ಕೇಂದ್ರ ನೀಡಿದ 546 ಕೋ.ರೂ. 8 ಜಿಲ್ಲೆಗಳಿಗೆ ವಿನಿಯೋಗ: ಸಿಎಂ ಕುಮಾರಸ್ವಾಮಿ

Update: 2018-12-07 09:04 GMT

ಮಡಿಕೇರಿ ಡಿ.7: ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ 546 ಕೋಟಿ ರೂ.ಗಳನ್ನು 8 ಜಿಲ್ಲೆಗಳಿಗೆ ವಿನಿಯೋಗ ಮಾಡಲಾಗುವುದೆಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದೆಂದು ಮನವಿ ಮಾಡಿದ್ದಾರೆ.

 ಕೊಡಗಿನ ಸಂತ್ರಸ್ತರಿಗಾಗಿ ಮನೆ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸುದಕ್ಕಾಗಿ ಗರಗಂದೂರು ಹೆಲಿಪ್ಯಾಡ್‌ನಲ್ಲಿಂದು ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ವಿತರಣೆ ಮಾಡಲಾಗುವುದು, ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
 ಅನುದಾನವನ್ನು ಮೂರು ತಿಂಗಳಲ್ಲಿ ಖರ್ಚು ಮಾಡಬೇಕಾಗಿದ್ದು, ರಾಜ್ಯದ 8 ಜಿಲ್ಲೆಗಳು ಇದರ ಪ್ರಯೋಜನ ಪಡೆಯಲಿವೆ ಎಂದ ಅವರು, ಕೊಡಗಿನ ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನಿಗಳು ನೀಡಿರುವ ಹಣದ ಮೊತ್ತ 180 ಕೋಟಿ ರೂ.ಗಳಾಗಿವೆ. ಈ ಹಣವನ್ನು ಎಲ್ಲಿಯೂ ವ್ಯರ್ಥವಾಗದಂತೆ ತಮ್ಮ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರದ ಮೂಲಕವೇ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಖರ್ಚು ಮಾಡಲಾಗುವುದು. ಕೊಡಗಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಮಾನದಂಡವನ್ನು ಆಧರಿಸಿ ಬೆಳೆ ಪರಿಹಾರವನ್ನು ನೀಡಲಾಗುವುದು. ಬಾಡಿಗೆ ಮನೆಯಲ್ಲಿರುವ ಸಂತ್ರಸ್ತರಿಗೆ ತಿಂಗಳಿಗೆ 10 ಸಾವಿರ ರೂ. ನಂತೆ 10 ತಿಂಗಳಿಗೆ ಒಟ್ಟು ಒಂದು ಲಕ್ಷ ರೂ. ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.

 ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಾಜಿ ಸಚಿವ ಬಿ.ಎ.ಜೀವಿಜಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭರತೀಶ್ ಈ ಸಂದರ್ಭ ಹಾಜರಿದ್ದರು.

ಸ್ಥಳದಲ್ಲಿದ್ದ ಶಾಲಾ ಮಕ್ಕಳೊಂದಿಗೆ ಆತ್ಮೀಯವಾಗಿ ಉಭಯ ಕುಶಲೋಪರಿ ವಿಚಾರಿಸಿದ ಮುಖ್ಯಮಂತ್ರಿ ಅಹವಾಲನ್ನು ಸ್ವೀಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News