ರಾಹುಲ್ ಗಾಂಧಿ ದೇವಾಲಯ ಸುತ್ತಾಟದ ಹಿಂದಿನ ರಹಸ್ಯ ಬಿಚ್ಚಿಟ್ಟ ಶಶಿ ತರೂರ್

Update: 2018-12-03 03:58 GMT

ಹೊಸದಿಲ್ಲಿ, ಡಿ.3: ಕಾಂಗ್ರೆಸ್‌ ಸಂಸದ ಶಶಿ ತರೂರ್ ದಿಲ್ಲಿಯಲ್ಲಿ ರವಿವಾರ ನಡೆದ "ಟೈಮ್ಸ್ ಲಿಟ್‌ಫೆಸ್ಟ್"ನಲ್ಲಿ ತಮ್ಮ ಇತ್ತೀಚಿನ ಕೃತಿ "ದ ಪೆರಡಾಕ್ಸಿಕಲ್ ಪ್ರೈಮ್ ಮಿನಿಸ್ಟರ್" ಬಗ್ಗೆ ಪ್ರಸ್ತಾಪಿಸಿದ್ದಲ್ಲದೇ, ಹಿಂದುತ್ವ, ನಂಬಿಕೆಗಳು, ಸರ್ಕಾರ ಮತ್ತು ಆಡಳಿತ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆಯೂ ಸ್ಪಷ್ಟಪಡಿಸಿದರು.

ಇದಕ್ಕೆ ವೇದಿಕೆ ಕಲ್ಪಿಸಿದ್ದು ರಾಹುಲ್‌ ಗಾಂಧಿಯವರ ದೇವಾಲಯ ಸುತ್ತಾಟದ ಬಗೆಗಿನ ಪ್ರಶ್ನೆ. ದೀರ್ಘಕಾಲದಿಂದಲೂ ನಾವು ಕಾಂಗ್ರೆಸ್ಸಿಗರು ನಮ್ಮ ಖಾಸಗಿ ನಂಬಿಕೆಗಳನ್ನು ಸರಾಗವಾಗಿ ಅಭಿವ್ಯಕ್ತಪಡಿಸಬೇಕು ಎಂಬ ಭಾವನೆ ಹೊಂದಿದ್ದೆವು. ನಾವು ನಂಬಿಕೆಗಳನ್ನು ಅನುಸರಿಸಿದರೂ, ಅದನ್ನು ಬಹಿರಂಗವಾಗಿ ಅಭಿವ್ಯಕ್ತಪಡಿಸುತ್ತಿರಲಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಪೂರ್ವದಿಂದಲೂ ನೆಹರೂ ಅವರ ಜಾತ್ಯತೀತ ಸಿದ್ಧಾಂತದಲ್ಲಿ ಬೆಳೆದದ್ದು ಇದಕ್ಕೆ ಕಾರಣ" ಎಂದು ತರೂರ್ ಸ್ಪಷ್ಟಪಡಿಸಿದರು. ಪಕ್ಷದ ಈ ವಿವೇಚನೆಯನ್ನು ಬಿಜೆಪಿ ನೈಜ ಹಿಂದೂಗಳು ಹಾಗೂ ನಾಸ್ತಿಕ ಜಾತ್ಯತೀತವಾದಿಗಳ ನಡುವಿನ ಸಮರ ಎಂದು ಬಿಂಬಿಸಿತ್ತು ಎಂದರು.

"ಧಾರ್ಮಿಕತೆ ಆಳವಾಗಿರುವ ಭಾರತದಂಥ ದೇಶದಲ್ಲಿ ಈ ಚೌಕಟ್ಟಿನಲ್ಲಿ ಚರ್ಚಿಸಿದರೆ, ಜಾತ್ಯತೀತವಾದ ಸೋಲುತ್ತದೆ. ಆದರೆ ನಮ್ಮ ನಂಬಿಕೆಯನ್ನು ಬಹಿರಂಗವಾಗಿ ತೋರಿಸಲು ಇದು ಸೂಕ್ತ ಸಮಯ. ಆದರೆ ಅದನ್ನು ಎಲ್ಲರ ಪಾಲ್ಗೊಳ್ಳುವಿಕೆಯ ಮತ್ತು ಇತರ ಧರ್ಮಗಳನ್ನು ಸ್ವೀಕರಿಸುವ ಚೌಕಟ್ಟಿನಲ್ಲಿ ಮಾಡುತ್ತೇವೆ" ಎಂದು ತರೂರ್ ವಿಶ್ಲೇಷಿಸಿದರು.

ಪ್ರಚಾರ ಕಾರ್ಯದ ವೇಳೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ರಾಹುಲ್ ಕ್ರಮವನ್ನು ಸಮರ್ಥಿಸಿದ ತರೂರ್, "ಇದನ್ನು ಸಿನಿಕತನ ಅಥವಾ ಅವಕಾಶವಾದ ಎಂದು ಬಿಂಬಿಸುವುದು ಸರಿಯಲ್ಲ. ರಾಹುಲ್ ತಮ್ಮನ್ನು ಶಿವಭಕ್ತ ಎಂದು ಪ್ರಜ್ಞಾಪೂರ್ವಕವಾಗಿಯೇ ಕರೆದುಕೊಂಡಿದ್ದಾರೆ. ಅವರು ದೇವಾಲಯದಲ್ಲಿ ಭಾವಚಿತ್ರ ತೆಗೆಸಿಕೊಳ್ಳುವ ಮುನ್ನವೇ ನಾನು ಅವರ ಜತೆ ಧರ್ಮ ಹಾಗೂ ಆಧ್ಯಾತ್ಮದ ಬಗ್ಗೆ ಚರ್ಚಿಸಿದ್ದೆ. ಅವರು ಧರ್ಮ ಹಾಗೂ ಆಧ್ಯಾತ್ಮದ ಬಗ್ಗೆ ತಿಳಿದುಕೊಂಡ ಭಾರತದ ಅತ್ಯಂತ ವಿವೇಚನಾಶೀಲ ಹಾಗೂ ಅಧ್ಯಯನಶೀಲ ರಾಜಕಾರಣಿ" ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News