ದೀಪಕ್ ಮಿಶ್ರಾ ವಿರುದ್ಧ ಅಸಮಾಧಾನ: ನ್ಯಾ. ಜೋಸೆಫ್ ಹೇಳಿದ್ದೇನು ?

Update: 2018-12-01 03:31 GMT

ಹೊಸದಿಲ್ಲಿ, ಡಿ. 1: "ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯವೈಖರಿ ವಿರುದ್ಧ ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್, ಜೆ. ಚೆಲಮೇಶ್ವರ ಮತ್ತು ಮದನ್ ಬಿ.ಲೋಕೂರ ಜತೆಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಯಾವುದೇ ವಿಷಾದ ಇಲ್ಲ. ನಮಗೆ ಇದನ್ನು ಹೊರತುಪಡಿಸಿ ಬೇರೆ ಯಾವ ಆಯ್ಕೆಯೂ ಇರಲಿಲ್ಲ" ಎಂದು ಶುಕ್ರವಾರ ಸೇವೆಯಿಂದ ನಿವೃತ್ತರಾದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನ ಎಲ್ಲ ನ್ಯಾಯಾಧೀಶರ ಸಭೆ ಕರೆದು ಸಮಸ್ಯೆ ಬಗ್ಗೆ ಚರ್ಚಿಸುವಂತೆ ಅಂದಿನ ಸಿಜೆಐ ಮಿಶ್ರಾ ಅವರಿಗೆ ಹಲವು ಬಾರಿ ಮನವಿ ಮಾಡಿದ್ದೆವು. ಆದರೆ ಅದಕ್ಕೆ ಸ್ಪಂದಿಸದೇ ಇದ್ದಾಗ 2018ರ ಜನವರಿ 12ರಂದು ಪತ್ರಿಕಾಗೋಷ್ಠಿ ನಡೆಸುವುದು ಅನಿವಾರ್ಯವಾಯಿತು ಎಂದು ಸ್ಪಷ್ಟಪಡಿಸಿದರು.

ಈ ಪತ್ರಿಕಾಗೋಷ್ಠಿ ವೈಯಕ್ತಿಕವಾಗಿ ಯಾರ ವಿರುದ್ಧವೂ ಅಲ್ಲ; ಬದಲಾಗಿ ದೇಶದ ಅತ್ಯುನ್ನತ ಕೋರ್ಟ್‌ನ ಆಡಳಿತ ವ್ಯವಸ್ಥೆಯಲ್ಲಿನ ಸಂಘರ್ಷ ಪರಿಸ್ಥಿತಿ ಬಗ್ಗೆ ಕಳಕಳಿ ವ್ಯಕ್ತಪಡಿಸುವುದಾಗಿತ್ತು ಎಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿವರಿಸಿದರು.

"ನನಗೆ ಯಾವುದೇ ವಿಷಾದ ಇಲ್ಲ; ಬೇರೆ ಯಾವುದೇ ಮಾರ್ಗವಿಲ್ಲದೇ ಪ್ರಜ್ಞಾಪೂರ್ವಕವಾಗಿಯೇ ಅದನ್ನು ಮಾಡಲಾಗಿದೆ. ಈ ಸಮಸ್ಯೆ ಬಗೆಹರಿದಿದೆ ಎಂದು ನಾನು ಹೇಳಲಾರೆ. ಇದು ಸಾಂಸ್ಥಿಕ ಸಮಸ್ಯೆ. ಇದನ್ನು ಬಗೆಹರಿಸಲು ಸಮಯಾವಕಾಶ ಬೇಕು. ಇದು ನಡೆಯುತ್ತಲೇ ಇರುತ್ತದೆ. ಬದಲಾವಣೆಯ ಪ್ರಕ್ರಿಯೆ ಮುಂದುವರಿಯುತ್ತದೆ" ಎಂದು ಹೇಳಿದರು.

ನಮ್ಮ ಅಹವಾಲು ಕೇವಲ ಪ್ರಕರಣಗಳ ಹಂಚಿಕೆ ವಿಚಾರಕ್ಕೆ ಸೀಮಿತವಾಗಿರಲಿಲ್ಲ. ಬದಲಾಗಿ ನ್ಯಾಯಾಲಯದ ಕೆಲ ಅನಾರೋಗ್ಯಕರ ಪದ್ಧತಿಗಳ ಬಗೆಗೂ ಆಗಿತ್ತು ಎಂದು ಸ್ಪಷ್ಟನೆ ನೀಡಿದರು.

"ರೋಸ್ಟರ್ ಒಂದೇ ಸಮಸ್ಯೆಯಾಗಿರಲಿಲ್ಲ; ಸಮಾಲೋಚನೆ ನಡೆಸಲು ಹಾಗೂ ವಿಧಿವಿಧಾನಗಳನ್ನು ಅನುಸರಿಸಲು ಒಂದು ವ್ಯವಸ್ಥೆ ಇದೆ. ಒಬ್ಬ ವ್ಯಕ್ತಿ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ನ್ಯಾಯಾಧೀಶರ ಜತೆ ಚರ್ಚಿಸುವುದು ಅಗತ್ಯ. ಈಗ ಅದು ನಡೆಯುತ್ತಿದೆ. ಈಗ ಪಾರದರ್ಶಕ ವ್ಯವಸ್ಥೆ ಇದೆ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News