ಕೃಷಿಕರ ಭದ್ರತೆಗೆ ಮೊದಲ ಆದ್ಯತೆ, ನಂತರ ವರದಿ ಮಂಡನೆ: ಪ.ಘಟ್ಟ ಪ್ರದೇಶದಲ್ಲಿ ಕೃಷಿ ವಲಯ ಗುರುತಿಸಲು ಒಕ್ಕೊರಲಿನ ಆಗ್ರಹ

Update: 2018-12-06 17:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.6: ಮಲೆನಾಡು ಹಾಗೂ ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಕೃಷಿ ವಲಯ ಗುರುತಿಸಬೇಕು ಹಾಗೂ ಕೃಷಿಕರಿಗೆ ಭದ್ರತೆ ಒದಗಿಸಿದ ನಂತರ ಮಾಧವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿ ಜಾರಿಗೆ ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದು ಪರಿಸರವಾದಿಗಳು ಹಾಗೂ ಪರಿಸರ ಹೋರಾಟಗಾರರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಗುರುವಾರ ನಗರದ ಶಾಸಕರ ಭವನದಲ್ಲಿ ಮಲೆನಾಡು ಉಳಿಸಿ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ‘ಮಾಧವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಪಶ್ಚಿಮಘಟ್ಟ ಮತ್ತು ಮಲೆನಾಡನ್ನು ರಕ್ಷಿಸಲು ಸಾಧ್ಯವೇ?’ ಕುರಿತ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಲ್ಲರೂ ಈ ವರದಿಗಳಲ್ಲಿ ಕೃಷಿ ವಲಯದ ವ್ಯಾಖ್ಯಾನ ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿಂತಕ ಎ.ಕೆ.ಸುಬ್ಬಯ್ಯ, ಮಾಧವ ಗಾಡ್ಗೀಳ್ ವರದಿ ಹಾಗೂ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ಕೃಷಿ ವಲಯದ ಮೇಲೆ ದುಷ್ಪರಿಣಾಮ ಬೀರುವ ಮೂಲಕ ಕ್ರಮೇಣವಾಗಿ ಕೃಷಿಯೇ ನಾಶವಾಗುತ್ತದೆ. ಆದುದರಿಂದಾಗಿ ಮಲೆನಾಡು ಪ್ರದೇಶದಲ್ಲಿ ಕೃಷಿಗೆ ಪೂರಕವಾದ ಯೋಜನೆಗಳನ್ನು ಜಾರಿ ಮಾಡಲಿ ಎಂದರು.

ಸರಕಾರಗಳು ಅರಣ್ಯ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯ ವಲಯದಲ್ಲಿ ಜಾರಿ ಮಾಡಲಿ. ಕೃಷಿ ವಲಯವನ್ನು ಅದರಲ್ಲಿ ಸೇರ್ಪಡೆ ಮಾಡಬಾರದು. ಅದರ ಬದಲಿಗೆ, ಕೃಷಿಯನ್ನು ಸಂರಕ್ಷಣೆ ಮಾಡುವ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಇಂದು ಸರಕಾರ ಜಾರಿ ಮಾಡಲು ಮುಂದಾಗಿರುವ ಈ ವರದಿಯ ಮೂಲಕ ಮಲೆನಾಡಿನ ಜನರ ಬದುಕನ್ನು ನಾಶ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ಇಂದಿನ ಅರಣ್ಯ ನಾಶವಾಗಲು ನಮ್ಮ ಅಧಿಕಾರಿಗಳೇ ಕಾರಣಕರ್ತರಾಗಿದ್ದು, ಅಗತ್ಯವಿಲ್ಲದ ರಬ್ಬರ್ ಪ್ಲಾಂಟೇಷನ್, ನೀಲಗಿರಿ ಮರಗಳನ್ನು ಯಥೇಚ್ಛವಾಗಿ ಬೆಳೆಸಿದ್ದಾರೆ. ಇದೀಗ ಅರಣ್ಯ ನಾಶವಾಗಿದೆ ಎನ್ನುತ್ತಿದ್ದು, ಅದಕ್ಕೆ ಜವಾಬ್ದಾರರು ಯಾರು ಎಂದು ಪ್ರಶ್ನಿಸಿದರು. ಅಲ್ಲದೆ, ಪರಿಸರವಾದಿಗಳು ಇದರ ವಿರುದ್ಧ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ನುಡಿದರು.

ಸರಕಾರದ ಮುಂದಿರುವ ಎರಡೂ ವರದಿಗಳು ಅವಾಸ್ತವಿಕ ಹಾಗೂ ಅವೈಜ್ಞಾನಿಕವಾದುದು. ಹೀಗಾಗಿ, ಮಲೆನಾಡು, ಪಶ್ಚಿಮಘಟ್ಟ ಪ್ರದೇಶ ಅಭಿವೃದ್ಧಿಯಾಗಬೇಕು. ಅದರ ಜತೆಗೆ ಪರಿಸರ ನಾಶವನ್ನೂ ತಡೆಯಬೇಕು. ಅದಕ್ಕಾಗಿ ಸಂಪನ್ಮೂಲ ಅಗತ್ಯವಿದ್ದು, ಸಂಪನ್ಮೂಲ ಕ್ರೋಡೀಕರಣಕ್ಕೆ ಕೃಷಿಯೇ ಮೂಲವಾಗಿದೆ ಎಂದು ಅವರು ತಿಳಿಸಿದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಮಾಧವ ಗಾಡ್ಗೀಳ್ ವರದಿ ಹಾಗೂ ಕಸ್ತೂರಿ ರಂಗನ್ ವರದಿಯೊಳಗೆ ಕೃಷಿ ವಲಯ ಹಾಗೂ ಸೂಕ್ಷ್ಮ ವಲಯ ಯಾವುದು ಎಂದು ಸ್ಪಷ್ಟವಾದ ಚಿತ್ರಣವಿಲ್ಲ. ಹೀಗಾಗಿ, ವರದಿ ಜಾರಿಗೆ ಮುನ್ನ ಕೃಷಿವಲಯ ಎಂದು ಗುರುತಿಸಿ, ಅದರ ರಕ್ಷಣೆಗೆ ಬೇಕಾದ ಕ್ರಮಗಳನ್ನು ಸೂಚಿಸಿ ಜಾರಿಗೆ ಮುಂದಾಗಬೇಕು ಎಂದರು.

