ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಮಷಿನ್ ಬಳಸಿಕೊಳ್ಳುವ ಚಿಂತನೆ: ಶ್ರೀನಿವಾಸಚಾರಿ

Update: 2018-12-04 06:41 GMT

ಮೈಸೂರು, ಡಿ. 4: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಮಷಿನ್ ಬಳಸಿಕೊಳ್ಳುವ ಚಿಂತನೆ ನಡೆಯುತ್ತಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಚಾರಿ ತಿಳಿಸಿದರು.

ನಗರದ ಲಲಿತ್ ಮಹಲ್ ಹೋಟೆಲ್ ನಲ್ಲಿ ಮಂಗಳವಾರದಿಂದ ಎರಡು ದಿನಗಳವರೆಗೆ ನಡೆಯುತ್ತಿರುವ ದೇಶದ ವಿವಿಧ ರಾಜ್ಯಗಳ ಚುನಾವಣಾ ಆಯುಕ್ತರ 27ನೇ ಸಮ್ಮೇಳನದಲ್ಲಿ ಪಾಲ್ಗೊಂಡು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಮಷಿನ್ ಬಳಸಿಕೊಳ್ಳಲು ಚಿಂತಿಸಲಾಗುತ್ತಿದೆ. ಆದರೆ ಇದರ ವೆಚ್ಚ ಸಾಕಷ್ಟು ತಗುಲಲಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ಸಮ್ಮೇಳನ ಪ್ರತಿವರ್ಷ ನಡೆಯುತ್ತದೆ. ಆಯಾ ರಾಜ್ಯಗಳ ಚುನಾವಣಾ ಆಯುಕ್ತರು ಅಲ್ಲಿ ಹೇಗೆ ಚುಣಾವಣೆ ನಡೆಸಿದರು ಮತ್ತು ಅಲ್ಲಿನ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುತ್ತದೆ. 

ಗುಜರಾತ್ ರಾಜ್ಯದಲ್ಲಿ ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಆನ್ ಲೈನ್ ನಾಪತ್ರ ಸಲ್ಲಿಕೆ ಮತ್ತು ಆನ್ ಲೈನ್ ಓಟಿಂಗ್ ತಂದಿದ್ದು, ಮಹರಾಷ್ಟ್ರದಲ್ಲೂ ಆನ್ ಲೈನ್ ನಾಮಪತ್ರ ಸಲ್ಲಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ವ್ಯವಸ್ಥೆ ರಾಜ್ಯದಲ್ಲೂ ತರಬಹುದೇ ? ಇದರ ಸಾಧಕ ಬಾದಕಗಳ ಚರ್ಚೆ ನಡೆಯುತ್ತದೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದ ಚುನಾವಣಾ ಆಯುಕ್ತ ಪರುಶರಾಮ್ ಮಾತನಾಡಿ ಚುನಾವಣಾ ಆಯೋಗ ಹಲವಾರು ಸಂದಿಗ್ದ ಪರಿಸ್ಥಿತಿಯನ್ನು ಎದುರಿಸುತ್ತದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕೆಲವರು ಕೋರ್ಟ್ ಮೆಟ್ಟಿಲು ಹತ್ತುತ್ತಾರೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗ ಯಾವ ರೀತಿ ಎದುರಿಸುತ್ತದೆ ಎಂಬುದರ ಕುರಿತು ಪರಸ್ಪರ ಚರ್ಚೆಗಳಾಗುತ್ತವೆ. ಮೈಸೂರು ಒಂದು ಸುಂದರ ನಗರ. 32 ವರ್ಷಗಳ ನಂತರ ನಾನು ಮೈಸೂರಿಗೆ ಭೇಟಿ ನೀಡುತಿದ್ದೇನೆ ಎಂದರು.

ಚುನಾವಣೆಗೆ ಬಳಸುವ ಇಂಕ್ ಮೈಸೂರಿನಲ್ಲೇ ತಯಾರಾಗುವುದು. ಇದರಷ್ಟು ಗುಣಮಟ್ಟದ ಇಂಕನ್ನು ಬೇರೆ ಯಾವುದೇ ಸಂಸ್ಥೆ ತಯಾರು ಮಾಡಲು ಸಾಧ್ಯವಿಲ್ಲ. ಮಧ್ಯಪ್ರದೇಶದಲ್ಲಂತೂ ಇದೇ ಇಂಕ್ ಬಳಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News