ಸನಾತನ ಸಂಸ್ಥಾ ನಿಷೇಧದ ಪ್ರಸ್ತಾವ ಕೇಂದ್ರದ ಮುಂದೆ ಬಾಕಿಯಿದೆ: ದೇವೇಂದ್ರ ಫಡ್ನವೀಸ್

Update: 2018-12-01 09:20 GMT

ಮುಂಬೈ, ಡಿ.1: ಸನಾತನ ಸಂಸ್ಥಾವನ್ನು ನಿಷೇಧಿಸುವ ಪ್ರಸ್ತಾವ ಕೇಂದ್ರ ಸರಕಾರದ ಮುಂದೆ ಬಾಕಿಯಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಈ ಹಿಂದಿನ ರಾಜ್ಯ ಸರಕಾರ ಈ ಪ್ರಸ್ತಾಪವನ್ನು ಕೇಂದ್ರಕ್ಕೆ ಸಲ್ಲಿಸಿತ್ತು ಎಂದು ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದ ಕೊನೆಯ ದಿನ ವಿಪಕ್ಷ ಮಂಡಿಸಿದ ನಿರ್ಣಯಕ್ಕೆ  ಉತ್ತರ ನೀಡುವ ವೇಳೆ ಫಡ್ನವೀಸ್ ತಿಳಿಸಿದರು.

ತಮ್ಮ ನಂಬಿಕೆಗಳಿಗೆ ಮತ್ತು ಸಿದ್ಧಾಂತಗಳಿವೆ ವಿರುದ್ಧವಾಗಿ ಕಾರ್ಯಾಚರಿಸುತ್ತಿರುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಲು ವ್ಯವಸ್ಥಿತ ಅಪರಾಧ ನಡೆಸಲು ತಂಡವೊಂದು 2010-11ರಲ್ಲಿ ರಚನೆಯಾಗಿತ್ತು ಎಂದು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕಂಡುಕೊಂಡ  ಕೆಲವೇ ದಿನಗಳಲ್ಲಿ ಫಡ್ನವೀಸ್ ಅವರ ಈ ಹೇಳಿಕೆ ಬಂದಿದೆ.

ಗೌರಿ ಹತ್ಯೆ ಪ್ರಕರಣದಲ್ಲಿನ ಎಲ್ಲಾ 18 ಆರೋಪಿಗಳೂ ಈ ತಂಡದ ಭಾಗವಾಗಿದ್ದರು ಹಾಗೂ ಅವರು ಸನಾತನ ಸಂಸ್ಥಾದ `ಕ್ಷಾತ್ರ ಧರ್ಮ ಸಾಧನಾ' ಪುಸ್ತಕದಿಂದ ಪ್ರೇರೇಪಿತರಾಗಿ ಇಂತಹ ಕೃತ್ಯಗಳಿಗೆ ಕೈಹಾಕಿದ್ದರು ಎಂದೂ ತಿಳಿದು ಬಂದಿದೆ. ಆದರೆ ಗೌರಿ ಹತ್ಯೆ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಸನಾತನ ಸಂಸ್ಥಾ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News