ಪ್ಯಾರಿಸ್ ನಲ್ಲಿ ಬೆಲೆಯೇರಿಕೆ ವಿರುದ್ಧ ತೀವ್ರ ಪ್ರತಿಭಟನೆ, ಗಲಭೆ

Update: 2018-12-02 16:50 GMT

ಪ್ಯಾರಿಸ್,ಡಿ.2: ತೈಲ ದರ ಹೆಚ್ಚಳ ಹಾಗೂ ಹೆಚ್ಚುತ್ತಿರುವ ಜೀವನ ನಿರ್ವಹಣಾ ವೆಚ್ಚದ ವಿರುದ್ಧ ಫ್ರಾನ್ಸ್‌ನಾದ್ಯಂತ ಭುಗಿಲೆದ್ದ ಪ್ರತಿಭಟನೆ ಶನಿವಾರ ರಾಜಧಾನಿ ಪ್ಯಾರಿಸ್‌ನಲ್ಲಿ ಭಾರೀ ಹಿಂಸಾಚಾರಕ್ಕೆ ತಿರುಗಿದೆ. ಹಳದಿಬಣ್ಣದ ಜಾಕೆಟ್ ಹಾಗೂ ಮುಖವಾಡ ಧರಿಸಿದ, ಲೋಹದ ರಾಡ್‌ಗಳನ್ನು ಹಿಡಿದಿದ್ದ ಯುವಜನರ ಗುಂಪುಗಳು ಶನಿವಾರ ಪ್ಯಾರಿಸ್ ನಗರದ ರಸ್ತೆಗಳಲ್ಲಿ ಹಿಂಸಾಚಾರಕ್ಕಿಳಿದಿದ್ದರು ಹಾಗೂ ಡಜನುಗಟ್ಟಲೆ ವಾಹನಗಳು ಹಾಗೂ ಕಟ್ಟಡಳಿಗೆ ಬೆಂಕಿ ಹಚ್ಚಿದ್ದಾರೆ. ಗಲಭೆ ನಿರತರು ಹಲವಾರು ಅಂಗಡಿಗಳನ್ನು ಲೂಟಿ ಮಾಡಿದ್ದಾರೆ ಹಾಗೂ ಪೊಲೀಸರೆಡೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಗಲಭೆಯನ್ನು ನಿಯಂತ್ರಿಸುವ ಪ್ರಯತ್ನವಾಗಿ ಪೊಲೀಸರು ಹಿಂಸಾನಿರತರ ಮೇಲೆ ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಪ್ರಯೋಗಿಸಿದ್ದಾರೆ. ಹಲವಾರು ರಸ್ತೆಗಳು ಹಾಗೂ ಮೆಟ್ರೋ ನಿಲ್ದಾಣಗಳನ್ನು ಮುಚ್ಚುಗಡೆಗೊಳಿಸಿದ್ದಾರೆ.

ಪ್ರತಿಭಟನಕಾರರ ಜೊತೆ ನಡೆದ ಘರ್ಷಣೆಯಲ್ಲಿ 23 ಪೊಲೀಸ್ ಅಧಿ ಕಾರಿಗಳು ಗಾಯಗೊಂಡಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ 378 ಮಂದಿಯನ್ನು ಬಂಧಿಸಿದ್ದಾರೆ.

   ಹಿಂಸಾಚಾರದಿಂದಾಗಿ ಪ್ಯಾರಿಸ್‌ನ ಪ್ರಮುಖ ರಸ್ತೆಗಳಾದ ಆರ್ಕ್ ದ ಟ್ರಯೊಂಫ್ ಹಾಗೂ ಪ್ರಸಿದ್ಧ ಚ್ಯಾಂಪ್ಸ್-ಎಲಿಸಿಸ್ ಆವೆನ್ಯೂ ಮತ್ತು ಟ್ಯೂಲೆರಿಸ್ ಗಾರ್ಡನ್ ಪ್ರದೇಶಗಳಲ್ಲಿ ಎಲ್ಲೆಡೆ ಸುಟ್ಟುಹಾಕಲಾದ ಕಾರುಗಳು ಹಾಗೂ ಗಲಭೆಕೋರರು ಎಸೆದಿರುವ ಇಟ್ಟಿಗೆ, ಕಲ್ಲುಗಳು ಹರಡಿಬಿದ್ದಿವೆ. ಹಲವಾರು ಅಂಗಡಿಮುಂಗಟ್ಟೆಗಳು ಹಾಗೂ ಕಟ್ಟಡಗಳಲ್ಲಿ ದೊಡ್ಡ ಭಿತ್ತಿಬರಹಗಳನ್ನು ಸ್ಪ್ರೇ ಮಾಡಲಾಗಿದೆ.

