ಪ್ರತ್ಯೇಕ ಮಹಿಳಾ ಪ್ರಣಾಳಿಕೆಗೆ ಸಮಾಲೋಚನಾ ಸಭೆ: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್

Update: 2018-12-06 18:37 GMT

ಮೈಸೂರು,ಡಿ.6: ಕಾಂಗ್ರೆಸ್ ಪಕ್ಷ ಮುಂಬರುವ ಲೋಕಸಭಾ ಚುಣಾವಣೆ ಹಿನ್ನೆಲೆಯಲ್ಲಿ ಪ್ರಣಾಳಿಕೆ ಸಿದ್ಧಪಡಿಸುವುದರಲ್ಲಿ ನಿರತವಾಗಿದ್ದು, ಲಿಂಗಾಧಾರಿತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಡಿ.8ರಂದು ಸಂಜೆ 5 ರಿಂದ 7 ತಿಲಕ್‍ನಗರದ ಲೀ ಮೆರಿಡಿಯನ್ ಹೊಟೇಲ್‍ನಲ್ಲಿ ಸಮಾಲೋಚನಾ ಸಭೆ ಆಯೋಜಿಸಲಾಗಿದೆ ಎಂದು ಪಕ್ಷದ ರಾಜ್ಯ ಮಹಿಳಾ ಅಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದು, ತಜ್ಞರು, ಶೈಕ್ಷಣಿಕ ತಜ್ಞರು, ಕಾರ್ಯಕರ್ತರು ಮತ್ತಿರರರು ಪಾಲ್ಗೊಂಡು ಮಹಿಳಾ ಸಬಲೀಕರಣದಲ್ಲಿನ ಸವಾಲನ್ನು ಎದುರಿಸುವ ಬಗ್ಗೆ ಸಲಹೆ ನೀಡಬಹುದಾಗಿದೆ ಎಂದು ವಿವರಿಸಿದರು.

ಅಲ್ಲದೆ, ಸಮಾಜ ಸಾಮಾಜಿಕ ನ್ಯಾಯದಿಂದ ಕೂಡಿರಬೇಕು ಎಂಬುದು ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತಲ್ಲದೆ, ಈ ನಿಟ್ಟಿನಲ್ಲಿಯೇ ಕಾಂಗ್ರೆಸ್ ಪಕ್ಷ ಸದಾ ಸಾಗುತ್ತಿದೆ. ಬಡವರು, ದೀನದಲಿತರು, ಪ್ರತಿಯೊಂದೂ ಜಾತಿ, ಧರ್ಮದವರ ಪಕ್ಷವಾಗಿದ್ದು, ದೇಶದ ಜನಸಂಖ್ಯೆಯಲ್ಲಿ ಶೇ. 50 ರಷ್ಟಿರುವ ಮಹಿಳೆಯರೂ ಜನಪ್ರತಿನಿಧಿಗಳ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಹೀಗಾಗಿ ಅವರ ಸಬಲೀಕರಣಕ್ಕೂ ಮುಂದಿನ ಲೋಕಸಭಾ ಚುನಾವಣೆ ವೇಳೆ ಆದ್ಯತೆ ನೀಡಲೆಂದು ವಿಶಿಷ್ಟ ಪ್ರಣಾಳಿಕೆ ಸಿದ್ಧತೆಯಲ್ಲಿ ತೊಡಗಿರುವ ಕಾರಣ ಈ ಸಮಾಲೋಚನಾ ಸಭೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಸದಸ್ಯೆ ನಂದಿನಿ ಚಂದ್ರಶೇಖರ್, ಪುಷ್ಪವಲ್ಲಿ, ಲತಾ ಮೋಹನ್, ವೀಣಾ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News