾಡುವ ನಿರ್ಣಯವನ್ನು ಅಂಗೀಕರಿಸುವ ಮೊದಲು ಪ್ರಗತಿಪರ ಪ್ರಜಾತಾಂತ್ರಿಕ ಸರಕಾರವು, ಹೋರಾಟದ ಹಿನ್ನೆಲೆಯನ್ನು ತಿಳಿದುಕೊಳ್ಳಲು ಕೆಲವೊಂದು ಪ್ರಯತ್ನವನ್ನು ಮಾಡಿತು. ಆ ಸಮಯದಲ್ಲಿ ಮಿಲಿಂದ್ ಕಾಲೇಜ್‌ನ ವಿದ್ಯಾರ್ಥಿಗಳು ಮರಾಠವಾಡ ವಿವಿಯ ವ್ಯಾಪ್ತಿಗೆ ಒಳಪಟ್ಟಿದ್ದರು. ವಿವಿಯ ಮಂಡಳಿಯ ಸಭೆ ನಡೆದಾಗಲೆಲ್ಲಾ 50ರಿಂದ 60ರಷ್ಟು ವಿದ್ಯಾರ್ಥಿಗಳು ಹೆಸರು ಬದಲಾವಣೆಗಾಗಿ ಪಾದಯಾತ್ರೆ ನಡೆಸಿದರು. ಮಂಡಳಿಯ ಮುಂದೆಯೇ ಅವರು ಭಾಷಣಗಳನ್ನು ಮಾಡಿದರು. ಒಂದು ಸಭೆಯಲ್ಲಿ, ‘‘ವಿಶ್ವವಿದ್ಯಾನಿಲಯವೊಂದಕ್ಕೆ ಪ್ಯಾಟ್ರಿಸ್ ಲುಮುಂಬಾ ಅವರ ಹೆಸರನ್ನು ಇಡಬಹುದಾದರೆ, ಮರಾಠವಾಡ ವಿಶ್ವವಿದ್ಯಾನಿಲಯಕ್ಕೆ ಯಾಕೆ ಅಂಬೇಡ್ಕರ್ ಹೆಸರಿಡಕೂಡದು’’ ಎಂದು ಪ್ರಶ್ನಿಸಲಾಗಿತ್ತು. ಇದರಿಂದ ನಾವು ಏನನ್ನು ಕಲಿಯಲಿದ್ದೇವೆ. ಆರಂಭದಲ್ಲಿ ಹೆಸರು ಬದಲಾವಣೆಗೆ ನೈಜವಾದ ಪ್ರಬಲ ವಿರೋಧವಿರಲಿಲ್ಲ. ತದನಂತರ ಮುಂಬೈಯಲ್ಲಿ ದಲಿತ ಪ್ಯಾಂಥರ್‌ಗಳ ಸಭೆಯೊಂದು ನಡೆಯಿತು. ಈ ಸಭೆಯಲ್ಲಿ, ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಲಾಯಿತು. ಆ ಸಮಯದಲ್ಲಿ ನಾನು ಬೀಡ್‌ನಲ್ಲಿ ಕಲಿಯುತ್ತಿದ್ದೆ. ಪ್ಯಾಂಥರ್ಸ್ ಕಾರ್ಯಕರ್ತರು ವಿದ್ಯಾರ್ಥಿಗಳ ನಡುವೆ ಪ್ರಬಲವಾದ ಜಾಲವನ್ನು ಹೊಂದಿದ್ದರು. ಹೀಗೆ ಮುಂಬೈಯಲ್ಲಿ ಕೈಗೊಳ್ಳಲಾದ ನಿರ್ಣಯವು ಕೇವಲ ಮುಂಬೈಗೆ ಸೀಮಿತವಾಗಿರಲಿಲ್ಲ. ಈಗಿನಂತೆ ಆಗ ಮೊಬೈಲ್ ಫೋನ್‌ಗಳಿರಲಿಲ್ಲ. ಆದರೆ ತಮ್ಮ ಧ್ಯೇಯದ ಬಗ್ಗೆ ತೀವ್ರ ಬದ್ಧತೆ ಹಾಗೂ ಉತ್ಸಾಹವನ್ನು ಹೊಂದಿದ್ದರು. ಅನ್ಯಾಯದ ವಿರುದ್ಧ ಪ್ರತಿಭಟನೆಯು ಆಗ ರಾಜ್ಯದಾದ್ಯಂತ ಪ್ರತಿಧ್ವನಿಸಿತ್ತು. ದಲಿತರ ಮಟ್ಟಿಗೆ, ಕಾಲೇಜ್ ಪ್ರವೇಶಿಸಿದ ಮೊದಲ ಅಥವಾ ಎರಡನೆ ತಲೆಮಾರು ಇದಾಗಿತ್ತು. ತುರ್ತು ಪರಿಸ್ಥಿತಿ, ಸಂಪೂರ್ಣ ಕ್ರಾಂತಿಗಾಗಿ ಜಯಪ್ರಕಾಶ್ ನಾರಾಯಣ್ ಅವರ ಕರೆ, ವಿನೋಬಾ ಭಾವೆ ಅವರ ಭೂದಾನ ಚಳವಳಿ, ನಕ್ಸಲರ ಉದಯ... ಇವೆಲ್ಲವೂ ಸುದ್ದಿಯಲ್ಲಿದ್ದವು. ನಾನು ಕೂಡಾ ಪ್ಯಾಂಥರ್ಸ್ ಚಳವಳಿಯಲ್ಲಿ ಸಕ್ರಿಯನಾಗಿದ್ದೆ. ಈ ಕಾವೇರಿದ ವಾತಾವರಣದಲ್ಲಿ ಯಾವುದೇ ಸಂವೇದನಾಶೀಲ ಹಾಗೂ ಯೋಚನಾಶೀಲ ಯುವಜನರು ತಟಸ್ಥರಾಗಿ ಉಳಿಯಲು ಸಾಧ್ಯವಿರಲಿಲ್ಲ.

ಹೀಗೆ, ನನಗೆ ತಿಳಿಯದಂತೆಯೇ ನಾನು ಮರುನಾಮಕರಣ ಚಳವಳಿಯ ಬೆಂಬಲಿಗನಾಗಿ ಬಿಟ್ಟೆ. ಸಾಮಾಜಿಕ ನಾಯಕತ್ವದಡಿ ಈ ವಿವಾದವು ವಿಭಜಿಸಲ್ಪಟ್ಟಿತ್ತು. ಹಳೆಯ ಸ್ವಾತಂತ್ರ ಹೋರಾಟಗಾರ ಗೋವಿಂದಭಾಯಿ ಶ್ರೋ ಹಾಗೂ ಮರಾಠವಾಡ ದಿನಪತ್ರಿಕೆಯ ಸಂಪಾದಕ ಆನಂತ್‌ರಾವ್ ಭಲೆರಾವ್ ಅವರು ಬದಲಾವಣೆಯನ್ನು ವಿರೋಧಿಸಿದ್ದರು. ಎಸ್.ಎಂ. ಜೋಶಿಯವರಂತಹ ನಾಯಕರು ಬದಲಾವಣೆಯ ಪರವಾಗಿದ್ದರು. ಕೆಲವು ಸಮಾಜವಾದಿಗಳಿಗೆ ದಲಿತ ಚಳವಳಿಯ ಬಗ್ಗೆ ಅನುಕಂಪವಿತ್ತಾದರೂ, ತಮ್ಮ ಹಕ್ಕುಗಳಿಗಾಗಿ ಆಕ್ರಮಣಕಾರಿಯಾಗಿ ವರ್ತಿಸುವುದಕ್ಕೆ ಅವರ ಬೆಂಬಲವಿರಲಿಲ್ಲ. ಇತರ ಜನಸಾಮಾನ್ಯರ ಹಾಗೆ, ಅವರು ದಲಿತರ ಪರವಾಗಿದ್ದರು. ಆದರೆ ದಲಿತ ಪ್ಯಾಂಥರ್ಸ್‌ನಂತಹ ಸಂಘಟನೆಗಳು ಈ ಹೋರಾಟವನ್ನು ಬೆಂಬಲಿಸುವುದೆಂದು ಅವರು ಯೋಚಿಸಿರಲಿಕ್ಕಿಲ್ಲ. ದಲಿತರು ಇಡೀ ಚಳವಳಿಯನ್ನು ತಾವೇ ಅಧೀನದಲ್ಲಿಟ್ಟುಕೊಂಡಿರುವುದಕ್ಕೆ ಅವರ ವಿರೋಧವಿತ್ತು.

