36 ಎಕರೆ ವಿಶಾಲ ಕೆರೆಯ ನೀರು ಬರಿದು ಮಾಡುತ್ತಿರುವುದೇಕೆ ಗೊತ್ತೇ ?

Update: 2018-12-05 10:26 GMT

ಹುಬ್ಬಳ್ಳಿ, ಡಿ. 5: ಸಮೀಪದ ಮೊರಬ ಗ್ರಾಮದಲ್ಲಿ ಕಳೆದ ವಾರ ಎಚ್‌ಐವಿ ಪೀಡಿತ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ, ಈ ಕೆರೆಯ ನೀರು ಕುಡಿಯಲು ಗ್ರಾಮಸ್ಥರು ನಿರಾಕರಿಸಿದ್ದಾರೆ.

ಗ್ರಾಮಸ್ಥರ ಮನವೊಲಿಸುವಲ್ಲಿ ವಿಫಲರಾದ ಅಧಿಕಾರಿಗಳು ಇದೀಗ 36 ಎಕರೆಯ ವಿಶಾಲ ಕೆರೆಯನ್ನು ಬರಿದುಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ. ಬಳಿಕ ಮಲಪ್ರಭಾ ನೀರಿನಿಂದ ಮತ್ತೆ ಕೆರೆ ತುಂಬಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಮುಂದಾಗಿದ್ದಾರೆ.

ಮೊರಬ ಕೆರೆ ನವಲಗುಂದ ತಾಲೂಕಿನಲ್ಲೇ ಅತಿದೊಡ್ಡ ಕೆರೆಯಾಗಿದ್ದು, ಗ್ರಾಮಸ್ಥರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಏಕೈಕ ಮೂಲವಾಗಿದೆ. ಮಹಿಳೆಯ ಆತ್ಮಹತ್ಯೆ ಘಟನೆ ಬಳಿಕ ಗ್ರಾಮಸ್ಥರು 2-3 ಕಿಲೋಮೀಟರ್ ನಡೆದುಕೊಂಡು ಮಲಪ್ರಭಾ ಕಾಲುವೆಗೆ ತೆರಳಿ ಕುಡಿಯುವ ನೀರು ತರುತ್ತಿದ್ದಾರೆ.

"ಇದು ದುರದೃಷ್ಟಕರ. ನೀರಿನ ಮೂಲಕ ಎಚ್‌ಐವಿ ಹರಡುವುದಿಲ್ಲ ಎಂದು ನಾವು ಗ್ರಾಮಸ್ಥರಿಗೆ ಹೇಳುತ್ತಲೇ ಇದ್ದೇವೆ. ಆದರೆ ಈ ಕೆರೆಯ ನೀರು ಕುಡಿಯಲು ಜನ ಒಪ್ಪುತ್ತಿಲ್ಲ. ಆದ್ದರಿಂದ ಕೆರೆಯಿಂದ ನೀರು ಹೊರಹಾಕುವ ಕಾರ್ಯ ಆರಂಭಿಸಿದ್ದೇವೆ" ಎಂದು ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಹೇಳಿದ್ದಾರೆ.

ಎಚ್‌ಐವಿಗೆ ಕಾರಣವಾಗುವ ವೈರಸ್ ಮನುಷ್ಯರ ಸ್ರಾವಗಳ ಮೂಲಕ ಮಾತ್ರ ಹರಡುತ್ತದೆ. ದೇಹದಿಂದ ಹೊರಗೆ ಗಾಳಿ ಅಥವಾ ನೀರಿನಲ್ಲಿ ಒಂದು ನಿಮಿಷವೂ ಅದು ಉಳಿಯುವುದಿಲ್ಲ. "ಜನ ಭೀತಿಯಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ" ಎನ್ನುವುದು ಎಚ್‌ಐವಿ ರೋಗಿಗಳ ಆರೈಕೆ ಮಾಡುತ್ತಿರುವ ಆಶಾ ಫೌಂಡೇಷನ್‌ನ ಡಾ. ಗ್ಲೋರಿ ಅಲೆಗ್ಸಾಂಡರ್ ಅವರ ಹೇಳಿಕೆ.

ಗ್ರಾಮಸ್ಥರು ತಿಳಿವಳಿಕೆ ಕೊರತೆಯಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ. ವಾಸ್ತವವಾಗಿ ಎಚ್‌ಐವಿ ಪೀಡಿತ ವ್ಯಕ್ತಿ ಮೃತಪಟ್ಟಾಗ ವೈರಸ್ ಕೂಡಾ ಸಾಯುತ್ತದೆ. ದೇಹದಿಂದ ಹೊರಗೆ ವೈರಸ್ ಬಂದರೆ ಕೂಡಾ ಕೆಲವೇ ಸೆಕೆಂಡ್‌ಗಳಲ್ಲಿ ಅದು ಸಾಯುತ್ತದೆ. ಈ ಸೋಂಕು ನೀರಿನಿಂದ ಹರಡುವ ಸಾಧ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಎಚ್‌ಐವಿ ಪೀಡಿತ ಮಹಿಳೆಯ ಶವ ನ. 29ರಂದು ಕೆರೆಯಲ್ಲಿ ಪತ್ತೆಯಾಗಿದ್ದು, ತಕ್ಷಣ ಈ ಸುದ್ದಿ ಹರಡಿ ಗ್ರಾಮದಲ್ಲಿ ದಿಗಿಲು ಹುಟ್ಟಿಕೊಂಡಿತು. ಗ್ರಾಮಸ್ಥರು ಕೆರೆಯ ನೀರು ಕುಡಿಯಲು ನಿರಾಕರಿಸಿ, ಕೆರೆ ಖಾಲಿ ಮಾಡುವಂತೆ ಗ್ರಾಮಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮೇಲೆ ಒತ್ತಡ ತಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News