 ಶನಿವಾರ ನಡೆದ ಹಿಂಸಾಚಾರವನ್ನು ಫ್ರೆಂಚ್ ಸರಕಾರದ ವಕ್ತಾರ ಬೆಂಜಮಿನ್ ಗ್ರಿವೆಕ್ಸ್ ತೀವ್ರವಾಗಿ ಖಂಡಿಸಿದ್ದಾರೆ. ದರೋಡೆಗೈಯಲು, ಪೊಲೀಸ್ ಪಡೆಗಳ ಮೇಲೆ ದಾಳಿ ನಡೆಸಲು ಬಂದ ಜನರು ನಿನ್ನೆಯ ಪ್ರತಿಭಟನೆಯನ್ನು ಹೈಜಾಕ್ ಮಾಡಿದ್ದಾರೆಂದು ಗ್ರಿವೆಕ್ಸ್ ಆರೋಪಿಸಿದ್ದಾರೆ.

ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದರೂ, ಫ್ರಾನ್ಸ್‌ನ ಪ್ರಸಿದ್ಧ ಆರ್ಕ್‌ದ ಟ್ರಯೊಂಫೆ ಸ್ಮಾರಕಕ್ಕೆೆ ಪ್ರತಿಭಟನಕಾರರು ಹಾನಿಯೆಸಗುವುದನ್ನು ತಡೆಯಲು ಪೊಲೀಸರಿಗೆ ಯಾಕೆ ಸಾಧ್ಯವಾಗಲಿಲ್ಲವೆಂದು ಅವರು ಪ್ರಶ್ನಿಸಿದ್ದಾರೆ.

ತೈಲ ತೆರಿಗೆ ಹೆಚ್ಚಳ ಹಾಗೂ ಜೀವನನಿರ್ವಹಣಾ ವೆಚ್ಚ ತುಟ್ಟಿಯಾಗಿರುವುದರ ವಿರುದ್ಧ ಶನಿವಾರ ನಡೆದ ಹಿಂಸಾಚಾರವು 2005ರ ಬಳಿಕ ಪ್ಯಾರಿಸ್‌ನಲ್ಲಿ ಭುಗಿಲೆದ್ದ ಅತಿ ದೊಡ್ಡ ಹಿಂಸಾಚಾರವೆನ್ನಲಾಗಿದೆ.

ತುರ್ತುಪರಿಸ್ಥಿತಿ ಹೇರಿಕೆ ಸಾಧ್ಯತೆ

ಕಳೆದೊಂದು ದಶಕದಲ್ಲಿ ಫ್ರಾನ್ಸ್ ಕಂಡಿರುವ ಅತಿ ದೊಡ್ಡ ನಾಗರಿಕ ಹಿಂಸಾಚಾರ ಇದಾಗಿದ್ದು, ಮುಂದಿನ ದಿನಗಳಲ್ಲಿ ಅದು ಮರುಕಳಿಸದಂತೆ ತಡೆಯಲು ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರುವ ಬಗ್ಗೆ ಪರಿಶೀಲಿಸಲಾಗುತ್ತಿದೆಯೆಂದು ಫ್ರೆಂಚ್ ಸರಕಾರದ ವಕ್ತಾರ ಬೆಂಜಮಿನ್ ಗ್ರಿವಿಕ್ಸ್ ರವಿವಾರ ತಿಳಿಸಿದ್ದಾರೆ.

 ಪ್ಯಾರಿಸ್ ಗಲಭೆಯ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೊನ್ ರವಿವಾರ ತುರ್ತು ಸಂಪುಟ ಸಭೆ ನಡೆಸಿದ್ದಾರೆ.ತೈಲ ದರ ಏರಿಕೆ ವಿರುದ್ಧ ಪ್ರತಿಭಟನೆಗಿಳಿದಿರುವ ‘ಹಳದಿ ಸೊಂಟಪಟ್ಟಿ’ ಸಂಘಟನೆಯ ಕಾರ್ಯಕರ್ತರ ಜೊತೆ ಮಾತುಕತೆ ಆರಂಭಿಸುವ ಬಗ್ಗೆ ಅವರು ಸಮಾಲೋಚನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News