ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಗುತ್ತಿಗೆದಾರರು ಹಿಂದೇಟು

Update: 2018-12-03 18:43 GMT

ಬೆಂಗಳೂರು, ಡಿ.3: ರಾಜ್ಯಾದ್ಯಂತ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಲು ಗುತ್ತಿಗೆದಾರರು ಹಿಂದೆ ಸರಿಯುತ್ತಿದ್ದಾರೆ.

ವಿಶ್ವಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳಿಂದ ಸಾಲ ಪಡೆದು ಕೆಶಿಪ್ ಹಾಗೂ ಕೆಆರ್‌ಡಿಸಿಎಲ್ ಮೂಲಕ ಸುಮಾರು 1530 ಕಿ.ಮೀ.ಉದ್ದದ ರಸ್ತೆಯನ್ನು ಪ್ರತಿ ಕಿ.ಮೀ.ಗೆ 3 ಕೋ.ರೂ.ಗಳ ವೆಚ್ಚದಲ್ಲಿ ಸುಸಜ್ಜಿತವಾಗಿ 19 ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿ ಮಾಡಲಾಗಿದೆ. ಅದರಲ್ಲಿ 17 ರಸ್ತೆಗಳಲ್ಲಿ ಟೋಲ್ ಸಂಗ್ರಹ ಮಾಡಲು ಸರಕಾರ ಒಪ್ಪಿಗೆ ನೀಡಿದೆ. ಆದರೆ, ಅದರಲ್ಲಿ 5 ರಸ್ತೆಗಳಲ್ಲಿ ಟೋಲ್ ಸಂಗ್ರಹ ಮಾಡಲು ಗುತ್ತಿಗೆದಾರರು ಮುಂದಾಗಿದ್ದು, ಉಳಿದ ಕಡೆಗಳಲ್ಲಿ ಟೋಲ್ ಪ್ಲಾಜಾ ಸ್ಥಾಪನೆಗೆ ಯಾರೂ ಮುಂದಾಗುತ್ತಿಲ್ಲ. ಪ್ಲಾಜಾ ಸ್ಥಾಪನೆ ಸಂಬಂಧ ನಾಲ್ಕು-ಐದು ಬಾರಿ ಟೆಂಡರ್‌ಗೆ ಆಹ್ವಾನಿಸಿದ್ದರೂ ಯಾರೊಬ್ಬರೂ ಆಸಕ್ತಿ ತೋರಿಸುತ್ತಿಲ್ಲ.

ಕೆಶಿಪ್ ಮತ್ತು ಕೆಆರ್‌ಡಿಸಿಎಲ್ ವತಿಯಿಂದ ಅಭಿವೃದ್ಧಿ ಮಾಡಿರುವ ರಾಜ್ಯ ಹೆದ್ದಾರಿಗಳು ಗುಣಮಟ್ಟದಿಂದ ಕೂಡಿದ್ದರೂ, ಈ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆ ಇದೆ. ಹೀಗಾಗಿ, ಮೂಲಭೂತ ಸೌಲಭ್ಯ, ಸಿಬ್ಬಂದಿ ನಿರ್ವಹಣೆ ಕಷ್ಟವಾಗುತ್ತದೆ. ಅಲ್ಲದೆ, ಲಾಭಕ್ಕಿಂತ ಖರ್ಚು ಅಧಿಕವಾಗುತ್ತದೆ ಎಂಬ ಕಾರಣದಿಂದಾಗಿ ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದು ಕಡೆ ಟೋಲ್‌ಗೇಟ್‌ಗಳ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿದ್ದು, ಅದಕ್ಕೆ ಜನಪ್ರತಿನಿಧಿಗಳೂ ಕೈಜೋಡಿಸುತ್ತಿದ್ದಾರೆ.