ಮರುನಾಮಕರಣ ವಿರೋಧಿ ಗುಂಪಿನಲ್ಲಿ ಇನ್ನೊಂದು ಬಣವಿತ್ತು. ಭಾರತಕ್ಕೆ ಸ್ವಾತಂತ್ರ ದೊರೆತ ಬಳಿಕ, ಕೆಲವು ಅರಸೊತ್ತಿಗೆಯ ರಾಜ್ಯಗಳು ನೂತನ ವ್ಯವಸ್ಥೆಯ ಬಗ್ಗೆ ವಿರೋಧವನ್ನು ಹೊಂದಿದ್ದವು. ಮರಾಠವಾಡವು ನಿಜಾಮರ ಪ್ರಾಂತದ ಭಾಗವಾಗಿತ್ತು ಹಾಗೂ ಸ್ವಾತಂತ್ರವನ್ನು ಪಡೆಯಲು ವಿಭಿನ್ನವಾದ ಹೋರಾಟವನ್ನು ಅವು ನಡೆಸಬೇಕಿತ್ತು.

ಮರಾಠವಾಡದ ಸ್ವಾತಂತ್ರಕ್ಕಾಗಿ ಅಂಬೇಡ್ಕರ್ ಎಂದೂ ಹೋರಾಡಿರ ಲಿಲ್ಲವೆಂಬ ವಾದವನ್ನು ಕೂಡಾ ಈ ಸಂದರ್ಭದಲ್ಲಿ ಮುಂದಿಡಲಾಗಿತ್ತು. ಅಂಬೇಡ್ಕರ್ ಅವರು ಸದಾ ನಿಜಾಮರ ಪರವಾಗಿದ್ದರು. ಹೀಗಾಗಿ ಅವರ ಹೆಸರನ್ನು ಮರಾಠವಾಡ ವಿವಿಗೆ ಬಳಸಕೂಡದೆಂದು ವಾದಿಸಲಾಯಿತಾದರೂ, ಅದಕ್ಕೆ ಯಾವುದೇ ವೌಲ್ಯವಿರಲಿಲ್ಲ.

ವಾಸ್ತವಿಕವಾಗಿ ಬಾಬಾ ಸಾಹೇಬ್ ಅವರು ಸದಾ, ಸ್ವತಂತ್ರ ಹೈದರಾಬಾದ್‌ನ ಚಿಂತನೆಯನ್ನು ವಿರೋಧಿಸಿದ್ದರು. ನಿಜಾಮರನ್ನು ಬೆಂಬಲಿಸಿದ್ದರಿಂದಾಗಿ ಪ್ರಯೋಜನ ಪಡೆದ ಹಲವಾರು ಬ್ರಾಹ್ಮಣರಿದ್ದರು. ಹಾಗಾದರೆ ಯಾಕೆ ಅವರಲ್ಲಿ ಯಾರನ್ನು ಕೂಡಾ ಸ್ವಾತಂತ್ರ ಹೋರಾಟದ ದೇಶದ್ರೋಹಿಗಳೆಂದು ಪರಿಗಣಿಸಲಾಗುತ್ತಿಲ್ಲ?. ಹೆಸರು ಬದಲಾವಣೆಯನ್ನು ವಿರೋಧಿಸಿದವರು ಯಾಕೆ ಇಂತಹ ದುರ್ಬಲ ವಾದಗಳನ್ನು ಮುಂದಿರಿಸಿದರು. ರಾಜ್ಯ ಸರಕಾರ ಕೂಡಾ ಈ ವಿಷಯವನ್ನು ಜ್ವಲಂತ ಸಮಸ್ಯೆಯಾಗಿರಿಸಿತು. ಈ ಎಲ್ಲಾ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡಲ್ಲಿ ಜಾತಿಯ ಸಮಸ್ಯೆಯನ್ನು ಕಡೆಗಣಿಸಬಹುದಾಗಿತ್ತು. ಜಾತಿವಾದಿಗಳು ಆಗ ಅಖಾಡಕ್ಕಿಳಿದರು. ತಮ್ಮ ನಾಯಕರ ಜನ್ಮದಿನವನ್ನು ಹುಟ್ಟುಹಬ್ಬವನ್ನು ಆಚರಿಸಿದ, ಉತ್ತಮಬಟ್ಟೆ ಬರೆಗಳನ್ನು ಧರಿಸಲು ನಿರಾಕರಿಸಿದ ಹಾಗೂ ಠೀವಿಯಿಂದ ನಡೆಯುತ್ತಿದ್ದ ದಲಿತರನ್ನು ಗುರುತಿಸಿ, ಹತ್ಯೆಗೈಯಲಾಯಿತು. ಮೇಲ್ಜಾತಿಯ ವಿದ್ಯಾರ್ಥಿಗಳಲ್ಲಿಯೂ ದಲಿತ ವಿರೋಧಿ ಭಾವನೆಗಳನ್ನು ತುಂಬಲಾಯಿತು. ಅವರ ಸಂಘಟನೆಗಳು, ಉಪಕುಲಪತಿಯವರನ್ನು ಭೇಟಿಯಾಗಿ ವಿಶ್ವವಿದ್ಯಾನಿಲಯದ ಹೆಸರನ್ನು ಬದಲಾಯಿಸಕೂಡದೆಂದು ಕೋರಿ ಮನವಿಯನ್ನು ಸಲ್ಲಿಸಿದವು.

