ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳಿಂದ ಡಿ.12 ರಂದು ಬೆಳಗಾವಿ ಚಲೋ

Update: 2018-12-07 13:55 GMT
ಬೆಳಗಾವಿ ಸುವರ್ಣ ಸೌಧ

ಬೆಂಗಳೂರು, ಡಿ.6: ರಾಜ್ಯದಲ್ಲಿ ಕೃಷಿ ಸಹಾಯಕರ ಹುದ್ದೆಗಳಿಗೆ ಕೃಷಿ ಡಿಪ್ಲೋಮಾ ಪದವೀಧರರನ್ನು ನೇಮಿಸುವಂತೆ ಆಗ್ರಹಿಸಿ ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳಿಂದ ಡಿ.12ರ ಬೆಳಗ್ಗೆ 10ಗಂಟೆಗೆ ಬೆಳಗಾವಿಯ ಸುವರ್ಣ ಸೌಧದ ಮುಂಭಾಗ ‘ಬೆಳಗಾವಿ ಚಲೋ’ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಡಿಪ್ಲೋಮಾ ಕೃಷಿ ಪದವೀಧರರ ಸಂಘದ ಅಧ್ಯಕ್ಷ ಮಹಾಂತೇಶ ಕುಂಟೋಜಿ, ಸರಕಾರವು ಕೃಷಿ ವಿಶ್ವವಿದ್ಯಾಲಯಗಳ ಮಾರ್ಗದರ್ಶನದಲ್ಲಿ ಗ್ರಾಮೀಣ ಯುವಕ, ಯುವತಿಯರಿಗೆ, ಎಸೆಸ್ಸೆಲ್ಸಿ ನಂತರ 2ವರ್ಷದ ಕೃಷಿ ಡಿಪ್ಲೋಮಾ ಕೋರ್ಸ್ ಪ್ರಾರಂಭ ಮಾಡಿ, ತೇರ್ಗಡೆಯಾದವರನ್ನು ಕೃಷಿ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಿತು. ಆದರೆ ಇಲ್ಲಿಯವರೆಗೂ ನೇಮಕ ಮಾಡಿಕೊಂಡಿಲ್ಲ ಎಂದು ಆರೋಪ ಮಾಡಿದರು.

ರಾಜ್ಯ ಸರಕಾರವು 2016 ರಲ್ಲಿ ಕುಸಿದ ಕೃಷಿ ಚಟುವಟಿಕೆಯನ್ನು ಗಮನಿಸಿ, ಯೋಜನಾ ಆಯೋಗದ ಶಿಫಾರಸ್ಸಿನಂತೆ ಹೆಚ್ಚಿನ ಆಹಾರ ಭದ್ರತೆಗೆ ಒತ್ತು ನೀಡಬೇಕೆಂದು 6500 ಗ್ರಾಮ ಪಂ. ಗಳಿಗೆ ಕೃಷಿ ಡಿಪ್ಲೋಮಾ ಪದವೀಧರರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿತು. ಆದರೆ, ನಿರ್ಧಾರವನ್ನು ಕಾರ್ಯ ರೂಪಕ್ಕೆ ತರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಬೇರೆ ಉನ್ನತ ಶಿಕ್ಷಣ ವ್ಯಾಸಂಗ ಮಾಡಬೇಕಾದಲ್ಲಿ ಕೃಷಿ ಡಿಪ್ಲೋಮಾವನ್ನು ದ್ವಿತೀಯ ಪಿಯುಸಿ ಎಂದು ಪರಿಗಣಿಸುವುದಿಲ್ಲ. ಹೀಗಾಗಿ, ಕೃಷಿ ಪದವಿಗೆ ಸೇರಿಕೊಳ್ಳಲು ಲ್ಯಾಟರಲ್ ಪ್ರವೇಶ ಪಡೆಯಬಹುದೆಂದು ಆದೇಶಿಸಿತು. ಇದು ಕೇವಲ ಶೇ.5ರಷ್ಟು ರಿಸರ್ವೇಶನ್, ಅಂದರೆ ವಾರ್ಷಿಕ 53 ಸೀಟುಗಳು ಮಾತ್ರ ಪಡೆಯಬಹುದು ಎಂದು ಅಸಮಾಧಾನಪಟ್ಟರು.

ಪ್ರಗತಿಪರ ಚಿಂತಕಿ ಬಿ.ಟಿ.ಲಲಿತ ನಾಯಕ್ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ, ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳನ್ನು ಕೃಷಿ ಸಹಾಯಕರನ್ನಾಗಿ ನೇಮಕಾತಿ ಮಾಡಿಕೊಳ್ಳುವುದಾಗಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೂಚಿಸಿದ್ದರು. ಈಗ, ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೆ, ಮಹಾರಾಷ್ಟ್ರದಲ್ಲಿ ಗ್ರಾಮ ಸೇವಕರೆಂದು, ತೆಲಂಗಾಣದಲ್ಲಿ ಕೃಷಿ ವಿಸ್ತರಣಾ ಅಧಿಕಾರಿಗಳೆಂದು, ಆಂಧ್ರಪ್ರದೇಶದಲ್ಲಿ ಗ್ರಾಮ ಸೇವಕರೆಂದು ಮತ್ತು ತಮಿಳುನಾಡಿನಲ್ಲಿ ಕೃಷಿ ಸಹಾಯಕ ಅಧಿಕಾರಿಗಳೆಂದು ನೇಮಕ ಮಾಡಿಕೊಂಡು, ಅಲ್ಲಿನ ರಾಜ್ಯ ಸರಕಾರಗಳು ಸದುಪಯೋಗ ಪಡೆದುಕೊಳ್ಳುತ್ತಿವೆ. ಇದೇ ರೀತಿ ರಾಜ್ಯದಲ್ಲೂ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಚಿಂತಕ ಜಿ.ಎನ್.ನಾಗರಾಜ್, ಕೃಷಿ ವಿದ್ಯಾರ್ಥಿ ಸಂಘದ ಸಂಚಾಲಕ ವಿ.ರಮೇಶ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News