ಹೆದ್ದಾರಿಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ಟೋಲ್ ಸಂಗ್ರಹ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ, ರಸ್ತೆಗಳ ಅಭಿವೃದ್ಧಿಗಾಗಿ ಪಡೆದಿದ್ದ ಸಾಲ ಮತ್ತು ಬಡ್ಡಿ ಪಾವತಿ ಮಾಡಲು ಅನಿವಾರ್ಯವಾಗಿ ಟೋಲ್ ಸಂಗ್ರಹ ಮಾಡಲೇಬೇಕಾಗಿದೆ. 17 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕದ ಮೂಲಕ ವಾರ್ಷಿಕವಾಗಿ 62.86 ಕೋಟಿ ರೂ.ಗಳಷ್ಟು ಆದಾಯ ನಿರೀಕ್ಷೆಯಿತ್ತು. ಅಲ್ಲದೆ, ಈ ರಸ್ತೆಗಳಲ್ಲಿ ಜಾಹೀರಾತು ಹಕ್ಕು, ಒಎಫ್‌ಸಿ ಕೇಬಲ್ ಹಾಗೂ ಸೇವಾ ಶುಲ್ಕ ಸೇರಿದಂತೆ 67.86 ಕೋಟಿ ಸಂಗ್ರಹವಾಗುವ ನಿರೀಕ್ಷೆಯಿತ್ತು. ಇದೀಗ ಇಲಾಖೆಯ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗಿದ್ದು, ಇಲಾಖೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ.

ಎಲ್ಲೆಲ್ಲಿ ಆಸಕ್ತಿ ತೋರಿಸುತ್ತಿಲ್ಲ:

-ಮುದಗಲ್-ತಾವರಗೆರೆ-ಕನಕಗಿರಿ-ಗಂಗಾವತಿ(74 ಕಿ.ಮೀ.)

-ಸಿಂಧನೂರು-ತಾವರೆಗೆರೆ-ಕುಷ್ಟಗಿ(75 ಕಿ.ಮೀ.)

-ತಿಂತಿಣಿ-ಗಬ್ಬೂರ್-ಕಲ್ಮಲ(74 ಕಿ.ಮೀ.)

-ನವಲಗುಂದ-ಗದಗ-ಮುಂಡರಗಿ(80 ಕಿ.ಮೀ.)

-ಮುಧೋಳ-ಮಹಾಲಿಂಗಪುರ-ಚಿಕ್ಕೋಡಿ-ನಿಪ್ಪಾಣಿ-ಮಹಾರಾಷ್ಟ್ರ ಗಡಿ(108 ಕಿ.ಮೀ.)

-ದಾವಣಗೆರೆ-ಸಂತೆಬೆನ್ನೂರು-ಚನ್ನಗಿರಿ(149 ಕಿ.ಮೀ.)

-ಯಡಿಯೂರು-ಕೌಡ್ಲೆ-ಮಂಡ್ಯ(60 ಕಿ.ಮೀ.)

-ಹಾನಗಲ್-ಶಿಕಾರಿಪುರ(144 ಕಿ.ಮೀ.)

-ಕುಪ್ಪಳ್ಳಿ-ಕವಿಶೈಲ ಮತ್ತು ಶಿವಮೊಗ್ಗ-ಶಿಕಾರಿಪುರ-ಆನವಟ್ಟಿ-ಹಾನಗಲ್(128 ಕಿ.ಮೀ.)

-ದಾಬಸ್‌ಪೇಟೆ-ಕೊರಟಗೆರೆ-ಪಾವಗಡ-ಕಂಬದೂರ್(91 ಕಿ.ಮೀ.)

-ಗುಬ್ಬಿ-ಸಿ.ಎಸ್.ಪುರ-ಬೀರಗೋನಹಳ್ಳಿ(49 ಕಿ.ಮೀ.)

-ಮಳವಳ್ಳಿ-ಮದ್ದೂರು-ಶಿವಮೊಗ್ಗ-ಹುಲಿಯೂರು ದುರ್ಗ-ಕುಣಿಗಲ್-ತುಮಕೂರು(150 ಕಿ.ಮೀ.)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News