ಜನರು ಮತ ನೀಡಿದ್ದು ರಾಮಮಂದಿರ ನಿರ್ಮಿಸಲು ಅಲ್ಲ: ಪ್ರೊ.ಕೆ.ಎಸ್.ಭಗವಾನ್

Update: 2018-12-06 18:53 GMT

ಮೈಸೂರು, ಡಿ.6 : ರಾಮಮಂದಿರ ನಿರ್ಮಿಸಲೆಂದೇ ಜನರು ಮತ ನೀಡಿಲ್ಲ. ಬದಲಾಗಿ ದೇಶದಲ್ಲಿ ಸುಭದ್ರ ಆಡಳಿತ ನೀಡಲು ಸರ್ಕಾರ ಆರಿಸಿದ್ದು, ಎಲ್ಲಾ ಜಾತಿ, ಮತ, ಪಂಥದ ಜನರ ಪ್ರಾಣ, ಮಾನ, ಆಸ್ತಿ ರಕ್ಷಣೆ ಸರ್ಕಾರದ ಹೊಣೆಯಾಗಿದೆ ಎಂದು ಪ್ರೊ.ಕೆ.ಎಸ್.ಭಗವಾನ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ರಾಮನಪರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಧರ್ಮಸಭೆಯು ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿರುವುದು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನವಾಗಿರುವ ಕಾರಣ, ಪ್ರಧಾನಿ ನರೇಂದ್ರ ಮೋದಿ ಅವರು ಜನರ ಕ್ಷೇಮ ಅರಿತು ಸರ್ಕಾರದ ಹೊಣೆ ಅಡಿಯಲ್ಲಿ ಯುಕ್ತ ತೀರ್ಮಾನ ಕೈಗೊಳ್ಳಬೇಕೆಂದು ಕರ್ನಾಟಕ ಜನಪರ ಆಂದೋಲನ ಆಗ್ರಹಿಸಿ ಪತ್ರ ಬರೆದಿದೆ ಎಂದು ಹೇಳಿದರು.

ರಾಮಮಂದಿರ ನಿರ್ಮಿಸದಿದ್ದಲ್ಲಿ ದೇಶದ ಎಲ್ಲ ಮಸೀದಿಗಳನ್ನು ಧ್ವಂಸ ಮಾಡಲಾಗುವುದೆಂದು ಆ ವೇಳೆ ಕೆಲ ಭಾಷಣಕಾರರು ಬೆದರಿಕೆ ಹಾಕಿದ್ದು, ಆ ಕಾರಣದಿಂದಲೇ ರಾಮಜನ್ಮ ಭೂಮಿ ವಿವಾದದ ವಿಚಾರಣೆ ವಿಳಂಬವಾಗುತ್ತಿದೆ ಎಂದು ಹೇಳಿದರು. ಈ ರೀತಿಯ ಬೆದರಿಕೆಗಳಿಂದ ಜನರು ಆತಂಕಗೊಳ್ಳುವುದು ಸಹಜವೇ ಆಗಿದ್ದು, ಅವನ್ನು ಆಧರಿಸಿ ಸರ್ಕಾರ ನಡೆಯುತ್ತಿದೆಯೇ ಎಂಬ ಬಗ್ಗೆಯೂ ಶಂಕೆಗಳು ಮೂಡಿವೆ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ಜನರನ್ನು ಬೆದರಿಸಿ, ಆತಂಕಗೊಳಿಸಿ, ಅರಾಜಕತೆ ಸೃಷ್ಟಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಎಲ್ಲ ಜನರ ಹಿತ ಕಾಯಬೇಕೆಂದು ಸಹಾ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೋ.ಶಬ್ಬೀರ್ ಮುಸ್ತಫ, ಕೆ.ಎಸ್.ಶಿವರಾಮು, ಬಿ.ಆರ್.ರಂಗಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News