ಹುಸಿ ಬಾಂಬ್ ಬೆದರಿಕೆ: ನ್ಯೂಯಾರ್ಕ್ ಸಿಎನ್‌ಎನ್ ಕಚೇರಿ ತೆರವು

Update: 2018-12-07 16:14 GMT

ನ್ಯೂಯಾರ್ಕ್, ಡಿ. 7: ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನಲ್ಲಿರುವ ಸಿಎನ್‌ಎನ್ ಕಚೇರಿಗಳನ್ನು ಗುರುವಾರ ತೆರವುಗೊಳಿಸಲಾಯಿತು. ಅದೊಂದು ಹುಸಿ ಬೆದರಿಕೆ ಎಂಬುದಾಗಿ ಬಳಿಕ ಸಾಬೀತಾಯಿತು.

ಗುರುವಾರ ರಾತ್ರಿ 10 ಗಂಟೆಯ ಬಳಿಕ ಸಿಎನ್‌ಎನ್ ಕಚೇರಿಗೆ ಕರೆ ಮಾಡಿದ ವ್ಯಕ್ತಿಯೋರ್ವ, ಕೊಲಂಬಸ್ ಸರ್ಕಲ್‌ನಲ್ಲಿರುವ ‘ಟೈಮ್ ವಾರ್ನರ್’ ಕಟ್ಟಡದಲ್ಲಿರುವ ಸಿಎನ್‌ಎನ್ ಕಚೇರಿಯಲ್ಲಿ ಐದು ಬಾಂಬ್‌ಗಳನ್ನು ಇಡಲಾಗಿದೆ ಎಂದು ಹೇಳಿದನು.

ಬಳಿಕ, ಉದ್ಯೋಗಿಗಳನ್ನು ಕಟ್ಟಡದಿಂದ ತೆರವುಗೊಳಿಸಲಾಯಿತು. ಕಟ್ಟಡದ ಭದ್ರತಾ ಸಿಬ್ಬಂದಿ ಆರಂಭಿಕ ಶೋಧ ಕಾರ್ಯ ನಡೆಸಿದರು. ಬಳಿಕ ಪೊಲೀಸ್ ಘಟಕಗಳು ವಿವರವಾದ ತಪಾಸಣೆ ನಡೆಸಿದವು.

ಕಟ್ಟಡದ ಹೊರಗೆ ಕಾರ್ಯಕ್ರಮಗಳ ಪ್ರಸಾರವನ್ನು ಸಿಎನ್‌ಎನ್ ಮುಂದುವರಿಸಿತು. ಅಕ್ಟೋಬರ್‌ನಲ್ಲಿ ಕಚ್ಚಾ ಪೈಪ್ ಬಾಂಬ್ ಹೊಂದಿದ ಶಂಕಿತ ಪಾರ್ಸೆಲೊಂದು ತಲುಪಿದ ಬಳಿಕ ಸಿಎನ್‌ಎನ್‌ನ ಅದೇ ಕಟ್ಟಡವನ್ನು ಆಂಶಿಕವಾಗಿ ತೆರವುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News