 ವಾಸ್ತವಿಕವಾಗಿ, ಈ ಹಂತದವರೆಗೆ 12 ವಿಶ್ವವಿದ್ಯಾನಿಲಯಗಳ ಹೆಸರುಗಳನ್ನು ಬದಲಾಯಿಸಲಾಯಿತು. ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಹೆಸರನ್ನು ಬಿ.ಎನ್.ಚಕ್ರವರ್ತಿ ವಿವಿ ಎಂದು ಮಾರ್ಪಡಿಸಲಾಯಿತು. ಕುರುಕ್ಷೇತ್ರವು ಮಹಾಭಾರತ ಯುದ್ಧ ನಡೆದ ರಣರಂಗದ ಹೆಸರಾಗಿದೆ. ಈ ಹೆಸರಿನ ಬದಲಾವಣೆಯು ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತಂದಿರಲಿಲ್ಲ. ಆದರೆ, ಭಾರತದ ಸಂವಿಧಾನ ರಚಿಸಿದಾತನ ಹೆಸರನ್ನು ವಿವಿಗೆ ಇಡುವುದಕ್ಕೆ ಮರಾಠವಾಡದ ಊಳಿಗಮಾನ್ಯ ಮನೋಭಾವನೆಗೆ ಸಮಸ್ಯೆಯನ್ನೊಡ್ಡಿತು. ದಲಿತ ಪ್ಯಾಂಥರ್ಸ್ ಮಹಾಡ್ ಚಾವ್ದಾರ್ ಟ್ಯಾಂಕ್ ಸತ್ಯಾಗ್ರಹವನ್ನು ಆಚರಿಸಲು ನಿರ್ಧರಿಸಿದರು.

  ಆಗಿನ ಮುಖ್ಯಮಂತ್ರಿಯಾಗಿದ್ದ ವಸಂತದಾದ ಪಾಟೀಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ಯಾಂಥರ್ಸ್ ಅವರಿಗೆ ಬೇಡಿಕೆಗಳ ಪಟ್ಟಿಯನ್ನೇ ಅರ್ಪಿಸಿತು. ಮರಾಠವಾಡ ವಿವಿಯ ಹೆಸರು ಬದಲಾವಣೆ ಅವುಗಳಲ್ಲೊಂದಾಗಿದೆ. ಈ ಬೇಡಿಕೆಗೆ ಮುಖ್ಯಮಂತ್ರಿ ಶರದ್‌ಪವಾರ್ ತಾತ್ವಿಕ ಒಪ್ಪಿಗೆಯನ್ನು ನೀಡಿದರು. ಮಾರನೆಯ ದಿನವೇ ದಲಿತರ ಮನೆಗಳನ್ನು ಸುಟ್ಟುಹಾಕಲಾಯಿತು. ಆನಂತರ ಒಂದರ ಬೆನ್ನಹಿಂದೆ ಒಂದರಂತೆ ಮೋರ್ಚಾಗಳೇ ನಡೆದವು. ಶಿವಸೇನೆಯು ಮರುನಾಮಕರಣದ ವಿರುದ್ಧವಾಗಿತ್ತು. ವಿದ್ಯಾರ್ಥಿಗಳು, ಅಧ್ಯಾಪಕರು, ನ್ಯಾಯವಾದಿಗಳು, ವೈದ್ಯರು, ಗ್ರಾಮಸ್ಥರು ಎಲ್ಲರೂ ಎರಡು ಗುಂಪುಗಳಾಗಿ ವಿಭಜಿಸಲ್ಪಟ್ಟರು.

