ಮಂಡ್ಯ: ಭತ್ತದ ಕಟಾವಿಗೆ ರೈತರ ಜತೆ ಕೈಜೋಡಿಸಿದ ಸಿಎಂ ಕುಮಾರಸ್ವಾಮಿ

Update: 2018-12-07 15:36 GMT

ಮಂಡ್ಯ, ಡಿ.7: ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಹೊರಹೊಲಯದಲ್ಲಿರುವ ಗದ್ದೆಯಲ್ಲಿ ಶುಕ್ರವಾರ ಭತ್ತದ ಬೆಳೆಯ ಕಟಾವು ಕಾರ್ಯದಲ್ಲಿ ರೈತರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈಜೋಡಿಸಿದರು.

ಸಂಜೆ ವೇಳೆಗೆ ಗ್ರಾಮಕ್ಕೆ ಆಗಮಿಸಿದ ಕುಮಾರಸ್ವಾಮಿ ಶಡ್ ಹೊಟೇಲ್‍ನಲ್ಲಿ ಟೀ ಕುಡಿದು, ಹೊಡೆ ತಿಂದು, ಎತ್ತಿನಗಾಡಿಯಲ್ಲಿ ಮೆರವಣಿಗೆಯಲ್ಲಿ ಭತ್ತದ ಗದ್ದೆಗೆ ತೆರಳಿ ರೈತರ ಜತೆಗೂಡಿ ಭತ್ತ ಕಟಾವು ಮಾಡಿ ನಂತರ ಒಕ್ಕಣೆ ಮಾಡಿದ ರಾಶಿಗೆ ಪೂಜೆ ಸಲ್ಲಿಸಿ ಸುಗ್ಗಿ ಹಬ್ಬಕ್ಕೆ ಚಾಲನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಇತರ ಗಣ್ಯರೂ ಸಿಎಂ ಜತೆ ಭತ್ತದ ಕೊಯ್ಲು ಕಾರ್ಯದಲ್ಲಿ ಭಾಗಿಯಾಗಿದ್ದರು.

ಸತತ ಮೂರು ವರ್ಷದಿಂದ ಬರಗಾಲದಿಂದ ಬೆಳೆ ಕಾಣದೆ ಕಂಗಾಗಲಾಗಿದ್ದ ಜಿಲ್ಲೆಯ ರೈತರು ಈ ವರ್ಷ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಯಲ್ಲಿ ಸಂತಸದಿಂದ ತೊಡಗಿಸಿಕೊಂಡಿದ್ದರು. ರೈತರಲ್ಲಿ ಸ್ಥೈರ್ಯ ತುಂಬವ ಉದ್ದೇಶದಿಂದ ಸಿಎಂ ಕುಮಾರಸ್ವಾಮಿ ಕಳೆದ ಆಗಸ್ಟ್ 11 ರಂದು ಭತ್ತ ಕಟಾವು ಮಾಡಿದ ಭೂಮಿಯಲ್ಲೇ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಹಲವಾರು ವರ್ಷಗಳಿಂದ ನೀರಿನ ಕೊರತೆಯಿಂದ ಭತ್ತ ಬೆಳೆದಿರಲಿಲ್ಲ. ಈ ಬಾರಿ ವರುಣನ ಕೃಪೆಯಿಂದ ಈ ಬಾರಿ ಕೆಆರ್‍ಎಸ್ ಜಲಾಶಯ ತುಂಬಿ ಅನ್ನದಾತರು ಸಂಭ್ರಮಗೊಂಡಿದ್ದಾರೆ ಎಂದರು. ಕೆಲವು ಮಾಧ್ಯಮಗಳು ಸಮ್ಮಿಶ್ರ ಸರಕಾರ ಬಿದ್ದುಹೋಗುತ್ತದೆ, ರೈತರ ಸಾಲಮನ್ನಾ ಆಗಲ್ಲ ಎಂದು ಬಿಂಬಿಸಿದವು. ಆದರೆ, ಸರಕಾರ ಐದು ವರ್ಷ ಸುಭದ್ರವಾಗಿರುತ್ತದೆ. ನಮ್ಮದು ರೈತರ ಪರ ಸರಕಾರವಾಗಿದೆ ಎಂದು ಅವರು ಹೇಳಿದರು.

