ಡಿ.7 ರಿಂದ ರಾಜ್ಯ ಮಟ್ಟದ ಯುವಜನೋತ್ಸವ: ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್

Update: 2018-12-05 19:09 GMT

ತುಮಕೂರು,ಡಿ.5: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಸಂಘಗಳ ಒಕ್ಕೂಟ, ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯತ್ ಸಂಯುಕ್ತಾಶ್ರಯದಲ್ಲಿ 2018-19ನೇ ಸಾಲಿನ ರಾಜ್ಯ ಮಟ್ಟದ ಯುವಜನೋತ್ಸವವು ಡಿ.7 ರಿಂದ 9ರವರೆಗೆ ಮೂರು ದಿನಗಳ ಕಾಲ ತುಮಕೂರು ನಗರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ ಕುಮಾರ್ ಕೆ. ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯುವಜನೋತ್ಸವ ಪ್ರಯುಕ್ತ ಗಾಜಿನಮನೆಯಲ್ಲಿ ಡಾ.ಗುಬ್ಬಿವೀರಣ್ಣ ವೇದಿಕೆ, ಬಾಲಭವನದಲ್ಲಿ ಅಮರ ಶಿಲ್ಪಿ ಜಕಣಾಚಾರಿ ವೇದಿಕೆ, ವಿಶ್ವವಿದ್ಯಾನಿಲಯದಲ್ಲಿ ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ ವೇದಿಕೆ, ಕನ್ನಡಭವನದಲ್ಲಿ ಬಿ.ಎಂ.ಶ್ರೀ ವೇದಿಕೆ ಹಾಗೂ ವಿಶ್ವವಿದ್ಯಾನಿಲಯದಲ್ಲಿ ವಿಶ್ವೇಶ್ವರಯ್ಯ ಆಡಿಟೋರಿಯಂನಲ್ಲಿ ತೀ.ನಂ.ಶ್ರೀ ವೇದಿಕೆಯನ್ನು ನಿರ್ಮಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.  

ಡಿ.7ರಂದು ಸಂಜೆ 4 ಗಂಟೆಗೆ ಮುಖ್ಯ ವೇದಿಕೆಯಾದ ಡಾ.ಗುಬ್ಬಿ ವೀರಣ್ಣ ವೇದಿಕೆ(ಗಾಜಿನಮನೆ, ಅಮಾನಿಕೆರೆ)ಯಲ್ಲಿ ಉಪ ಮುಖ್ಯ ಮಂತ್ರಿಗಳು ಹಾಗೂ ಗೃಹ, ಬೆಂಗಳೂರು ನಗರಾಭಿವೃದ್ದಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಜಿ.ಪರಮೇಶ್ವರ ಇವರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕರಾದ ಜಿ.ಬಿ ಜ್ಯೋತಿಗಣೇಶ್ ವಹಿಸಲಿದ್ದು, ಕಾರ್ಮಿಕ ಇಲಾಖೆ ಸಚಿವರಾದ ವೆಂಕಟರಮಣಪ್ಪ ಹಾಗೂ ಸಣ್ಣ ಕೈಗಾರಿಕಾ ಇಲಾಖೆ ಸಚಿವರಾದ ಎಸ್ ಆರ್ ಶ್ರೀನಿವಾಸ್ ಇವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾನ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಲೋಕಸಭಾ ಸದಸ್ಯರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.  

ಡಿಸೆಂಬರ್ 07 ರ ಸಂಜೆ 4.00 ಗಂಟೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಪೂರ್ವ ಭಾವಿಯಾಗಿ ಟೌನ್ ಹಾಲ್ ವೃತ್ತದಿಂದ ಗಾಜಿನ ಮನೆಯವರೆಗೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಏರ್ಪಡಿಸಲಾಗಿದೆ. ರಾಜ್ಯ ಮಟ್ಟದ ಯುವಜನೋತ್ಸವದ ವಿಶೇಷ ಆಕರ್ಷಣೆಯಾಗಿ ಉದ್ಘಾಟನೆ ನಂತರ ಸಂಜೆ 6 ಗಂಟೆಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಇವರ ಕಲಾ ತಂಡಗಳಿಂದ ‘ಸಾಂಸ್ಕೃತಿಕ ಸಂಜೆ’ ಆಯೋಜಿಸಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಅಂದೇ 6 ಗಂಟೆಯಿಂದ ವಿವಿಧ ಸ್ಪರ್ಧೆಗಳು ಜರುಗಲಿದ್ದು, ಅಮರ ಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಮಣಿಪುರಿ, ಓಡಿಸ್ಸಿ ಹಾಗೂ ಕಥಕ್ ನೃತ್ಯ, ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಏಕಾಂಕ ನಾಟಕ, ಬಿ.ಎಂ.ಶ್ರೀ ವೇದಿಕೆಯಲ್ಲಿ ಸಿತಾರ್ ಮತ್ತು ಗಿಟಾರ್ ವಾದನ, ತೀ.ನಂ.ಶ್ರೀ ವೇದಿಕೆಯಲ್ಲಿ ವೀಣಾವಾದನ ಕಲಾಸ್ಪರ್ಧೆಗಳು ನಡೆಯಲಿವೆ ಎಂದು ಅವರು ಹೇಳಿದರು.  