 ಮರುನಾಮಕರಣದ ವಿರುದ್ಧ ಭುಗಿಲೆದ್ದ ಹಿಂಸಾಚಾರದಲ್ಲಿ ದಲಿತರ ಮಹಾರ್‌ಗಳನ್ನೇ ಗುರಿಯಾಗಿರಿಸಿಕೊಳ್ಳಲಾಗಿತ್ತು. ಮಹಾರ್ ಸಮುದಾಯದ ನೂರಾರು ಜನರ ಮನೆಗಳನ್ನು ಸುಟ್ಟುಹಾಕಲಾಯಿತು. ಬಹುತೇಕ ಗ್ರಾಮಗಳಲ್ಲಿ ಮಹಾರ್‌ಗಳು ಹಾಗೂ ಮಾಂಗ್‌ಗಳು ಅಕ್ಕಪಕ್ಕದಲ್ಲಿ ವಾಸವಾಗಿದ್ದರು. ಆದರೆ ಮಹಾರ್‌ಗಳ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿಗಳೇ ತಾವು ಸುಡಲ್ಪಡುವುದರಿಂದ ರಕ್ಷಿಸಿಕೊಳ್ಳಲು ಮಾಂಗ್‌ಗಳ ಮನೆಗೆ ತೆರಳಿದರು. ಒಂದು ವೇಳೆ ಅದು ಹಠಾತ್ತನೆ ಭುಗಿಲೆದ್ದ ಗಲಭೆಯಾಗಿದ್ದರೆ, ಮಾಂಗ್‌ಗಳ ಮನೆ ಯಾವುದು?, ಮಹಾರ್‌ಗಳ ಮನೆ ಯಾವುದು ಹಾಗೂ ಯಾವುದಲ್ಲವೆಂದು ಗಲಭೆಕೋರರಿಗೆ ಹೇಗೆ ಗೊತ್ತಾಗುತ್ತದೆ?. ವಾಸ್ತವಿಕವಾಗಿ ಮೇಲ್ಜಾತಿಗಳಿಗೆ, ಬಂಡಾಯ ಪ್ರವೃತ್ತಿಯ ಮಹಾರ್‌ಗಳು ಬೇಕಾಗಿಲ್ಲ. ಆದರೆ ಅವರು ಕೋತಿ ಕುಣಿಸುವ, ಗದ್ದೆ ಕೆಲಸ ಮಾಡುವ, ದನದ ಕಳೇಬರ ತೆಗೆಯುವ ಕಾಯಕದಲ್ಲಿ ತೊಡಗುವ ಮಾಂಗ್‌ಗಳ ಜೊತೆ ಚೆನ್ನಾಗಿಯೇ ಇದ್ದರು. ಈ ಗಲಭೆಯಿಂದಾಗಿ ಹಲವಾರು ನವ ಬೌದ್ಧರು ತಮ್ಮ ಮನೆಗಳನ್ನು ತೊರೆದು, ಗಡಿಪಾರಾಗಿ ವಾಸಿಸಬೇಕಾಯಿತು. ಆದರೆ ಈ ವಿಭಜನವಾದವನ್ನು ತಿರಸ್ಕರಿಸಿದ ಹಲವಾರು ಮಾಂಗ್ ಯುವಜನರು ತಮ್ಮನ್ನು ಮರುನಾಮಕರಣ ಚಳವಳಿಯಲ್ಲಿ ತೊಡಗಿಸಿಕೊಂಡರು.

