ಅಸಾಮಾನ್ಯ ಸನ್ನಿವೇಶಕ್ಕೆ ಅಸಾಮಾನ್ಯ ಪರಿಹಾರ: ಸುಪ್ರೀಂಗೆ ತಿಳಿಸಿದ ಕೇಂದ್ರ ವಿಚಕ್ಷಣಾ ಆಯೋಗ

Update: 2018-12-06 18:06 GMT

ಹೊಸದಿಲ್ಲಿ, ಡಿ. 5: ಅಸಾಮಾನ್ಯ ಸನ್ನಿವೇಶಕ್ಕೆ ಅಸಾಮಾನ್ಯ ಪರಿಹಾರದ ಅಗತ್ಯತೆ ಇದೆ ಎಂದು ಕೇಂದ್ರ ವಿಚಕ್ಷಣಾ ಆಯೋಗ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕೇಂದ್ರ ಸರಕಾರ ರಜೆಯ ಮೇಲೆ ಕಳುಹಿಸಿರುವುದನ್ನು ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭ ಕೇಂದ್ರ ವಿಚಕ್ಷಣಾ ಆಯೋಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕೇಂದ್ರ ವಿಚಕ್ಷಣಾ ಆಯೋಗದ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಿಬಿಐಯ ಆಡಳಿತ ಕಾನೂನು ಹಾಗೂ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದರು. ಸಿಬಿಐ ಮೇಲಿನ ಕೇಂದ್ರ ವಿಚಕ್ಷಣಾ ಆಯೋಗದ ಉಸ್ತುವಾರಿ ಅಚ್ಚರಿ, ವಿಶೇಷ ಹಾಗೂ ಅಸಾಧಾರಣ ಪರಿಸ್ಥಿತಿ ಹುಟ್ಟು ಹಾಕಿದೆ ಎಂದರು.

ಇಂದಿನ ಈ ಪರಿಸ್ಥಿತಿಗೆ ಕಾರಣವಾದ ಸನ್ನಿವೇಶಗಳು ಜುಲೈಯಲ್ಲೇ ಆರಂಭವಾಗಿತ್ತು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ತಿಳಿಸಿತು. ಸಿಬಿಐ ನಿರ್ದೇಶಕರು ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರ ನಡುವೆ ಘರ್ಷಣೆ ರಾತ್ರೋರಾತ್ರಿ ಉಂಟಾಗಿರುವುದಲ್ಲ, ಸರಕಾರ ಆಯ್ಕೆ ಸಮಿತಿಯೊಂದಿಗೆ ಸಮಾಲೋಚನೆ ನಡೆಸದೆ ನಿರ್ದೇಶಕರನ್ನು ಅಧಿಕಾರದಿಂದ ವಜಾಗೊಳಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸರಕಾರ ನ್ಯಾಯಯುತವಾಗಿರಬೇಕು ಹಾಗೂ ಸಿಬಿಐ ನಿರ್ದೇಶಕರನ್ನು ಅಧಿಕಾರದಿಂದ ವಜಾಗೊಳಿಸುವ ಮೊದಲು ಆಯ್ಕೆ ಸಮಿತಿಯೊಂದಿಗೆ ಸಮಾಲೋಚನೆ ನಡೆಸುತ್ತಿದ್ದರೆ ಯಾವ ತೊಂದರೆ ಆಗುತ್ತಿತ್ತು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಪ್ರತಿ ಸರಕಾರ ಅತ್ಯುತ್ತಮವಾದುದದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ರಾತ್ರೋರಾತ್ರಿ ನಡೆದಿಲ್ಲವಾದುದರಿಂದ ಇಂತಹ ಕ್ರಮಗಳನ್ನು ತೆಗೆದುಕೊಂಡಿರುವುದು ಏಕೆ ಎಂದು ಮುಖ್ಯ ನ್ಯಾಯಾಧೀಶರು ಕೇಂದ್ರ ವಿಚಕ್ಷಣಾ ಆಯೋಗವನ್ನು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News