ನೂತನ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೃಷ್ಣಮೂರ್ತಿ ಸುಬ್ರಮಣ್ಯನ್ ನೇಮಕ

Update: 2018-12-07 13:17 GMT

ಹೊಸದಿಲ್ಲಿ,ಡಿ.7: ಐಎಸ್‌ಬಿ ಹೈದರಾಬಾದ್‌ನ ಉಪನ್ಯಾಸಕ ಕೃಷ್ಣಮೂರ್ತಿ ಸುಬ್ರಮಣ್ಯನ್ ಅವರನ್ನು ನೂತನ ಮುಖ್ಯ ಆರ್ಥಿಕ ಸಲಹೆಗಾರರಾಗಿ (ಸಿಇಎ) ಶುಕ್ರವಾರ ನೇಮಕ ಮಾಡಲಾಗಿದೆ.

ಈ ಕುರಿತು ಸರಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ, ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್‌ನ ಸಹಾಯಕ ಉಪನ್ಯಾಸಕ ಮತ್ತು ಇಡಿ (ಸಿಎಎಫ್) ಡಾ. ಕೃಷ್ಣಮೂರ್ತಿ ಸುಬ್ರಮಣ್ಯನ್ ಅವರನ್ನು ನೂತನ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ಸಂಪುಟ ನೇಮಕ ಸಮಿತಿ (ಎಸಿಸಿ) ಅನುಮೋದನೆ ನೀಡಿರುವುದಾಗಿ ತಿಳಿಸಲಾಗಿದೆ. ಹಿಂದಿನ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯನ್ ಹುದ್ದೆಯಿಂದ ಕೆಳಗಿಳಿದ ನಂತರ ಖಾಲಿ ಬಿದ್ದಿದ್ದ ಆ ಸ್ಥಾನಕ್ಕೆ ಸದ್ಯ ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.

ಚಿಕಾಗೊದಲ್ಲಿ ಪಿಎಚ್‌ಡಿ ಮಾಡಿರುವ ಕೃಷ್ಣಮೂರ್ತಿಯವರು ಐಐಟಿ-ಐಐಎಂನ ಅಗ್ರಶ್ರೇಯಾಂಕಿತ ವಿದ್ಯಾರ್ಥಿಯಾಗಿದ್ದಾರೆ. ಅವರು ಜಗತ್ತಿನ ಪ್ರಮುಖ ಬ್ಯಾಂಕಿಂಗ್, ಸಾಂಸ್ಥಿಕ ಆಡಳಿತ ಮತ್ತು ಆರ್ಥಿಕ ನೀತಿ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಅವರು ಸೆಬಿಯ ಸಾಂಸ್ಥಿಕ ಆಡಳಿತದ ತಜ್ಞರ ಸಮಿತಿ ಹಾಗೂ ರಿಸರ್ವ್ ಬ್ಯಾಂಕ್ ಇಂಡಿಯಾಕ್ಕಾಗಿ ಬ್ಯಾಂಕ್‌ಗಳ ಆಡಳಿತದಲ್ಲಿ ಸಲ್ಲಿಸಿರುವ ಸೇವೆಯು ಕೃಷ್ಣಮೂರ್ತಿಯವರನ್ನು ಭಾರತದ ಸಾಂಸ್ಥಿಕ ಆಡಳಿತ ಮತ್ತು ಬ್ಯಾಂಕಿಂಗ್ ಸುಧಾರಣೆಗಳ ಮುಖ್ಯ ಶಿಲ್ಪಿಯನ್ನಾಗಿ ರೂಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News