ಪೊಚಿರಾಮ್ ಕಾಂಬ್ಳೆ ಎಂಬಾತ ಚಳವಳಿಯಲ್ಲಿ ಅತ್ಯಂತ ಸಕ್ರಿಯನಾದ ಮಾಂಗ್ ಸಮುದಾಯದ ವ್ಯಕ್ತಿಗಳಲ್ಲೊಬ್ಬನಾಗಿದ್ದ. ಗಲಭೆಯಲ್ಲಿ ಆತನನ್ನು ನಿಷ್ಕರುಣೆಯಿಂದ ಹತ್ಯೆಗೈಯಲಾಯಿತು. ಆತ ನಾಂದೇಡ್ ಗ್ರಾಮಕ್ಕೆ ಸೇರಿದವನಾಗಿದ್ದ. ಒಳ್ಳೆಯ ಜೀವನವನ್ನು ನಡೆಸುತ್ತಿದ್ದ ಆತನಿಗೆ ಇಬ್ಬರು ಮಕ್ಕಳು, ನಾಲ್ಕು ಎಕರೆ ಜಮೀನು ಹಾಗೂ ಬ್ಯಾಂಕ್ ನೆರವಿನಿಂದ ಖರೀದಿಸಿದ ಎರಡು ಎತ್ತುಗಳಿದ್ದವು.

ಮಾಂಗ್ ಸಮುದಾಯಕ್ಕೆ ಸೇರಿದವನಾಗಿದ್ದರೂ ಅಂಬೇಡ್ಕರ್ ಜಯಂತಿಯ ಆಚರಣೆಯಲ್ಲಿ ಆತ ಸದಾ ಮುಂಚೂಣಿಯಲ್ಲಿರುತ್ತಿದ್ದ. ಆದರೆ ಇವ್ಯಾವುದೂ ಗ್ರಾಮದ ಮೇಲ್ಜಾತಿಯ ಜನರನ್ನು ತೃಪ್ತಿಪಡಿಸಲಿಲ್ಲ. ಈ ಗ್ರಾಮದ ದಲಿತರು ಸುಸ್ಥಿತಿಯಲ್ಲಿ ಬದುಕುತ್ತಿದ್ದರು. ತಮಗಾಗಿ ಅವರು ಉತ್ತಮ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ವಿಶ್ವವಿದ್ಯಾನಿಲಯದ ಹೆಸರು ಬದಲಾವಣೆಯನ್ನು ಪ್ರಕಟಿಸಿದಾಗ, ಮೇಲ್ಜಾತಿಗಳವರು ತಾವು ದಲಿತರ ಮೇಲೆ ದಾಳಿ ನಡೆಸುವುದಕ್ಕೆ ಅವಕಾಶವಾಗಿ ಬಳಸಿಕೊಂಡರು. ಸುಮಾರು 7:00 ಗಂಟೆಯ ಹೊತ್ತಿಗೆ 1,500ರಷ್ಟು ಮೇಲ್ಜಾತಿಗಳವರು ಒಟ್ಟಾಗಿ ದಲಿತರ ಮೇಲೆ ದಾಳಿ ನಡೆಸಿದರು. ಅವರು ಮನೆಗಳನ್ನು ಕೇವಲ ಸುಟ್ಟುಹಾಕಿದ್ದಲ್ಲದೆ, ಬಾಂಬ್‌ಗಳನ್ನು ಎಸೆದು ನಾಶಪಡಿಸಿದರು. ದಲಿತರು ಜೀವಭಯದಿಂದ ದಿಕ್ಕಾಪಾಲಾಗಿ ಓಡಿದರು.

ಆನಂತರ ನೂರು ಅಥವಾ 150ರಷ್ಟಿದ್ದ ಗುಂಪೊಂದು ಪೊಚಿರಾಮ್ ಕಾಂಬ್ಳೆಯನ್ನು ಬೆನ್ನಟ್ಟ ತೊಡಗಿತು. ಆಗಲೇ ಅರ್ಧಶವದಂತಾಗಿದ್ದ ಪೊಚಿರಾಮ್‌ಗೆ, ಆತ ಜೈಭೀಮ್ ಎಂಬುದಾಗಿ ಹೇಳುವುದನ್ನು ನಿಲ್ಲಿಸಿದಲ್ಲಿ, ಆತನನ್ನು ಬಿಟ್ಟುಬಿಡುವುದಾಗಿ ತಿಳಿಸಿತು. ಅದಕ್ಕೆ ಪೊಚಿರಾಮ್ ನಿರಾಕರಿಸಿದ. ಆತನ ಕೈಗಳನ್ನು ಹಾಗೂ ಕಾಲುಗಳನ್ನು ಒಟ್ಟಾಗಿ ಕಟ್ಟಿಹಾಕಲಾಯಿತು.

