ದೇಶದಲ್ಲಿ ಮಂದಿರಗಳ ಕೊರತೆಯಿದೆಯೇ?

Update: 2018-12-06 05:56 GMT

ಮಧ್ಯ ಪ್ರದೇಶದ ಗ್ವಾಲಿಯರ್ ನಿವಾಸಿ ಅಮಿತ್ ಕುಮಾರ್ ಮಧ್ಯ ಚೇತ್ರ ವಿದ್ಯುತ್ ವಿತರಣ್ ಕಂಪೆನಿಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದು ತಿಂಗಳಿಗೆ 8,000ರೂ. ಗಳಿಸುತ್ತಾರೆ. ಬೆಳಗ್ಗೆ ಹತ್ತರಿಂದ ಸಂಜೆ ಆರರವರೆಗೆ ಗ್ವಾಲಿಯರ್‌ನಲ್ಲಿ ಮನೆಮನೆಗೆ ತೆರಳಿ ವಿದ್ಯುಚ್ಛಕ್ತಿ ಮೀಟರ್‌ಗಳನ್ನು ಪರೀಕ್ಷಿಸುವ ಕೆಲಸ ಮಾಡುವ ಅಮಿತ್ ಉಳಿದ ಸಮಯದಲ್ಲಿ ತಮ್ಮ ಮನೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ.

1992ರ ಜುಲೈಯಲ್ಲಿ ಜನಿಸಿದ ಅಮಿತ್‌ಕುಮಾರ್‌ಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಪ್ರಯತ್ನಿ ಸುತ್ತಿದೆ ಮತ್ತು ಈ ಪ್ರಕರಣ ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿದೆ ಎಂಬ ವಿಷಯ ವಾಟ್ಸ್‌ಆ್ಯಪ್ ಮೂಲಕ ತಿಳಿದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೇ ಎಂದು ಅಮಿತ್‌ರನ್ನು ಕೇಳಿದರೆ ಅವರು ತಕ್ಷಣ, ಬೇಡ ಎಂದು ಉತ್ತರಿಸುತ್ತಾರೆ. ಇನ್ನೊಂದು ಮಂದಿರ ನಿರ್ಮಾಣದಿಂದ ದೇಶದ ಜನರಿಗೆ ಆಗುವ ಪ್ರಯೋಜನವಾದರೂ ಏನು? ಈಗಲೇ ನಮ್ಮಲ್ಲಿ ಸಾಕಷ್ಟು ಮಂದಿರಗಳಿಲ್ಲವೇ? ಎಂದವರು ಪ್ರಶ್ನಿಸುತ್ತಾರೆ.

 ಮಧ್ಯ ಪ್ರದೇಶದ ಬಿಂಡ್ ಜಿಲ್ಲೆಯ ಲಹರ್ ಪಟ್ಟಣದಲ್ಲಿ ಬೆಳೆದ ಅಮಿತ್ ಸರಕಾರಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಮುಗಿಸಿದ ನಂತರ ಗ್ವಾಲಿಯರ್‌ಗೆ ಸ್ಥಳಾಂತರಗೊಂಡರು. ಅವರ ತಂದೆ ಲಹರ್‌ನಲ್ಲಿ ಸಣ್ಣ ಅಂಗಡಿಯನ್ನು ಹೊಂದಿದ್ದಾರೆ. ಮೂರು ಮಕ್ಕಳಲ್ಲಿ ಅಮಿತ್ ಹಿರಿಯವರಾಗಿದ್ದು ಬಡತನದ ಕಾರಣ ಹೆಚ್ಚು ಓದಲು ಸಾಧ್ಯವಾಗಲಿಲ್ಲ. ಮಧ್ಯ ಪ್ರದೇಶದಲ್ಲಿ ಚುನಾವಣೆಯ ಕುರಿತು ಮಾತನಾಡಿದ ಅಮಿತ್, ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಆಳ್ವಿಕೆಯಿದೆ. ಈ ಬಾರಿ ಯುವಜನತೆ ಬದಲಾವಣೆ ಬಯಸಿದ್ದಾರೆ. ನಿರುದ್ಯೋಗ, ರೈತರ ಸಮಸ್ಯೆಗಳು ರಾಜ್ಯದ ಜನರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಬಿಜೆಪಿ ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಜನರು ಇತರ ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಲು ಬಯಸಿದ್ದಾರೆ ಎಂದು ತಿಳಿಸುತ್ತಾರೆ.

ಕೇಂದ್ರದ ನರೇಂದ್ರ ಮೋದಿ ಸರಕಾರವು ಉದ್ಯೋಗಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕು ಮತ್ತು ನನ್ನಂಥ ಕೋಟ್ಯಂತರ ಯುವಕರು ತಮ್ಮ ಕುಟುಂಬಕ್ಕೆ ಒಂದು ಉತ್ತಮ ಜೀವನವನ್ನು ನೀಡಲು ಸಾಧ್ಯವಾಗುವಂತೆ ಮಾಡಬೇಕು ಎಂದು ಅವರು ವಿನಂತಿಸುತ್ತಾರೆ.

ಜನರು ಕಷ್ಟದಿಂದ ಸಂಪಾದಿಸಿದ ಹಣವನ್ನು ಮಂದಿರ ನಿರ್ಮಾಣಕ್ಕೆ ಯಾಕೆ ಹಾಳು ಮಾಡಬೇಕು? ಗುಜರಾತ್‌ನಲ್ಲಿ ಪ್ರತಿಮೆಯನ್ನು ನಿರ್ಮಿಸಲು ಎಷ್ಟು ಹಣವನ್ನು ಹಾಳು ಮಾಡಲಾಯಿತು ಎನ್ನುವುದನ್ನು ನಾನು ಓದಿ ತಿಳಿದೆ. ನಾನೆಂದಾದರೂ ಆ ಪ್ರತಿಮೆಯನ್ನು ಅಥವಾ ಮಂದಿರವನ್ನು ನೋಡಲು ಹೋಗುತ್ತೇನೆಯೇ? ಇಲ್ಲ. ಈ ಕಟ್ಟಡಗಳು ಮತ್ತು ಪ್ರತಿಮೆಗಳು ನನ್ನ ಹಾಗೂ ನನ್ನ ಬಡ ಹೆತ್ತವರ ಜೀವನದಲ್ಲಿ ಯಾವುದೇ ಬದಲಾವಣೆ ತರಲು ಹೇಗೆ ಸಾಧ್ಯ ಎಂದು ಅಮಿತ್ ಪ್ರಶ್ನಿಸುತ್ತಾರೆ.

Writer - ಅಮಿತ್ ಕುಮಾರ್, ಗ್ವಾಲಿಯರ್

contributor

Editor - ಅಮಿತ್ ಕುಮಾರ್, ಗ್ವಾಲಿಯರ್

contributor

Similar News