ಮುಖ್ಯಮಂತ್ರಿ ಕುಮಾರಸ್ವಾಮಿ ಟೆಂಪಲ್ ರನ್ ಆರಂಭಿಸಿದ್ದಾರೆ: ಶಾಸಕ ಆರ್.ಅಶೋಕ್

Update: 2018-12-07 13:12 GMT

ಚಾಮರಾಜನಗರ,ಡಿ.7: ಮೈತ್ರಿ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿರುವುದರಿಂದ ಮುಖ್ಯಮಂತ್ರಿಗಳು ಟೆಂಪಲ್ ರನ್ ಆರಂಭಿಸಿದ್ದಾರೆ. ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ತಾನಾಗಿಯೇ ಪತನವಾಗಲಿದೆ. ಆದ್ದರಿಂದ ನಾವೇನು ಸರ್ಕಾರ ಪತನಕ್ಕೆ ಮುಂದಾಗುವುದು ಅಥವಾ ಆಪರೇಷನ್ ಕಮಲ ಮಾಡುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹೇಳಿದರು. 

ಭಾರತೀಯ ಜನತಾ ಪಾರ್ಟಿಯಿಂದ ಜಿಲ್ಲೆಯಲ್ಲಿ ಬರಗಾಲದ ಬಗ್ಗೆ ಅಧ್ಯಯನ ಮಾಡಲು ಆಗಮಿಸಿದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಜಿಲ್ಲೆಯ ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಮಾದ್ಯಮಗೋಷ್ಟಿಯಲ್ಲಿ ಮಾತನಾಡಿ, ಮೈತ್ರಿ ಸರ್ಕಾರ ಪತನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರವರೇ ಸಾಕು ಎಂದು ಹೇಳಿದರು.

ಚುನಾವಣೆ ಮುನ್ನ ರೈತರ ಸಾಲ ಮನ್ನಾ ಮಾಡುವೆ ಎಂದು ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರವು ಇದುವರೆಗೂ ರೈತರ ಸಾಲ ಮನ್ನಾ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ ಎಂದ ಆರ್. ಅಶೋಕ್, ಜಾತ್ಯಾತೀತ ಜನತಾದಳದ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಸಾಲ ಬಾಧೆಯಿಂದ ಸುಮಾರು 22 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸರ್ಕಾರಕ್ಕೆ ಕಂಡಿಲ್ಲವೇ ಎಂದು ಪ್ರಶ್ನೆ ಮಾಡಿದರು. 

ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಸಾಲ ಮರುಪಾವತಿಸುವಂತೆ ಬ್ಯಾಂಕ್‍ನವರು ರೈತರಿಗೆ ನೊಟೀಸ್ ಕೊಡುತ್ತಿರುವುದು ರಾಜ್ಯ ಸರ್ಕಾರದ ಆಡಳಿತದ ಕಾರ್ಯವೈಖರಿಯನ್ನು ತೋರಿಸುತ್ತದೆ ಎಂದು ದೂರಿದ ಅಶೋಕ್, ಸರ್ಕಾರವು ಬದುಕಿದ್ದರೆ ಗೋ ಶಾಲೆಗಳನ್ನು ಆರಂಭಿಸಲಿ ಎಂದರು.

ಬಳಿಕ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ನೇತೃತದ ಬರ ಅಧ್ಯಾಯನ ತಂಡದಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್, ಮೈಸೂರಿನ ಶಾಸಕ ನಾಗೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರೋ.ಕೆ.ಆರ್. ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News