ಅಥೆನ್ಸ್‌ನ ಅಂಗಳದಲ್ಲಿ...

Update: 2018-12-03 18:39 GMT

ರಾಜಕೀಯ ನಾಯಕರಲ್ಲಿ ಅಡಗೂರು ಎಚ್. ವಿಶ್ವನಾಥ್ ಅವರದು ಭಿನ್ನ ವ್ಯಕ್ತಿತ್ವ. ರಾಜಕೀಯದೊಳಗಿದ್ದೂ ತನ್ನ ಸೃಜನಶೀಲ ಮನಸ್ಸನ್ನು ಉಳಿಸಿಕೊಂಡವರು ವಿಶ್ವನಾಥ್. ವೈಚಾರಿಕ ಕಣ್ಣುಗಳ ಮೂಲಕ ಸಮಾಜವನ್ನು ನೋಡುತ್ತಾ ಬಂದವರು. ಅವರ ‘ಹಳ್ಳಿ ಹಕ್ಕಿಯ ಹಾಡು’ ಆತ್ಮಕತೆ ರಾಜಕೀಯವಾಗಿ ಸಾಕಷ್ಟು ಸುದ್ದಿ ಮಾಡಿತ್ತು. ನಿಬಿಡ ರಾಜಕೀಯದಲ್ಲಿ ಮಗ್ನರಾಗಿದ್ದೂ ಓದು ಮತ್ತು ಬರಹಗಳ ಆಸಕ್ತಿಯನ್ನು ಉಳಿಸಿಕೊಂಡವರು. ಈ ನಿಟ್ಟಿನಲ್ಲಿ ‘ಸಂಸತ್ ಯಾತ್ರೆಯ ಕಥೆ-ಅಥೆನ್ಸ್‌ನ ರಾಜ್ಯಾಡಳಿತ’ ರಾಜಕಾರಣಿಯಾಗಿ ಅವರು ಕನ್ನಡಕ್ಕೆ ಕೊಟ್ಟ ಅಪರೂಪದ ಕೊಡುಗೆ.
 ಈ ಹಿಂದೆ ಇಂಗ್ಲೆಂಡ್‌ನ ಸಂಸತ್ ಕಲಾಪ, ರಚನೆ, ವಿದ್ಯಮಾನ, ಸಮಾಚಾರಗಳ ಕುರಿತಾದ ಪುಸ್ತಕ ‘ದಿ. ಟಾಕಿಂಗ್ ಶಾಪ್’ ಕೃತಿಯನ್ನು ನೀಡಿದ್ದ ವಿಶ್ವನಾಥ್ ಅವರು ಇದೀಗ ಅವರು ಗ್ರೀಸ್‌ಗೆ ತೆರಳಿ ಅಲ್ಲಿನ ಅಪಾರ ಮಾಹಿತಿಗಳನ್ನು ಓದುಗರ ಜೊತೆಗೆ ಹಂಚಿಕೊಂಡಿದ್ದಾರೆ. ಗ್ರೀಸ್ ಸಂಸ್ಕೃತಿ ಭಾರತದ ಸಂಸ್ಕೃತಿಗಿಂತಲೂ ಪುರಾತನವಾದುದು. ಪ್ರಜಾಸತ್ತೆಗೂ ಗ್ರೀಸ್‌ಗೂ ಇರುವ ಸಂಬಂಧ ಅನುಪಮ. ವಿಶ್ವದ ರಾಜಕೀಯ ಬೆಳವಣಿಗೆಗಳಿಗೆ ಗ್ರೀಸ್‌ನ ಕೊಡುಗೆ ಅಪಾರ. ಇಂಗ್ಲೆಂಡ್‌ನ ಸಂಸತ್‌ನ ಕುರಿತಂತೆ ಪ್ರಕಟಿಸಿದ ಲೇಖನವೇ ಈ ಕೃತಿಯ ರಚನೆಗೂ ಸ್ಫೂರ್ತಿ ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಗ್ರೀಸ್‌ನ ಸಂಸತ್‌ನ್ನು ಅಧ್ಯಯನ ಮಾಡುವುದಕ್ಕಾಗಿಯೇ ಲೇಖಕರು ಆ ದೇಶಕ್ಕೆ ಪ್ರವಾಸ ಬೆಳೆಸಿದರು. ಇಲ್ಲಿ ತಾನು ಕಂಡದ್ದನ್ನಷ್ಟೇ ಬರೆಯದೇ, ಗ್ರೀಸ್‌ನ ಇತಿಹಾಸ, ಸಾಂಸ್ಕೃತಿಕ ಮತ್ತು ರಾಜಕೀಯ ಮುಖಗಳನ್ನು ಅಧ್ಯಯನ ಮಾಡಿ ಬರೆದಿದ್ದಾರೆ. ಮೊದಲ ಅಧ್ಯಾಯದಲ್ಲಿ ಗ್ರೀಸ್‌ನ ಚರಿತ್ರೆಯನ್ನು ಅವಲೋಕಿಸುತ್ತಾರೆ. ಹತ್ತು ಸಾವಿರ ವರ್ಷಗಳ ಹಿಂದಿ ಗ್ರೀಕ್ ಹೇಗೆ ಬೆಳೆಯಿತು, ಅಲ್ಲಿನ ಸಂಸ್ಕೃತಿ, ರಾಜಕೀಯ ಹೇಗೆ ರೂಪುಗೊಂಡಿತು ಎನ್ನುವುದನ್ನು ಪರಿಚಯಿಸುತ್ತಾರೆ. ಗ್ರೀಸ್‌ನ ವೈಭವವನ್ನು ಪರಿಚಯಿಸುತ್ತಲೇ, ‘ಕಾಲದ ತಿರುಗಣೆಯಲ್ಲಿ ಸಾಗಿ ಬಂದ ವ್ಯವಸ್ಥೆಯೊಂದರ ಉಗಮ ಸ್ಥಳದಲ್ಲೇ ನಿರಾಶೆಯ ಕಾರ್ಮೋಡಗಳು ಕವಿದಿದೆ’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ. ಎರಡನೇ ಅಧ್ಯಾಯದಲ್ಲಿ ಗ್ರೀಕ್ ಜನರು ಮತ್ತು ಅವರ ನಂಬಿಕೆಗಳ ಬಗ್ಗೆ ವಿವರಗಳಿವೆ. ಭಾರತದಲ್ಲಿರುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ದೇವತೆಗಳು ಗ್ರೀಕ್‌ನಲ್ಲಿದ್ದಾರೆ. ಅಲ್ಲಿನ ಧಾರ್ಮಿಕ ನಂಬಿಕೆಗಳು ಸಂಸ್ಕೃತಿಯ ತಳಹದಿಯಲ್ಲಿ ನಿಂತಿರುವುದನ್ನು ಗುರುತಿಸುತ್ತಾರೆ. ಹಾಗೆಯೇ ಗ್ರೀಕರ ಜನಪದ, ಅಲ್ಲಿನ ಸಮಾಜ, ಮನೆಗಳು, ಅವರ ಅಲಂಕಾರ, ಸೌಂದರ್ಯ ಪ್ರಜ್ಞೆಗಳನ್ನು ಕೃತಿ ಸವರುತ್ತಾ ಹೋಗುತ್ತದೆ. ರಂಗಭೂಮಿ, ನಾಟಕ ಸಂಸ್ಕೃತಿಗಾಗಿ ಒಂದು ಅಧ್ಯಾಯವನ್ನು ಮೀಸಲಿರಿಸಿದ್ದಾರೆ. ಚುನಾವಣೆಗಳ ಇತಿಹಾಸ, ಮತಪೆಟ್ಟಿಗೆ, ಮತಎಣಿಕೆ ಇತ್ಯಾದಿ ಕುತೂಹಲಕಾರಿ ವಿವರಗಳು ಈ ಕೃತಿಯಲ್ಲಿ ದೊರಕುತ್ತವೆ. ‘ದಿ ಹೆಲಿನಿಕ್ ಪಾರ್ಲಿಮೆಂಟ್’ ನ ಕತೆಯನ್ನು ಹೇಳುತ್ತಾ ನವ ಅಥೆನ್ಸ್‌ನ ಪರಿಚಯವನ್ನು ಮಾಡಿಕೊಡುತ್ತಾರೆ.
 ಗ್ರೀಸ್‌ನ ರಾಜಕೀಯ ಅರಳಿರುವುದು ಅಲ್ಲಿನ ಸಾಂಸ್ಕೃತಿಕ ತಳಹದಿಯ ಮೇಲೆ ಎನ್ನುವುದನ್ನು ಈ ಕೃತಿ ಹೇಳುತ್ತದೆ. ಇದು ಖಂಡಿತವಾಗಿಯೂ ಬರೇ ರಾಜಕೀಯ ಕೃತಿಯಲ್ಲ. ನಾವೆಲ್ಲ ತಿಳಿದುಕೊಳ್ಳಬೇಕಾದ ಗ್ರೀಸ್‌ನ ಸಾಂಸ್ಕೃತಿಕ, ಸಾಮಾಜಿಕ ವಿವರಗಳುಳ್ಳ ಕೃತಿ. ನಮ್ಮ ವರ್ತಮಾನವನ್ನು ಗ್ರೀಸ್ ಎನ್ನುವ ಕನ್ನಡಿಯಲ್ಲಿ ನೋಡಿಕೊಳ್ಳಬೇಕಾಗಿದೆ. ವಿಶ್ವ ಗ್ರೀಸ್‌ಗೆ ಖಂಡಿತವಾಗಿಯೂ ಋಣಿಯಾಗಿರಬೇಕಾಗಿದೆ. ಹಳ್ಳಿ ಹಕ್ಕಿ ಪ್ರಕಾಶನ, ಮೈಸೂರು ಈ ಕೃತಿಯನ್ನು ಹೊರತಂದಿದೆ. 100 ಪುಟಗಳ ಈ ಕೃತಿಯ ಮುಖಬೆಲೆ 100 ರೂಪಾಯಿ.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News