ಕಟ್ಟಿಗೆಯನ್ನು ರಾಶಿ ಮಾಡಿ ಬೆಂಕಿ ಹಚ್ಚಿದ ಗುಂಪು, ಆತನನ್ನು ಅದರಲ್ಲಿ ಜೀವಂತವಾಗಿ ದಹಿಸಿತು. ಅವರೊಳಗಿದ್ದ ಜಾತೀಯತೆಯ ರಾಕ್ಷಸ ಅಷ್ಟಕ್ಕೇ ತೃಪ್ತನಾಗಲಿಲ್ಲ. ಗ್ರಾಮಕ್ಕೆ ಮರಳಿದ ಗುಂಪು, ದೇಗುಲದಲ್ಲಿ ಪೂಜೆಯನ್ನು ಸಲ್ಲಿಸಿತು. ಈ ಬೀಭತ್ಸ ಕೃತ್ಯವನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆಯೆಂಬಂತೆ ಅವರು ಗ್ರಾಮದಲ್ಲಿ ಪ್ರಸಾದವನ್ನು ವಿತರಿಸಿದರು. ಈ ಹತ್ಯಾಕಾಂಡ ಸುಮಾರು 12 ತಾಸುಗಳ ಬಳಿಕ ಕೊನೆಗೊಂಡಿತು. ಆದಾಗ್ಯೂ, ಪೊಚಿರಾಮ್‌ನ ಕೊಲೆ ಘಟನೆಯನ್ನು ಒಂದೇ ಒಂದು ದಿನಪತ್ರಿಕೆ ಮುದ್ರಿಸಲೇ ಇಲ್ಲ. ಸುದ್ದಿಯು ಪತ್ರಿಕೆಗಳಲ್ಲಿ ಪ್ರಕಟವಾದಾಗ, ಆತನಿಗೆ ಕಳಂಕ ಹಚ್ಚಲು ಸುಳ್ಳುಗಳನ್ನು ಹೇಳಲಾಯಿತು. ಅತ್ಯಾಚಾರಿ, ಪುಂಡ ಹಾಗೂ ಕ್ರಿಮಿನಲ್ ಎಂಬ ಹಣೆಪಟ್ಟಯನ್ನು ಆತನಿಗೆ ಕಟ್ಟಲಾಯಿತು. ದಲಿತರ ಸಿಮೆಂಟಿನ ಮನೆಗಳನ್ನು ನಾಶಪಡಿಸಲಾಗಿತ್ತು. ಆದರೆ ದಿನಪತ್ರಿಕೆಗಳು ಮಾತ್ರ ಕೇವಲ ನಾಲ್ಕು ಗುಡಿಸಲು ಮಾತ್ರ ಸುಟ್ಟುಹೋಗಿರುವುದಾಗಿ ವರದಿ ಮಾಡಿದವು. ಆ ಸಮಯದಲ್ಲಿ ಸುದ್ದಿಪತ್ರಿಕೆಗಳು ದಲಿತ ವಿರೋಧಿಯಾಗಿದ್ದವು. ಘಟನೆಯಲ್ಲಿ ಪೊಚಿರಾಮ್‌ನ ಪುತ್ರ, 20 ವರ್ಷದ ಚಂದರ್ ಎಂಬಾತ ನಾಪತ್ತೆಯಾಗಿದ್ದ. ತನ್ನ ತಂದೆಯ ಕಗ್ಗೊಲೆಯನ್ನು ಆತ ಕಂಡಿದ್ದ. ಕಾನೂನಿನ ಪ್ರಭುತ್ವದ ಬಗ್ಗೆ ಆತನಿಗಿದ್ದ ನಂಬಿಕೆ ನಾಶಗೊಂಡಿತು. ಆನಂತರ ಚಂದರ್ ತನ್ನ ತಂದೆಯ ಸಾವಿನ ಸೇಡು ತೀರಿಸಿಕೊಳ್ಳಲು ಯಾರನ್ನೋ ಕೊಲೆ ಮಾಡಿದ್ದ.

