ಕಸ್ತೂರಿ ರಂಗನ್ ವರದಿ ಜಾರಿಗೆ ಮಲೆನಾಡಿನಲ್ಲಿ ಭಾರೀ ವಿರೋಧ: ಬಾಳೆಹೊನ್ನೂರು ಬಂದ್ ಗೆ ಉತ್ತಮ ಪ್ರತಿಕ್ರಿಯೆ

Update: 2018-12-01 12:18 GMT

ಚಿಕ್ಕಮಗಳೂರು, ಡಿ.1: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ವರದಿ ಜಾರಿ ವಿರೋಧಿಸಿ ಮಲೆನಾಡು ಉಳಿಸಿ ವೇದಿಕೆ ಶನಿವಾರ ಕರೆ ನೀಡಿದ್ದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ಬಂದ್‍ಗೆ ಭಾರೀ ಜನಬೆಂಬಲ ವ್ಯಕ್ತವಾಗಿದ್ದು, ಬಂದ್ ಯಶಸ್ವಿಯಾಗಿದೆ.

ಮಲೆನಾಡಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮಲೆನಾಡು ಉಳಿಸಿ ವೇದಿಕೆ ಕಳೆದೊಂದು ತಿಂಗಳಿನಿಂದ ಮಲೆನಾಡಿನಾದ್ಯಂತ ಜನಜಾಗೃತಿ ಸಭೆಗಳನ್ನು ಆಯೋಜಿಸಿದೆ. ಶನಿವಾರ ಬಾಳೆಹೊನ್ನೂರು ಪಟ್ಟಣದಲ್ಲಿ ವರದಿ ಜಾರಿ ವಿರೋಧಿಸಿ ಬಂದ್‍ಗೆ ನೀಡಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ವ್ಯಾಪಾರಿಗಳು ಪಟ್ಟಣದಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಸಂಜೆ ವರೆಗೂ ತೆರಯದೇ ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಬಂದ್ ಅಂಗವಾಗಿ ಪಟ್ಟಣದಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೂ ಜನರ ಓಡಾಟ ವಿರಳವಾಗಿತ್ತು. 

ಪಟ್ಟಣದಲ್ಲಿ ಖಾಸಗಿ ಹಾಗೂ ಸರಕಾರಿ ಸಾರಿಗೆ ಬಸ್‍ಗಳ ಓಡಾಟ ಸಾಮಾನ್ಯವಾಗಿದ್ದರೂ ಬಸ್‍ಗಳು ಪ್ರಯಾಣಿಕರಿಲ್ಲದೇ ಸಂಚಾರ ನಡೆಸುತ್ತಿದ್ದುದು ಕಂಡು ಬಂತು. ಆಸ್ಪತ್ರೆ, ಮೆಡಿಕಲ್ ಶಾಪ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು. ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡದಿದ್ದರೂ ಮಕ್ಕಳ ಸಂಖ್ಯೆ ವಿರಳವಾಗಿತ್ತು. ಗ್ರಾಮೀಣ ಪ್ರದೇಶಗಳ  ಶಾಲಾ ಮಕ್ಕಳು ಪಟ್ಟಣಕ್ಕೆ ಆಗಮಿಸಿ ಬಂದ್ ಸುದ್ದಿ ತಿಳಿದು ಮನೆಗಳಿಗೆ ಹಿಂದುರುಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. 

ಸದಾ ಜನರಿಂದ ತುಂಬಿರುತ್ತಿದ್ದ ಪಟ್ಟಣದ ಖಾಸಗಿ ಹಾಗೂ ಸರಕಾರ ಬಸ್ ನಿಲ್ದಾಣ ಶನಿವಾರ ಜನರಿಲ್ಲದೇ ಭಣಗುಡುತ್ತಿತ್ತು. ಮಲೆನಾಡು ಉಳಿಸಿ ವೇದಿಕೆಯಿಂದ ಕರೆ ನೀಡಿದ್ದ ಬಂದ್ ಬೆಂಬಲಿಸಿ ಹೋಬಳಿ ರೈತ, ದಲಿತ, ಕಾರ್ಮಿಕ ಸಂಘಟನೆಗಳೂ ಸೇರಿದಂತೆ, ಆಟೊ ಚಾಲಕರ ಮಾಲಕರ ಸಂಘ ಮತ್ತಿತರ ಸಂಘ ಸಂಸ್ಥೆಗಳು ಬಂದ್‍ಗೆ ಬೆಂಬಲ ಸೂಚಿಸಿದ್ದು, ಸಂಪೂರ್ಣ ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಬಂದ್ ಅಂಗವಾಗಿ ಮಲೆನಾಡು ಉಳಿಸಿ ವೇದಿಕೆ ಪಟ್ಟಣದಾದ್ಯಂತ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಮೆರವಣಿಗೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಮಲೆನಾಡು ಉಳಿಸಿ ವೇದಿಕೆಯ ಕಲ್ಕುಳಿ ವಿಠಲ್‍ ಹೆಗ್ಡೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು, ಪಟ್ಟಣದ ನಾಗರಿಕರೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

ಮೆರವಣಿಗೆಯುದ್ದಕ್ಕೂ ಕಸ್ತೂರಿ ರಂಗನ್ ವರದಿ ಜಾರಿ ಹಾಗೂ ಕೇಂದ್ರ, ರಾಜ್ಯ ಸರಕಾರಗಳು ಮತ್ತು ಸಂಸದರ ವಿರುದ್ಧ ಧಿಕ್ಕಾರದ ಘೋಷಣೆಗಳು ಕೇಳಿ ಬಂದವು. ಬಂದ್ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಒಟ್ಟಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಮಲೆನಾಡು ಭಾಗದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಶನಿವಾರದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News