ಆಸ್ತಿ ಲಪಟಾಯಿಸಿ ಅಮ್ಮನನ್ನು ಕೀಳಾಗಿ ಕಂಡ ಮಗಳಿಗೆ ಹೈಕೋರ್ಟ್‌ನಿಂದ ನೀತಿ ಪಾಠ

Update: 2018-12-01 13:04 GMT

ಬೆಂಗಳೂರು, ಡಿ.1: ಮಕ್ಕಳು ಹೆತ್ತವರಿಂದ ಆಸ್ತಿ ಬರೆಸಿಕೊಂಡು ನಂತರ ಅವರನ್ನು ಬೀದಿಗೆ ತಳ್ಳುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಅಮ್ಮನಿಂದ ಸ್ಥಿರಾಸ್ತಿ ಬರೆಸಿಕೊಂಡು ನಂತರ ಆಕೆಯನ್ನು ಕೀಳಾಗಿ ನಡೆಸಿಕೊಂಡ ಮಗಳಿಗೆ ನೀತಿ ಪಾಠ ಹೇಳಿದೆ. 

ಮೈಸೂರಿನ ಪ್ರಕರಣವೊಂದರಲ್ಲಿ ಗಿಫ್ಟ್ ಡೀಡ್ ರದ್ದುಗೊಳಿಸಿದ್ದ ಅಮ್ಮನ ವಿರುದ್ಧ ಪುತ್ರಿ ಹೂಡಿದ್ದ ಅರ್ಜಿಯನ್ನ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯಿದೆ 2007 ಪ್ರಕಾರ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಹೃದಯವಿಲ್ಲದ ಪುತ್ರರು, ಪುತ್ರಿಯರೇ ನೀವು ನಿಮ್ಮ ತಂದೆ ತಾಯಿಯರನ್ನು ಹೇಗೆ ನೋಡಿಕೊಳ್ಳುತ್ತೀರೋ ಅದೇ ರೀತಿ ನಿಮ್ಮನ್ನು ನಿಮ್ಮ ಮಕ್ಕಳು ನೋಡಿಕೊಳ್ಳುತ್ತಾರೆ ಎಂದು ತಿಳಿದುಕೊಳ್ಳಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣವೇನು: ಮೈಸೂರಿನ 83 ವರ್ಷದ ಎನ್.ಡಿ.ಸುವರ್ಣ ಪತಿಯ ಮರಣಾನಂತರ, ಅಲ್ಲಿನ ಲಷ್ಕರ್ ಮೊಹಲ್ಲಾದಲ್ಲಿ ವಾಸಿಸುತ್ತಿದ್ದ ಪುತ್ರಿ ಎನ್.ಡಿ.ವನಮಾಲಾ ಮನೆಯಲ್ಲಿದ್ದರು. ಆಕೆ ಮೊದಲು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಂತರ ತಾಯಿಯನ್ನು ಪುಸಲಾಯಿಸಿ ಆಸ್ತಿಯನ್ನು ತನ್ನ ಹೆಸರಿಗೆ ಗಿಫ್ಟ್ ಡೀಡ್(ದಾನಪತ್ರ) ಮಾಡಿಸಿಕೊಂಡರು. ಆನಂತರ ಪುತ್ರಿ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಹೀಗಾಗಿ, ತಾಯಿ ತಾನು ಮಾಡಿಕೊಟ್ಟಿದ್ದ ಗಿಫ್ಟ್ ಡೀಡ್ ರದ್ದು ಮಾಡಲು ಉಪವಿಭಾಗಾಧಿಕಾರಿಯನ್ನು ಕೋರಿದ್ದರು. ಅವರು ಡೀಡ್ ರದ್ದುಗೊಳಿಸಿದ್ದರು. ಅದನ್ನು ಪ್ರಶ್ನಿಸಿ ಪುತ್ರಿ ಡಿ.ಸಿ.ಮುಂದೆ ಅರ್ಜಿ ಸಲ್ಲಿಸಿದ್ದರು. ಅದೂ ವಜಾಗೊಂಡಿತ್ತು. ಡಿ.ಸಿ.ಆದೇಶ ಪ್ರಶ್ನಿಸಿ ಮತ್ತೆ ಮಗಳು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಕೂಡ ತಾಯಿ ಪರವಾಗಿಯೇ ಆದೇಶ ನೀಡಿದೆ. ತಂದೆ-ತಾಯಿ ಇಲ್ಲದೆ ನಾವು ಈ ಭೂಮಿಯಲ್ಲಿ ಜನ್ಮ ತಳೆಯುತ್ತಿರಲಿಲ್ಲ ಎಂಬುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ತಮಗೂ ಒಂದು ದಿನ ವೃದ್ಧಾಪ್ಯದ ದಿನಗಳು ಬರುತ್ತವೆ ಎಂಬುದನ್ನು ಯಾರೂ ಮರೆಯಬಾರದು. ಮಕ್ಕಳು, ಹೆತ್ತವರನ್ನು ದೇವರಂತೆ ನೋಡಿಕೊಳ್ಳಬೇಕು, ಕೋರ್ಟ್‌ಗಳು ಸಹ ಇಂತಹ ವಿಚಾರಗಳಲ್ಲಿ ಕಣ್ಣುಮುಚ್ಚಿ ಕೂರದೆ ಹಿರಿಯ ನಾಗರಿಕ ಕಲ್ಯಾಣ ಕಾಯಿದೆ ಅನ್ವಯ ಅವರ ರಕ್ಷಣೆಗೆ ಧಾವಿಸಬೇಕೆಂದು ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಹೆತ್ತವರಿಗಿಂತ ದೊಡ್ಡ ದೇವರಿಲ್ಲ. ಅಲ್ಲದೆ, ಪೋಷಕರೂ ತಮ್ಮ ಮಕ್ಕಳು ದೇಶದ ಆಸ್ತಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡುವ ಜೊತೆಗೆ ಮಾನವೀಯ ಮೌಲ್ಯಗಳು, ಕೌಟುಂಬಿಕ ಸಂಬಂಧಗಳು, ಪ್ರೀತಿ, ಮಮತೆ, ಕರುಣೆ ತಿಳಿಸಿಕೊಡಬೇಕು.

-ಬಿ.ವೀರಪ್ಪ, ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News