ಮೇಕೆದಾಟು ಯೋಜನೆ ಜಾರಿಗೆ ಸಹಕಾರ: ಕೇಂದ್ರಕ್ಕೆ ಸಿಎಂ ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಕೆ

Update: 2018-12-01 16:10 GMT

ಹಾಸನ ಡಿ.1: ಕಳೆದ 25 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಮೇಕೆದಾಟು ಯೋಜನೆ ಜಾರಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರ ಮಾಡಿರುವ ಸಹಕಾರಕ್ಕೆ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನ ನಗರದ ನೂತನ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ವಲಯದ ವತಿಯಿಂದ ಏರ್ಪಡಿಸಲಾಗಿದ್ದ 1865 ಕೋಟಿ ರೂಪಾಯಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೂಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಆಧುನಿಕ ಕೃಷಿ ಪದ್ದತಿ ಅಳವಡಿಕೆ ಬಗ್ಗೆ ತಾವು 12 ವರ್ಷಗಳ ಹಿಂದೆಯೇ ಚಿಂತಿಸಿದ್ದು ಈಗಾಗಲೇ ಇಸ್ರೇಲ್ ಮಾದರಿಯಲ್ಲಿ ತಂತ್ರಜ್ಞಾನಗಳ ಬಳಕೆಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿನೂತನ ಕ್ತಮಗಳನ್ನು ಜಾರಿ ತರಲು ಸರ್ಕಾರ ಮುಂದಾಗಿದೆ  ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು‌

ಜೈವಿಕ ಇಂಧನ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. ಪ್ರತಿ ಜಿಲ್ಲೆಗೆ ಇಬ್ಬರಂತೆ 60 ತಜ್ಞ ರೈತರ ಸಮಿತಿ ರಚಿಸಲಾಗಿದೆ. ಅವರೋಂದಿಗೆ ಚರ್ಚಿಸಿ ಹೊಸ ಕೃಷಿ ಯೋಜನೆಗಳ ಜಾರಿಗೆ ತರಲು ಕ್ರಮವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ರಾಜ್ಯದ ಸಮಗ್ರ ಅಭಿವೃದ್ಧಿ ತಮ್ಮ ಆದ್ಯತೆಯಾಗಿದ್ದು, ಎಲ್ಲರನ್ನೂ ಒಳಗೊಂಡ ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಹಭಾಗಿತ್ವ ಮತ್ತು ಸಹಕಾರವನ್ನು ಕೋರುತ್ತೇನೆ ಎಂದರು. ತಮ್ಮ ತಂದೆ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರ ನಡುವೆ ಉತ್ತಮ ಬಾಂಧವ್ಯ ಇದ್ದು, ಅದರ ಫಲವಾಗಿ ಅನೇಕ ಯೋಜನೆಗಳಿಗೆ ಕೇಂದ್ರ ನೆರವು ದೊರೆತಿದೆ. ಇದಕ್ಕಾಗಿ ಧನ್ಯವಾದಗಳನ್ನು ಸಮರ್ಪಿಸುವುದಾಗಿ ಅವರು ಹೇಳಿದರು.

ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ತಾವೆಂದೂ ರಾಜಕೀಯ ಬೆರೆಸುವುದಿಲ್ಲ ಮತ್ತು ಹುಸಿ ಅಶ್ವಾಸನೆಗಳನ್ನು ನೀಡುವುದಿಲ್ಲ ಎಂದರು. ಸಾಧ್ಯವಾದದ್ದನ್ನು ಮಾತ್ರವೇ ಹೇಳುತ್ತೇನೆ ಮತ್ತು ಅದನ್ನು ಮಾಡಿಯೇ ತೀರುತ್ತೇನೆ ಎಂದ ಸಚಿವರು, ಕರ್ನಾಟಕದಲ್ಲಿ ಕಳೆದ 5 ವರ್ಷಗಳಲ್ಲಿ 2 ಲಕ್ಷ ಕೋಟಿ ರೂ. ಗಳ ವಿವಿಧ ರಸ್ತೆ ಕಾಮಗಾರಿಗಳನ್ನು ಕೇಂದ್ರ ಸರ್ಕಾರದ ವತಿಯಿಂದ ಕೈಗೊಳ್ಳಲಾಗಿದೆ. ಇದರಲ್ಲಿ ಕೆಲವು ಕಾಮಗಾರಿಗಳು ಪ್ರಾರಂಭವಾಗಿವೆ ಎಂದು ಹೇಳಿದರು.

ಕರ್ನಾಟಕ ಸಾಕಷ್ಟು ಅಭಿವೃದ್ದಿ ಸಾಧಿಸಿರುವುದು ಹೆಮ್ಮೆಯ ವಿಚಾರ. ಕೇಂದ್ರ ಸರ್ಕಾರ ರಾಜ್ಯದ ಪ್ರಗತಿಗೆ ಎಲ್ಲಾ ರೀತಿಯ ಸಹಕಾರ ಮತ್ತು ನೆರವು ನೀಡಲು ಸಿದ್ಧ ಎಂದ ನಿತಿನ್ ಗಡ್ಕರಿ ಅವರು, ನೀರಿನ ಬವಣೆ ನೀಗಿಸಲು ನದಿಗಳ ಜೊಡಣೆ ಕಾರ್ಯಕ್ರಮವನ್ನು ಜಾರಿಗೆ ತರಲು ಕ್ರಮವಹಿಸಲಾಗಿದೆ ಎಂದರು.

ಪೊಲಾವರ ಅಣೆಕಟ್ಟು ಯೋಜನೆಗೆ 80,000 ಕೋಟಿ ರೂ. ವಿನಿಯೋಗಿಸಲಾಗುವುದು. ಗೋದಾವರಿ ನದಿಯಿಂದ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಕೃಷ್ಣ ನದಿಗೆ, ಅಲ್ಲಿಂದ ಕಾವೇರಿ ನದಿಗೆ ಹರಿಸುವ ಯೋಜನೆ ಇದಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿಗೆ ಇದರಿಂದ‌ 452 ಟಿ.ಎಂ.ಸಿ. ಹೆಚ್ಚುವರಿ ನೀರು ಲಭ್ಯವಾಗಲಿದೆ. ಹೀಗಾಗಿ ಎರಡು ರಾಜ್ಯಗಳ ನಡುವೆ ನೀರಿನ ವಿಷಯವಾಗಿ ಇರುವ ಹೋರಾಟ ಅಂತ್ಯಗೊಳ್ಳಲಿದೆ ಎಂದು ಆಶಾಭಾವ ವ್ಯಕ್ತ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News