ಸಾಲ ಮನ್ನಾದ ಹಣ ಹಂತ ಹಂತವಾಗಿ ರೈತರ ಖಾತೆಗೆ ಜಮೆ: ಸಿಎಂ ಕುಮಾರಸ್ವಾಮಿ

Update: 2018-12-07 16:30 GMT

ಶೃಂಗೇರಿ, ಡಿ.7: ರೈತರ ಸಾಲ ಮನ್ನಾ ಸೇರಿದಂತೆ ಎಲ್ಲಾ ಅಭಿವೃದ್ದಿ ಕಾರ್ಯಗಳ ಬಗ್ಗೆ ನನ್ನಲ್ಲಿ ಸಂಪೂರ್ಣ ಸ್ಪಷ್ಟತೆ ಇದೆ. ರಾಜ್ಯದ ಸಮ್ಮಿಶ್ರ ಸರಕಾರವು  ನಿರೀಕ್ಷೆಗೂ ಮೀರಿ ನಡೆಯುತ್ತಿದೆ. ದೃಶ್ಯ ಮಾಧ್ಯಮಗಳು ಹಳದಿ ಕಣ್ಣಿನಲ್ಲಿ ಸರಕಾರದೆಡೆ ನೋಡುತ್ತಿದ್ದು, ಮೈತ್ರಿ ಸರಕಾರ ಇಂದು ಬೀಳುತ್ತದೆ, ನಾಳೆ ಬೀಳುತ್ತದೆ ಎಂದು ಕಳೆದ 7 ತಿಂಗಳಿನಿಂದ ಮಾಡುತ್ತಿರುವ ಪ್ರಚಾರಕ್ಕೆ ಯಾರೂ ಗಮನ ಕೊಡಬಾರದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಗುರುವಾರ ರಾತ್ರಿ ಶೃಂಗೇರಿ ಪಟ್ಟಣದಲ್ಲಿ ನಿರ್ಮಿಸಲಾಗಿದ್ದ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ನಂತರ ಗೌರಿಶಂಕರ ಸಭಾಂಗಣದಲ್ಲಿ ನಡೆದ 150 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಮೈತ್ರಿ ಸರಕಾರ ಹಿಂದಿನ ಸರಕಾರ ರೂಪಿಸಿದ್ದ ಜನಪರ ಕಾರ್ಯಕ್ರಮಗಳೊಂದಿಗೆ ಹೊಸ ಯೋಜನೆಗಳನ್ನು ಮತ್ತು ರೈತರ ಸಾಲ ಮನ್ನಾದ ಕ್ರಾಂತಿಕಾರಿ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಸಾಲಮನ್ನಾಕ್ಕೆ ಹಣದ ಕೊರತೆ ಏನೂ ಇಲ್ಲ. ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕಿನಲ್ಲಿನ ರೈತರ ಸಾಲಗಳ ವಿವರಣೆಯನ್ನು ಕ್ರೋಢೀಕರಿಸುವ ಮತ್ತು ನೀತಿ ನಿಯಮ ರೂಪಿಸುವಲ್ಲಿ ಸಮಯ ವಿಳಂಬ ಆಗಿದೆ. ಸಾಲ ಮನ್ನಾದ ಹಣವು ಹಂತ ಹಂತವಾಗಿ ರೈತರ ಖಾತೆಗೆ ಜಮಾ ಆಗಲಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕಿನಲ್ಲಿ ರೈತರ ಸುಸ್ತಿ ಬಿದ್ದ ಸಾಲ, ಪಾವತಿಯೇ ಮಾಡದ ಸಾಲ ಮತ್ತು ಪಾವತಿ ಮಾಡಿ ಮರುಸಾಲ ಪಡೆದ ವರ್ಗಗಳಿದ್ದು, ಪಾವತಿ ಮಾಡಿದವರಿಗೆ ಪ್ರೋತ್ಸಾಹ ಧನ ಕೊಡುವ ಬಗ್ಗೆ ಸರಕಾರ ಸ್ಪಷ್ಟವಾದ ನಿಯಮಾವಳಿಗಳನ್ನು ರೂಪಿಸಿದೆ. 2.80 ಲಕ್ಷ ರೈತರ ಎನ್.ಪಿ.ಎ. ಸಾಲದ ಶೇ.50 ಅಸಲು ಮತ್ತು ಪೂರ್ಣ ಬಡ್ಡಿಯನ್ನು ಸರಕಾರ ಪಾವತಿಸುವುದು. ಏನೂ ಪಾವತಿಸದ 2 ಲಕ್ಷ ಸಾಲಗಾರರ ಮೊದಲ ಕಂತಾಗಿ ರೂ. 50 ಸಾವಿರವನ್ನು ಡಿ.8ರಂದು ಬ್ಯಾಂಕಿಗೆ ಪಾವತಿಸಲಾಗುತ್ತಿದೆ. 2.20 ಲಕ್ಷ ಪ್ರಾಮಾಣಿಕ ಸಾಲಗಾರರಿಗೆ ತಲಾ ರೂ.25 ಸಾವಿರ ರೂ. ಪ್ರೋತ್ಸಾಹ ಧನ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.

ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕಿನಲ್ಲಿ ಸಾಲದ ಮೇಲಿನ ಬಡ್ಡಿಯನ್ನು ಸರಕಾರ ಪಾವತಿಸಿ ಕೊಡಲಿದ್ದು, ಅಸಲು ಮರುಪಾವತಿಗೆ ಕಾಲ ವಿಸ್ತರಣೆ ಮಾಡಿಕೊಡಲಾಗುತ್ತಿದೆ ಎಂದರು. ಸರಕಾರದಿಂದ ಬೀದಿ ಬದಿ ವ್ಯಾಪಾರ ಮಾಡುವವರಿಗಾಗಿ ನಿತ್ಯ ನೆಲೆಯಲ್ಲಿ ಕೊಡುತ್ತಿರುವ ಬಡವರ ಬಂಧು ಸಾಲ ಯೋಜನೆಯನ್ನು ಸದ್ಯ 50 ಸಾವಿರ ಫಲಾನುಭವಿಗಳಿಗೆ ಕೊಡಲಾಗುತ್ತಿದ್ದು, ಪ್ರಾಮಾಣಿಕವಾಗಿ ಮರು ಪಾವತಿಸಿದವರಿಗೆ ಹೆಚ್ಚಿನ ಮೊತ್ತವನ್ನು ನೀಡಲಾಗುತ್ತದೆ. ಸ್ವ-ಸಹಾಯ ಸಂಘ ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ಕಾಯಕ ಯೋಜನೆ ಅಡಿಯಲ್ಲಿ  5 ಲಕ್ಷ ರೂ. ಬಡ್ಡಿ ರಹಿತ ಮತ್ತು 5 ಲಕ್ಷ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಈ ಗುಂಪುಗಳು ತಯಾರಿಸುವ ಉತ್ಪನ್ನಗಳನ್ನು ಸರಕಾರವೇ ಖರೀದಿಸುವ ಯೋಜನೆಯು ಈ ತಿಂಗಳಲ್ಲೇ ಜಾರಿಗೆ ತರಲಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪದವಿ ವರೆಗಿನ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕಾಗಿ ಸರಕಾರವು 1200 ಕೋಟಿ ರೂ. ಇಟ್ಟು ಇತಿಹಾಸ ದಾಖಲಿಸಿದೆ. ಇಷ್ಟಾದರೂ ಈ ಸರಕಾರ ಟೇಕ್ ಆಫ್ ಆಗಿಲ್ಲ ಎನ್ನುವವರಿಗೆ ನಾನು ಹೇಗೆ ಮನವರಿಕೆ ಮಾಡಿಕೊಡಲಿ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಅನಿಲ ಭಾಗ್ಯ ಫಲಾನುಭವಿಗಳಿಗೆ ಗ್ಯಾಸ್‍ ಸ್ಟೌ ವಿತರಣೆ ಮತ್ತು ಸಾಮಾಜಿಕ ಭದ್ರತೆಯ ಮಂಜೂರಾತಿ ಆದೇಶವನ್ನು ಮುಖ್ಯಮಂತ್ರಿಗಳು ವಿತರಿಸಿದರು. ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ವಿ.ಪ.ಸದಸ್ಯರಾದ ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡ, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಐ.ಜಿ.ಪಿ.ಅರುಣ್ ಚಕ್ರವರ್ತಿ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮಲೆನಾಡಿನ ಪ್ರಮುಖ ಸಮಸ್ಯೆ ಆಗಿದ್ದ ಕಾಲು ಸಂಕಗಳ ಬದಲಿಗೆ ಧೃಡವಾದ ಸೇತುವೆ ನಿರ್ಮಿಸಲು ನಾನು ಬದ್ಧತೆಯನ್ನು ತೋರಿಸಿದ್ದೇನೆ. ಮಲೆನಾಡಿನಲ್ಲಿ 400 ಕಾಲು ಸಂಕಗಳನ್ನು ಬದಲಿಸಲು ಸೂಚಿಸಿದ್ದೇನೆ. ರಾಷ್ಟ್ರೀಯ ಉದ್ಯಾನದಲ್ಲಿ ಸಾಗುವ ಕೆರೆಕಟ್ಟೆ ರಸ್ತೆ ಅಗಲೀಕರಣ ಹಾಗೂ ಕಸ್ತೂರಿ ರಂಗನ್ ವರದಿಯ ಬಗ್ಗೆ ಸ್ಥಳೀಯ ಜನರು, ಹೋರಾಟಗಾರರ ಮನವಿಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಮೈತ್ರಿ ಸರಕಾರ ರಾಜ್ಯ 6.50 ಕೋಟಿ ಜನರ ಸರಕಾರವಾಗಿದೆ. ತಾನು ಜನರ ನಡುವೆ ಕೆಲಸ ಮಾಡುವ ಮುಖ್ಯಮಂತ್ರಿಯಾಗಿದ್ದೇನೆ. ಜನರು ತಮ್ಮ ಸಮಸ್ಯೆಗಳೇನಿದ್ದರೂ ನನ್ನ ಬಳಿಗೆ ನೇರವಾಗಿ ಬಂದು ಹೇಳಿಕೊಳ್ಳಬಹುದು.
- ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News