ಬರಗಾಲದ ನೆಪದಲ್ಲಿ ಉತ್ಸವ ರದ್ದು ಸಲ್ಲ: ಮಾಜಿ ಸಿಎಂ ಜಗದೀಶ್ ಶೆಟ್ಟರ್

Update: 2018-12-02 14:20 GMT

ಹುಬ್ಬಳ್ಳಿ, ಡಿ. 2: ಬರಗಾಲದ ನೆಪದಲ್ಲಿ ಐತಿಹಾಸಿಕ ಉತ್ಸವಗಳ ರದ್ದು ಸರಿಯಲ್ಲ. ಹಂಪಿ ಉತ್ಸವವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ರವಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿ ನೆಪವೊಡ್ಡಿ ಉತ್ಸವಗಳನ್ನು ರದ್ದು ಮಾಡುವುದಾದರೆ ಎಲ್ಲ ಉತ್ಸವಗಳನ್ನು ರದ್ದು ಮಾಡಬೇಕಿತ್ತು. ಅದು ಬಿಟ್ಟು ಕೆಲ ಉತ್ಸವಗಳ ಆಚರಣೆ ಮತ್ತು ಕೆಲವುಗಳನ್ನು ರದ್ದುಪಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದ್ದು, ಎಲ್ಲ ರಂಗಗಳಲ್ಲೂ ವಿಫಲವಾಗಿದ್ದು, ಸರಕಾರ ಸತ್ತುಹೋಗಿದೆ ಎಂಬ ಭಾವನೆ ಮೂಡುತ್ತಿದೆ. ಸಿಎಂ ಕುಮಾರಸ್ವಾಮಿ ಉದ್ದೇಶಪೂರ್ವಕವಾಗಿ ಉತ್ತರ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆಂದು ಅವರು ದೂರಿದರು.

ಸರ್ವಶಿಕ್ಷಣ ಅಭಿಯಾನದಡಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ಕೊಡಬೇಕಿತ್ತು. ಆದರೆ, ಒಂದು ಜೊತೆ ಮಾತ್ರ ಬಟ್ಟೆ ಕೊಟ್ಟಿದ್ದಾರೆ. ಇನ್ನು 3ತಿಂಗಳು ಕಳೆದರೆ, ಶೈಕ್ಷಣಿಕ ವರ್ಷವೆ ಮುಗಿದು ಹೋಗುತ್ತದೆ. ಇದು ಸರಕಾರದ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ ಎಂದು ಶೆಟ್ಟರ್ ಟೀಕಿಸಿದರು.

ಕೇಂದ್ರ ತನ್ನ ಪಾಲಿನ ಹಣ ಕೊಟ್ಟರೂ ರಾಜ್ಯ ಸರಕಾರ ಕೊಡುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಆದುದರಿಂದ ರಾಜ್ಯ ಸರಕಾರದ ಬೇಜವಾಬ್ದಾರಿತನ ಖಂಡಿಸಿ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News