ನಾಂದೇಡ್ ಜಿಲ್ಲೆಯ ಸುಗವ್ ಗ್ರಾಮದಲ್ಲಿ ಜನಾರ್ದನ ಮೆವಾಡೆಯನ್ನು ತುಂಡುತುಂಡಾಗಿ ಕತ್ತರಿಸಲಾಯಿತು. ಆತನೊಬ್ಬ ಕಳ್ಳನಾಗಿದ್ದರಿಂದ ಗ್ರಾಮಸ್ಥರು ಆತನನ್ನು ಕೊಚ್ಚಿಹಾಕಿ ಸಾಯಿಸಿದರೆಂದು ಪತ್ರಿಕೆಗಳಲ್ಲಿ ವರದಿಯಾಯಿತು.

 ಒಂದು ವೇಳೆ ಆತ ಕಳ್ಳನಾಗಿದ್ದರೂ, ಆತನನ್ನು ಯಾಕೆ ಹಿಡಿದು ಪೊಲೀಸರಿಗೆ ಒಪ್ಪಿಸಬಾರದಿತ್ತು ಎಂಬ ಪ್ರಶ್ನೆ ಯಾವುದೇ ವರದಿಗಾರನಿಗೂ ಹೊಳೆಯದಿದ್ದುದು ದುರಂತ. ದಲಿತ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಬಿಂಬಿಸುವಲ್ಲಿ ಸುದ್ದಿಪತ್ರಿಕೆಗಳು ಶಾಮೀಲಾಗಿದ್ದವು ಹಾಗೂ ಮೇಲ್ಜಾತಿಯವರನ್ನು ರಕ್ಷಿಸುವುದು ಅವರ ಕಣ್ಗಾವಲಿನ ನ್ಯಾಯವಾಗಿತ್ತು.

ಮರಾಠವಾಡದ 180 ಗ್ರಾಮಗಳು ಇಂತಹ ಹಿಂಸಾಚಾರಕ್ಕೆ ಸಾಕ್ಷಿಯಾದವು. ಸುಮಾರು ಹತ್ತು ದಿನಗಳ ಕಾಲ ಗಲಭೆ ಭುಗಿಲೆದ್ದಿತ್ತು. ಹದಿನೆಂಟು ಸ್ಥಳಗಳಲ್ಲಿ ಪೊಲೀಸ್ ಗೋಲಿಬಾರ್ ನಡೆದಿತ್ತು. ಸಾವಿರಕ್ಕೂ ಅಧಿಕ ದಲಿತ ಮನೆಗಳು ಬೆಂಕಿಗೆ ಆಹುತಿಯಾದವು. ಆ ಸಮಯದಲ್ಲಿ ನಾನು ಎರಡನೇ ವರ್ಷದ ಬಿಎನಲ್ಲಿ ಕಲಿಯುತ್ತಿದ್ದೆ. ಸುದ್ದಿ ಹರಡುತ್ತಿದ್ದಂತೆಯೇ ನಾನು ಚಡಪಡಿಸತೊಡಗಿದೆ. ನನ್ನ ಮನಸ್ಸು ಆಕ್ರೋಶಭರಿತವಾಗಿತ್ತು. ಆನಂತರ ಸಭೆಗಳು ಹಾಗೂ ಮೋರ್ಚಾಗಳಲ್ಲಿ ಪಾಲ್ಗೊಂಡೆ. ಸರಕಾರಕ್ಕೆ ಅಹವಾಲು ಸಲ್ಲಿಸಲು ನಾನು ಮುಂದೆ ಬರತೊಡಗಿದೆ. ಗ್ರಾಮದಲ್ಲಿ ನಾನು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರಿಂದ ನನ್ನ ತಾಯಿ ನನ್ನ ಬಗ್ಗೆ ಭಯಗೊಂಡಿದ್ದರು. ಪಾಟೀಲ್ ಈಗಾಗಲೇ ನನ್ನ ಶತ್ರುವಾಗಿ ಪರಿಣಮಿಸಿದ್ದ. ಆದರೆ ನನ್ನ ಸ್ವಜಾತಿ ಬಾಂಧವರು ಕೂಡಾ ನನ್ನ ಬಗ್ಗೆ ಹಗೆತನ ಬೆಳೆಸಿಕೊಂಡಿದ್ದರು.

ಕೃಪೆ: scroll.in

Writer - ಏಕನಾಥ್ ಅವಧ್

contributor

Editor - ಏಕನಾಥ್ ಅವಧ್

contributor

Similar News