ಕೊಡಗಿನ ಸಂತ್ರಸ್ತರಿಗೆ ಅನುದಾನ ನೀಡಿದ್ದು ಯಾರು ?: ಸಿಎಂ, ಸಂಸದ ಪ್ರತಾಪ ಸಿಂಹ ನಡುವೆ ಬಿಸಿ ಚರ್ಚೆ

Update: 2018-12-07 14:38 GMT

ಮಡಿಕೇರಿ, ಡಿ.7: ಕೊಡಗಿನ ಸಂತ್ರಸ್ತರ ಪುನರ್ವಸತಿಯ ಮನೆ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಸಮಾರಂಭದಲ್ಲಿ ಸಂಸದ ಪ್ರತಾಪ ಸಿಂಹ ಅವರ ಮಾತಿಗೆ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಸಂಸದ ಪ್ರತಾಪ ಸಿಂಹ ಅವರು ತಮ್ಮ ಭಾಷಣದಲ್ಲಿ 'ಕೇಂದ್ರದ ಎನ್‍ಡಿಆರ್‍ಎಫ್ ಯೋಜನೆಯಡಿ ಕೊಡಗಿನ 800 ಸಂತ್ರಸ್ತರಿಗೆ ತಲಾ 1.01 ಲಕ್ಷ ಪರಿಹಾರವನ್ನು ನೀಡಲಾಗಿದೆ. ಎಸ್‍ಡಿಆರ್‍ಎಫ್‍ನ ಪರಿಹಾರದ ಹಣದಲ್ಲಿ ಕೇಂದ್ರದ ಪಾಲು ಶೇ.75 ಆದರೆ, ರಾಜ್ಯದ ಪಾಲು ಕೇವಲ ಶೇ.25 ಎಂದು ಮಾಹಿತಿ ನೀಡಿ, ಪ್ರಾಕೃತಿಕ ವಿಕೋಪದಿಂದ ಹಾನಿಯಾದ ರಾಷ್ಟ್ರೀಯ ಹೆದ್ದಾರಿಗಳ ಮರು ನಿರ್ಮಾಣಕ್ಕೂ ಕೇಂದ್ರ ಅನುದಾನವನ್ನು ನೀಡಿದೆಯೆಂದು ತಿಳಿಸಿದರು.

ಇದರೊಂದಿಗೆ, ಪ್ರಾಕೃತಿಕ ವಿಕೋಪದ ಸಂದರ್ಭ ಕೇಂದ್ರದ ರಕ್ಷಣಾ ಸಚಿವರಲ್ಲಿ ಹೆಲಿಕಾಪ್ಟರ್ ನೆರವಿಗೆ ಮನವಿ ಮಾಡಿದಾಗ, ರಾಜ್ಯದಿಂದ ಪ್ರಸ್ತಾವನೆ ಬಂದಿಲ್ಲವೆಂದು ತಿಳಿಸಿದರು. ಬಳಿಕ ತಾನೇ ಹೆಲಿಕಾಪ್ಟರ್ ನೆರವಿಗೆ ಮನವಿ ಮಾಡಿಕೊಂಡಿದ್ದಾಗಿಯೂ ಸಂಸದರು ತಿಳಿಸಿದರು.

ಈ ಸಂದರ್ಭ ಮುಖ್ಯಮಂತ್ರಿ ಕುಮಾರಸ್ವಾಮಿ ತಾವು ಕುಳಿತಿದ್ದ ಸ್ಥಳದಿಂದಲೆ ಸಮರ್ಪಕ ಮಾಹಿತಿಯನ್ನು ಯಾಕೆ ನೀಡುತ್ತಿಲ್ಲವೆಂದು ಕೇಳುವ ಮೂಲಕ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. 

ತಮ್ಮ ಭಾಷಣದ ಸಂದರ್ಭ ಮುಖ್ಯಮಂತ್ರಿ  ಕುಮಾರಸ್ವಾಮಿ ಅವರು, ಪ್ರಾಕೃತಿಕ ವಿಕೋಪ ಸಂದರ್ಭ ತಾನು ಖುದ್ದಾಗಿ ಮತ್ತು ಸರಕಾರದ ಕಾರ್ಯದರ್ಶಿಗಳೂ ಏರ್‍ಫೋರ್ಸ್‍ನಿಂದ ನೆರವನ್ನು ಕೋರಿದ್ದೇವೆ. ಇದಲ್ಲದೆ, ಅವರು ನೀಡಿರುವ ಹೆಲಿಕಾಪ್ಟರ್ ಸೇವೆಗೆ ನಾವು ಹಣ ಕಟ್ಟಬೇಕಾಗುತ್ತದೆ ಎಂದು ಹೇಳಿ, ಸಂತ್ರಸ್ತರ ನೆರವಿನ ಕಾರ್ಯದಲ್ಲಿ ಪಕ್ಷಗಳ ಪ್ರಶ್ನೆ ಇಲ್ಲವೆಂದು ಪರೋಕ್ಷವಾಗಿ ಸಂಸದರಿಗೆ ತಿರುಗೇಟು ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News