ಬಿಎಸ್‌ವೈ-ಈಶ್ವರಪ್ಪರ ಸಿಎಂ ಆಗುವ ಕನಸು ನನಸಾಗದು: ಸಿದ್ದರಾಮಯ್ಯ

Update: 2018-12-02 11:42 GMT

ಹುಬ್ಬಳ್ಳಿ, ಡಿ. 2: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪನವರು ಮುಖ್ಯಮಂತ್ರಿಯಾಗುವ ಕನಸು ಯಾವುದೇ ಕಾರಣಕ್ಕೂ ನನಸಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ರವಿವಾರ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಂಪುಟದ ವಿಸ್ತರಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರ ಪತನವಾಗುತ್ತದೆ’ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ, ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲ. ಹೀಗಿದ್ದರೂ, ಅವರು ಏಕೆ ಕನಸು ಕಾಣುತ್ತಿದ್ದಾರೆಂದು ನಮಗೆ ಗೊತ್ತಿಲ್ಲ. ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ಮುಖ್ಯಮಂತ್ರಿ ಆಗಬೇಕು ಎನ್ನುವ ಕನಸು ಯಾವುದೇ ಸಂದರ್ಭದಲ್ಲಿಯೂ ನನಸಾಗುವುದಿಲ್ಲ. ರಾಜ್ಯದಲ್ಲಿನ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಸರಕಾರಕ್ಕೆ ತೊಂದರೆ ಇಲ್ಲ. ಸರಕಾರ ಸುಭದ್ರವಾಗಿದೆ ಎಂದು ತಿರುಗೇಟು ನೀಡಿದರು.

ಯಾವುದೇ ಕಾರಣಕ್ಕೂ ಮೈತ್ರಿ ಸರಕಾರ ಬೀಳುವುದಿಲ್ಲ. ಅಲ್ಲದೆ, ನನ್ನ ವಿರುದ್ಧ ಯಾರೂ ಹೈಕಮಾಂಡ್‌ಗೆ ದೂರು ನೀಡಿಲ್ಲ. ಇದು ಕೇವಲ ಊಹಾಪೋಹ. ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್ ಶಾಸಕರ ಹಿತವನ್ನು ಕಡೆಗಣಿಸಿಲ್ಲ. ನಮ್ಮ ಪಕ್ಷದ ಶಾಸಕರು ಸಂಪುಟ ವಿಸ್ತರಣೆ ಬಗ್ಗೆ ಒತ್ತಡ ಹೇರಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

ಸಂಪುಟ ವಿಸ್ತರಣೆ ಸೇರಿದಂತೆ ಸರಕಾರ ಯೋಜನೆಗಳ ನೆಪದಲ್ಲಿ ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಚಿವ ಸಂಪುಟದ ಬಗ್ಗೆ ಡಿ.5ರಂದು ನನ್ನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಭ್ರಷ್ಟಾಚಾರ ವಿರುದ್ಧ ಮಾತನಾಡುವ ಪ್ರಧಾನಿ ಮೋದಿ ಈವರೆಗೂ ಲೋಕ್ ಪಾಲ್ ಮಸೂದೆ ಜಾರಿಗೆ ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಶೀಘ್ರವೇ ಕಬ್ಬಿನ ಬಾಕಿ ಹಣವನ್ನು ಕೊಡಿಸಲಾಗುತ್ತದೆ. ಅಲ್ಲದೆ, ಕೇಂದ್ರದ ಎಫ್‌ಆರ್‌ಪಿ ದರದಂತೆ ಕಬ್ಬು ಹರಿಯಲು ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ ಎಂದರು.

‘ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಬಿಜೆಪಿ ರಾಜಕೀಯ ನಾಟಕ ಆರಂಭಿಸಿದೆ. ಚುನಾವಣೆ ಬಂದಾಗ ಮಾತ್ರ ಬಿಜೆಪಿ ರಾಮನ ನೆನಪು ಬರುತ್ತದೆ. ಆ ಬಳಿಕ ಶ್ರೀರಾಮನನ್ನು ಅವರು ಮರೆಯುತ್ತಾರೆ. ಆಡಳಿತಕ್ಕೆ ಬಂದು ನಾಲ್ಕೂವರೆ ವರ್ಷ ಕಾಲ ಏಕೆ ಮಂದಿರದ ಬಗ್ಗೆ ಮಾತನಾಡಲಿಲ್ಲ. ಅವರಿಗೆ ಮಂದಿರದ ಸಮಸ್ಯೆ ಸದಾ ಜೀವಂತಾಗಿರಬೇಕು’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News