ನೋಟ್ ಬ್ಯಾನ್ ನಿಂದ ಕಪ್ಪುಹಣದ ಮೇಲೆ ಯಾವ ಪರಿಣಾಮವೂ ಆಗಿಲ್ಲ: ನಿವೃತ್ತರಾಗಲಿರುವ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್

Update: 2018-12-02 07:43 GMT

ಹೊಸದಿಲ್ಲಿ, ಡಿ.2: ಅಧಿಕ ಮೌಲ್ಯದ ನೋಟುಗಳನ್ನು ಅಮಾನ್ಯ ಮಾಡಿರುವ ಕೇಂದ್ರ ಸರ್ಕಾರದ ಕ್ರಮದಿಂದ ಕಪ್ಪುಹಣದ ಮೇಲೆ ಯಾವ ಪರಿಣಾಮವೂ ಆಗಿಲ್ಲ. ನೋಟು ರದ್ದತಿ ಬಳಿಕದ ಚುನಾವಣೆಗಳಲ್ಲಿ ನಾವು ಗರಿಷ್ಠ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದೇವೆ ಎಂದು ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ನಿವೃತ್ತರಾಗುತ್ತಿರುವ ಒ.ಪಿ.ರಾವತ್ ಸ್ಪಷ್ಟಪಡಿಸಿದ್ದಾರೆ.

‘ಇಂಡಿಯನ್ ಎಕ್ಸ್‍ಪ್ರೆಸ್‍’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ರಾವತ್ ಅವರು, "ಕಪ್ಪುಹಣದ ಮೇಲೆ ನೋಟು ರದ್ದತಿಯ ಪರಿಣಾಮ ಶೂನ್ಯ. ನೋಟು ರದ್ದತಿ ಬಳಿಕ ನಡೆದ ಚುನಾವಣೆಗಳಲ್ಲಿ ನಾವು ಗರಿಷ್ಠ ಹಣ ವಶಪಡಿಸಿಕೊಂಡಿದ್ದೇವೆ. ಈ ಐದು ರಾಜ್ಯಗಳ ಚುನಾವಣೆಯಲ್ಲೂ ಸುಮಾರು 200 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದೇವೆ. ನೋಟು ರದ್ದತಿಯಂಥ ಕ್ರಮದಿಂದ ಚುನಾವಣೆಗಳಿಗೆ ಹರಿಯುವ ಹಣದ ಮೂಲಕ್ಕೆ ಯಾವುದೇ ಪರಿಣಾಮ ಆಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ" ಎಂದು ವಿವರಿಸಿದ್ದಾರೆ.

ಮಿಝೋರಾಂ ಸಿಇಒ ಅವರ ಪದಚ್ಯುತಿ, ಸಾಮಾಜಿಕ ಜಾಲತಾಣದಿಂದ ಉಂಟಾಗುವ ಅಪಾಯ, ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಅವಲೋಕನದ ಬಳಿಕ ಚುನಾವಣೆ ನಡೆಸುವುದು, ಲೋಕಸಭೆ ಹಾಗೂ ಎಲ್ಲ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲು ಭಾರತ ಸಿದ್ಧವಿದ್ದರೂ ಕಾನೂನು ಚೌಕಟ್ಟು ರೂಪಿಸಬೇಕಾದ ಅಗತ್ಯ ಮತ್ತಿತರ ವಿಷಯಗಳ ಬಗ್ಗೆ ವಿಸ್ತೃತವಾಗಿ ಅವರು ಮಾತನಾಡಿದ್ದಾರೆ. ಮತದಾನ ಬಾಂಡ್ ಬಗ್ಗೆ ರಾವತ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಕೇಳಿದ ಪ್ರಶ್ನೆಗೆ, "ಈ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಎಲ್ಲೆಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇವಿಎಂ ಹಾಗೂ ವಿವಿಪಿಎಟಿ ಮೂಲಕ ಅಣಕು ಮತದಾನ ಮಾಡಿ, ಕಾಗದದ ಮತಪತ್ರವನ್ನು ಎಣಿಕೆ ಮಾಡಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಶೇಕಡ 99ರಷ್ಟು ಪಕ್ಷಗಳು ಇವಿಎಂ ಬೆಂಬಲಿಸಿವೆ. ಇವಿಎಂಗಳನ್ನು ಪರಿಶೀಲಿಸುವಂತೆ ರಾಜಕೀಯ ಪಕ್ಷಗಳನ್ನು ಕರೆದಾಗ ಕೇವಲ ಎರಡು ಪಕ್ಷಗಳು ಮಾತ್ರ ಮುಂದೆ ಬಂದಿವೆ. ಇವಿಎಂ ಸ್ಥಿತಿಗತಿ ವರದಿಯನ್ನೂ ವೆಬ್‍ಸೈಟ್‍ನಲ್ಲಿ ಹಾಕಿದ್ದೇವೆ. ಇದು ಎಲ್ಲ ಪ್ರಶ್ನೆಗಳಿಗೆ ಉತ್ತರ” ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News