ನಾನು ಶಾಸಕ ಸ್ಥಾನ ಪ್ರತಿನಿಧಿಸಿದ್ದ ಕಡೂರು ವಿಧಾನಸಭಾ ವ್ಯಾಪ್ತಿಯಲ್ಲಿ 1-2 ಎಕರೆ ಜಮೀನು ಹೊಂದಿರುವ ರೈತರಿದ್ದಾರೆ. ಅವರೆಲ್ಲರೂ ಭೂ ರಹಿತರಾಗಿದ್ದು, ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದು, ಅವರಿಗೆ ಇದುವರೆಗೂ ಸಾಗುವಳಿ ಪತ್ರ ಕೊಡಿಸಲು ಸಾಧ್ಯವಾಗಿಲ್ಲ. ಮತ್ತೊಂದು ಎಲ್ಲರೂ ಮಳೆಯಾಶ್ರಿತ ರೈತರಾಗಿದ್ದಾರೆ. ಆದರೆ, ಕಳೆದ ಐದಾರು ವರ್ಷಗಳಿಂದ ಸರಿಯಾದ ಮಳೆ ಕೊರತೆಯಿಂದ ಎಲ್ಲರೂ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರದ ಈ ಎರಡೂ ವರದಿಗಳಲ್ಲಿ ಕಡೂರು ಪ್ರದೇಶವನ್ನು ವಲಯ 3 ರಲ್ಲಿ ಸೇರ್ಪಡೆ ಮಾಡಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ್ದಾರೆ. ಇಡೀ ಕ್ಷೇತ್ರದಲ್ಲಿ ಮಳೆಯಿಲ್ಲದೆ ಎಲ್ಲ ಭೂಮಿ ಬೀಡುಬಿಟ್ಟಿದ್ದು, ಬಳ್ಳಾರಿಯ ಬೆಟ್ಟದ ಗಿಡ ಬೆಳೆದು ನಿಂತಿದೆ ಎಂದ ಅವರು, ನಗರದಲ್ಲಿ ಕುಳಿತು ಚಿತ್ರಗಳ ಮೂಲಕ ಸಮೀಕ್ಷೆ ಮಾಡಿದರೆ ಇದೇ ರೀತಿ ಎಡವಟ್ಟಾಗುತ್ತದೆ. ಅದರ ಬದಲಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕೋಮು ಸೌಹಾರ್ದ ವೇದಿಕೆಯ ಮುಖಂಡ ಕೆ.ಎಲ್.ಅಶೋಕ್, ಮಾಜಿ ಸಂಸದ ಜಯಪ್ರಕಾಶ್ ಹೆಗಡೆ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪಶ್ಚಿಮಘಟ್ಟ ಹಾಗೂ ಮಲೆನಾಡಿನ ಮೇಲೆಯೇ ಎಲ್ಲರೂ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ ಯಾಕೆ ಎಂದು ಅರ್ಥವಾಗುವುದಿಲ್ಲ. ರಾಜ್ಯದ ಹಲವು ಕಡೆ ಬರಗಾಲವಿದೆ. ಬರಡು ಭೂಮಿಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಿಸಬೇಕು. ರಾಜ್ಯದಲ್ಲಿ ಐಎಫ್‌ಎಸ್ ಬರುವ ಮೊದಲು ಎಲ್ಲವೂ ಚೆನ್ನಾಗಿತ್ತು. ಅವರ ಆಗಮನದ ನಂತರ ಅರಣ್ಯ ನಾಶವಾಯಿತು.

-ಬಿ.ಎಲ್.ಶಂಕರ್, ಮಾಜಿ ಸಭಾಪತಿ

ಮಾಧವ ಗಾಡ್ಗೀಳ್ ವರದಿ ಹಾಗೂ ಕಸ್ತೂರಿ ರಂಗನ್ ವರದಿ ಮಲೆನಾಡು ಹಾಗೂ ಪಶ್ಚಿಮಘಟ್ಟಗಳ ಜನರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ. ಅಲ್ಲದೆ, ಅಲ್ಲಿನ ಜನರ ಸಮಸ್ಯೆಗಳನ್ನು ಪರಿಗಣಿಸಿಲ್ಲ. ಏಕಪಕ್ಷೀಯವಾಗಿ ವರದಿ ತಯಾರಿಸಲಾಗಿದೆ. ಅಲ್ಲದೆ, ವಿದೇಶಗಳಿಂದ ಹಣ ಪಡೆದು ನಡೆಯುತ್ತಿರುವ ಕೆಲವು ಎನ್‌ಜಿಒಗಳು ನೀಡಿರುವ ಅಂಕಿಅಂಶಗಳ ಆಧಾರದ ಮೇಲೆ ಮಾಡಲಾಗಿದೆ ಎಂಬ ಅನುಮಾನವಿದೆ.

-ವಿಠ್ಠಲ ಹೆಗಡೆ, ಪರಿಸರವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News