ಭತ್ತ ಕೊಯ್ಲಿನಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ: ಯಡಿಯೂರಪ್ಪ

Update: 2018-12-07 15:45 GMT

ಮಂಡ್ಯ, ಡಿ.7: ಭತ್ತ ನಾಟಿ, ಕೊಯ್ಲಿನಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ ರೈತರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ಹುಟ್ಟೂರು ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಗ್ರಾಮ ದೇವತೆ ಗೋಗಾಲಮ್ಮ ದೇವಾಲಯದಲ್ಲಿ ಶುಕ್ರವಾರ ಕುಟುಂಬದ ಜತೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಭತ್ತ ಕಟಾವು ಕಾರ್ಯಕ್ರಮವನ್ನು ಟೀಕಿಸಿದರು.

100ಕ್ಕೂ ಹೆಚ್ಚು ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿ ನಮ್ಮ ಪಕ್ಷದವರು ಸಂಗ್ರಹಿಸುತ್ತಿರುವ ಮಾಹಿತಿ ಆಧರಿಸಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸುತ್ತೇವೆ. ರೈತರ ಬೆಳೆಗಳಿಗೆ ಕೇಂದ್ರ ಸರಕಾರ ಬೆಂಬಲ ಬೆಲೆ ನೀಡುತ್ತಿದೆ. ಅದನ್ನು ಸಮರ್ಥವಾಗಿ ರೈತರಿಗೆ ತಲುಪಿಸುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭತ್ತ ನಾಟಿ ಮಾಡಿ, ಭತ್ತ ಕೊಯ್ಲು ಮಾಡುವ ನಾಟಕ ಮಾಡದೇ ನುಡಿದಂತೆ ನಡೆದುಕೊಂಡು ರೈತರ ಸಾಲಮನ್ನಾ ಮಾಡಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News