ಸಚಿವ ನವಜ್ಯೋತ್ ಸಿಂಗ್ ಸಿಧು ಹೇಳಿದ "ಅಲಿಬಾಬಾ ಮತ್ತು 40 ಕಳ್ಳರ ಕಥೆ"

Update: 2018-12-01 03:46 GMT

ಹೈದರಾಬಾದ್, ಡಿ. 1: ತೆಲಂಗಾಣದ ಉಸ್ತುವಾರಿ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ ರಾವ್ ವಿರುದ್ಧ ವಾಗ್ದಾಳಿ ನಡೆಸಿದ ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು, ರಾವ್ ಕುಟುಂಬ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆಪಾದಿಸಿದ್ದಾರೆ.

ಕೆಸಿಆರ್ ಕುಟುಂಬವನ್ನು ಅಲಿಬಾಬಾ ಮತ್ತು 40 ಕಳ್ಳರಿಗೆ ಹೋಲಿಸಿದ ಮಾಜಿ ಕ್ರಿಕೆಟರ್, ಇದು ಅಲಿಬಾಬಾ ಮತ್ತು ನಾಲ್ವರು ಕಳ್ಳರ ಹೊಸ ಕಥೆ ಎಂದು ಚುಚ್ಚಿದ್ದಾರೆ.

"ನಾನು ಅಲಿಬಾಬಾ ಮತ್ತು 40 ಕಳ್ಳರ ಕಥೆ ಕೇಳಿದ್ದೆ. ಅದು ಹಳೆಯ ಕಥೆ. ತೆಲಂಗಾಣದಲ್ಲಿ ಅಲಿಬಾಬಾ ಮತ್ತು ನಾಲ್ವರು ಕಳ್ಳರಿದ್ದಾರೆ" ಎಂದು ಕೆಸಿಆರ್, ಅವರ ಮಗ ಹಾಗೂ ಸಚಿವ ಕೆ.ಟಿ.ರಾಮರಾವ್, ಸಂಸದೆ ಹಾಗೂ ಮಗಳು ಕವಿತಾ ಮತ್ತು ಇಬ್ಬರು ಸಂಬಂಧಿಕರನ್ನು ಉಲ್ಲೇಖಿಸಿದರು.

"ಕೆಸಿಆರ್ ಗೋಸುಂಬೆಗಿಂತ ವೇಗವಾಗಿ ಬಣ್ಣ ಬದಲಿಸುವವರು" ಎಂದು ಸಿಧು ವ್ಯಂಗ್ಯವಾಡಿದರು. "ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಿದರೆ ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವುದಾಗಿ ಹೇಳಿ ಕೈಕೊಟ್ಟರು. ಜತೆಗೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವುದಾಗಿ ನೀಡಿದ ಆಶ್ವಾಸನೆಯೂ ಹುಸಿಯಾಯಿತು. ಕೆಸಿಆರ್ ಆಶ್ವಾಸನೆಗಳು ಬಿದಿರಿನಂತೆ. ಹೊರಗಿನಿಂದ ಬಲಶಾಲಿ ಹಾಗೂ ಎತ್ತರ ಎಂದು ಕಾಣುತ್ತವೆ. ಆದರೆ ಒಳಗೆ ಟೊಳ್ಳು" ಎಂದು ಛೇಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News