ಸಾಲಮನ್ನಾ ವಿಚಾರದಲ್ಲಿ ಯಾವುದೇ ಗೊಂದಲ, ಅನುಮಾನ ಬೇಡ. ದೊಡ್ಡಬಳ್ಳಾಪುರ ಮತ್ತು ಸೇಡಂನಲ್ಲಿ ಸಾಲಮನ್ನಾಗೆ ಚಾಲನೆ ಕೊಡಲಿದ್ದೇನೆ. ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಮಾಧ್ಯಮಗಳ ವದಂತಿಗಳಿಗೆ ಕಿವಿಕೊಡಬೇಡಿ ಎಂದು ಅವರು ಮನವಿ ಮಾಡಿದರು.

ಕೆಲವು ರಾಷ್ಟ್ರೀಕೃತ ಬ್ಯಾಂಕ್‍ಗಳು ಬಿಜೆಪಿ ನಾಯಕರ ಜೊತೆ ಸೇರಿ ಚೆಲ್ಲಾಟವಾಡುತ್ತಿದ್ದಾರೆ. ನಾನು ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾಗೂ ಕೂಡ ವರದಿ ತರಿಸಿಕೊಂಡಿದ್ದೇನೆ. ನನ್ನ ಮತ್ತು ಜನರ ಮಧ್ಯೆ ಕೆಲವು ಮಾಧ್ಯಮಗಳು ಕಂದಕ ಸೃಷ್ಟಿಮಾಡುವ ಕೆಲಸ ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‍ಎಸ್ ಬಳಿ ಡಿಸ್ನಿಲ್ಯಾಂಡ್ ಮಾಡುವುದರಿಂದ ಜಲಾಶಯಕ್ಕಾಗಲೀ, ಯಾವುದೇ ಗ್ರಾಮಕ್ಕಾಗಲೀ ತೊಂದರೆ ಆಗುವುದಿಲ್ಲ. ಕನ್ನಂಬಾಡಿಕಟ್ಟೆಯ ಭದ್ರತೆಯ ವಿಚಾರದಲ್ಲಿ ಚೆಲ್ಲಾಟ ಆಡುವುದಿಲ್ಲ. ಊಹಾಪೋಹಗಳಿಗೆ ಆಸ್ಪದ ನೀಡಬೇಡಿ ಎಂದು ಅವರು ಮನವಿ ಮಾಡಿದರು.

ನಾಲಾ ತಡೆಗೋಡೆ ನಿರ್ಮಾಣ:
ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವಿಶ್ವೇಶ್ವರಯ್ಯ ನಾಲಾ ರಸ್ತೆಗಳಲ್ಲಿ ಎಲ್ಲೆಲ್ಲಿ ಅಪಾಯದ ಸ್ಥಳಗಳಿವೆ ಎನ್ನುವುದನ್ನು ಸರ್ವೆಮಾಡಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಶೀಘ್ರವೇ ತಡೆಗೋಡೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು  ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕಳೆದ ತಿಂಗಳು ಪಾಂಡವಪುರದ ಕನಗನಮರಡಿ ಬಳಿ ನಾಲೆಗೆ ಬಸ್ ಉರುಳಿ 30 ಮಂದಿ ಸಾವನಪ್ಪಿದರು. ಅದಾದ ನಂತರ ಮಂಡ್ಯ ಬಳಿ ವಿಶ್ವೇಶ್ವರಯ್ಯ ನಾಲೆಗೆ ಸ್ಕೂಟರ್ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟರು. ಈ ಎಲ್ಲ ಘಟನೆಗಳಿಗೆ ಅಪಾಯ ಸ್ಥಳದ ನಾಲಾ ರಸ್ತೆಗಳಿಗೆ ತಡೆಗೋಡೆಯೇ ಪರಿಹಾರ ಎಂದು ಅವರು ತಿಳಿಸಿದರು.

ಭತ್ತ ಬೆಳೆದಿರುವ ರೈತರ ಅನುಕೂಲಕ್ಕಾಗಿ ನೀರಾವರಿ ಜಿಲ್ಲೆಗಳಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. 1,750 ರೂ. ಹಾಗೂ 1,770 ರು. ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ರೈತರು ಖರೀದಿ ಕೇಂದ್ರಗಳಲ್ಲೇ ಭತ್ತ ಮಾರಾಟ ಮಾಡಬೇಕು ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News