ಡಿಸೆಂಬರ್ 8ರಂದು ಉತ್ಸವದ ಎರಡನೇ ದಿನದಂದು ಬೆಳಗ್ಗೆ 9 ಗಂಟೆಯಿಂದ ಸಂಜೆ ಮುಕ್ತಾಯದವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಡಾ: ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಜನಪದ ನೃತ್ಯ, ಅಮರ ಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಭರತನಾಟ್ಯ ಹಾಗೂ ಕುಚುಪುಡಿ; ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಏಕಾಂಕ ನಾಟಕ, ಬಿ.ಎಂ.ಶ್ರೀ ವೇದಿಕೆಯಲ್ಲಿ ಕರ್ನಾಟಕ ಸಂಗೀತ ಮತ್ತು ಹಾರ್ಮೋನಿಯಂ, ತೀ.ನಂ.ಶ್ರೀ ವೇದಿಕೆಯಲ್ಲಿ ಕೊಳಲು, ಮೃದಂಗ ಮತ್ತು ತಬಲ ವಾದನ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ತಿಳಿಸಿದರು. 

ಡಿ.9ರ ಸಮಾರೋಪ ದಿನದಂದು ಬೆಳಗ್ಗೆ 9 ಗಂಟೆಯಿಂದ ಮುಕ್ತಾಯದವರೆಗೆ ವಿವಿಧ ಕಲಾ ಸ್ಪರ್ಧೆಗಳು ನಡೆಯಲಿದ್ದು,ಅಮರ ಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಜನಪದಗೀತೆ, ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಹಿಂದೂಸ್ಥಾನಿ ಸಂಗೀತ, ತೀ.ನಂ.ಶ್ರೀ ವೇದಿಕೆಯಲ್ಲಿ ಆಶುಭಾಷಣ ಸ್ಪರ್ಧೆ ನಡೆಯಲಿದೆ. ಸಮಾರೋಪ ಸಮಾರಂಭದ ನಂತರ ಖ್ಯಾತ ಗಾಯಕರುಗಳಾದ ಶ್ರೀಮತಿ ಡಾ.ಶಮಿತಾ ಮಲ್ನಾಡ್ ಮತ್ತು ಹೇಮಂತ್ ಇವರಿಂದ ‘ಗಾನ ನೃತ್ಯ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.  

ಡಿ.9ರ ಸಂಜೆ 4 ಗಂಟೆಗೆ ಗಾಜಿನ ಮನೆಯ ಡಾ.ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಸಮಾರೋಪ ದಿನದ ಕಾರ್ಯಕ್ರಮಗಳ ಉದ್ಘಾಟನೆಯನ್ನು ಉಪ ಮುಖ್ಯ ಮಂತ್ರಿಗಳಾದ ಡಾ. ಜಿ.ಪರಮೇಶ್ವರ ನೆರವೇರಿಸಲಿದ್ದು, ಜಿಲ್ಲೆಯ ಎಲ್ಲಾ ಲೋಕಸಭಾ ಸದಸ್ಯರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. 

ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ತುಮಕೂರಿನಲ್ಲಿ ಆಯೋಜಿಸುತ್ತಿರುವುದು ತುಮಕೂರು ಜಿಲ್ಲೆಯ ಘನತೆಯ ದ್ಯೋತಕವಾಗಿದೆ. ರಾಜ್ಯಾದ್ಯಂತ 30 ಜಿಲ್ಲೆಗಳಿಂದ 15 ರಿಂದ 29 ವರ್ಷ ವಯೋಮಿತಿಯ 1700 ವಿವಿಧ ಕಲಾವಿದರು 18 ರೀತಿಯ ಕಲಾ ಪ್ರಕಾರಗಳಲ್ಲಿ ಸ್ಪರ್ಧಿಸಲಿರುವುದರಿಂದ ರಾಜ್ಯಾದ್ಯಂತದಿಂದ ಆಗಮಿಸಿರುವ ಕಲಾವಿದರಿಗೆ ಪ್ರೋತ್ಸಾಹಿಸಲು ತುಮಕೂರು ಜಿಲ್ಲೆಯ ಜನತೆ ಹಾಗೂ ವಿಶೇಷವಾಗಿ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಂದು ತಿಳಿಸಿದರು.  

ಇಲ್ಲಿಯವರೆಗೂ 823 ಯುವಕರು ಹಾಗೂ 623 ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇನ್ನೂ 1700 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕಾಗಿ ಕ್ರೀಡಾ ಇಲಾಖೆಯಿಂದ 25 ಲಕ್ಷ ರೂ. ಹಾಗೂ ಜಿಲ್ಲಾ ಪಂ. ನಿಂದ ಕ್ರೀಡಾ ಇಲಾಖೆಗೆ ನೀಡಬೇಕಾಗಿದ್ದ 25ಲಕ್ಷ ರೂ. ಒಟ್ಟು 50 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸಿಇಓ ಅನೀಸ್ ಕಣ್ಮಣಿ ಜಾಯ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ. ಜಯಲಕ್ಷ್ಮಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News