ಮೌಢ್ಯದ ವಿರುದ್ಧ ಅರಿವು ಮೂಡಿಸಲು ಸ್ಮಶಾನದಲ್ಲಿ ವಾಸ್ತವ್ಯ: ಸತೀಶ್ ಜಾರಕಿಹೊಳಿ

Update: 2018-12-02 13:45 GMT

ಬೆಳಗಾವಿ, ಡಿ.2: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿ.6ರಂದು ಮಾನವ ಬಂಧುತ್ವ ವೇದಿಕೆಯಿಂದ ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಪರಿವರ್ತನಾ ದಿನ ಹಾಗೂ ಮೌಢ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ರವಿವಾರ ನಗರದ ತಮ್ಮ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾಲ್ಕು ವರ್ಷಗಳಿಂದ ಸ್ಮಶಾನದಲ್ಲಿ ವಾಸ್ತವ್ಯ ಮಾಡುತ್ತಾ ಮಾನವ ಬಂಧುತ್ವ ವೇದಿಕೆಯಿಂದ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಈ ವರ್ಷವು ಮೌಢ್ಯದ ವಿರುದ್ಧ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಿ.6ರ ಬೆಳಗ್ಗೆ 10.30ಕ್ಕೆ ನಡೆಯುವ ಐದನೇ ಪರಿವರ್ತನಾ ದಿನದ ಕಾರ್ಯಕ್ರಮವನ್ನು ಹೈಕೋರ್ಟ್ ನಿವೃತ್ತ ನ್ಯಾ.ನಾಗಮೋಹನದಾಸ್ ಉದ್ಘಾಟಿಸಲಿದ್ದು, ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಪ್ರಧಾನ ಭಾಷಣ ಮಾಡಲಿದ್ದಾರೆ. ಮಹಿಳಾ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಬಾಳಿ ಅತಿಥಿಗಳಾಗಿ ಆಗಮಿಸುವರು. ಡಾ.ಬಸವಲಿಂಗ ಪಟ್ಟದ್ದೇವರು, ವಿಶ್ವನಾಥ ಕೊರಣೇಶ್ವರ ಅಪ್ಪಾಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಧ್ಯಾಹ್ನ 2.30ಕ್ಕೆ ವೈಚಾರಿಕ ಸಾಂಸ್ಕೃತಿಕ ಚಿಂತನ ಸಭೆ, ಅಂಬೇಡ್ಕರ್ ಚಿಂತನೆಗಳ ಕುರಿತು ಭಜನೆ, ಮೌಢ್ಯ ವಿರೋಧಿ ಕಲಾಕೃತಿಗಳ ರಚನೆ ಹಾಗೂ ಕ್ರಾಂತಿಗೀತೆಗಳ ಗಾಯನ ನಡೆಯಲಿದೆ.

ಸಂಜೆ 5ಕ್ಕೆ ಸತ್ಯಶೋಧಕ ನಾಟಕ ಪ್ರದರ್ಶನ ನಡೆಯಲಿದೆ. ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಹಾಗೂ ಮೌಢ್ಯವನ್ನು ವಿರೋಧಿಸುವ ನೂರಾರು ಜನರು ಸದಾಶಿವ ನಗರದ ಸ್ಮಶಾನದಲ್ಲಿ ವಾಸ್ತವ್ಯ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News