ರಾಜ್ಯ ಸರ್ಕಾರ ಅಸ್ಥಿರಕ್ಕೆ ಬಿಜೆಪಿ ಕುತಂತ್ರ: ಮಧು ಬಂಗಾರಪ್ಪ

Update: 2018-12-07 18:40 GMT

ಶಿವಮೊಗ್ಗ, ಡಿ. 7: ರಾಜ್ಯ ಸರ್ಕಾರ ಅಸ್ಥಿರಕ್ಕೆ ಬಿಜೆಪಿ ಯತ್ನಿಸುತ್ತಿದೆ. ಇದಕ್ಕಾಗಿ ನಾನಾ ಕುತಂತ್ರ ನಡೆಸುತ್ತಿದೆ. ಆದರೆ ಇದು ಫಲ ನೀಡುವುದಿಲ್ಲ. ಸರ್ಕಾರ ತನ್ನ ಅಧಿಕಾರಾವಧಿ ಪೂರ್ಣಗೊಳಿಸಲಿದೆ ಎಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ತಿಳಿಸಿದ್ದಾರೆ. 

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸರ್ಕಾರ ಬೀಳಿಸುತ್ತೇವೆಂಬ ನೀಚತನವನ್ನು ಬಿಜೆಪಿ ಕೈಬಿಡಬೇಕು. ಮಾಜಿ ಸಿಎಂ ಯಡಿಯೂರಪ್ಪರವರು ಪದೆ ಪದೇ ಸರ್ಕಾರ ಉರುಳಿಸುತ್ತೇವೆ ಎಂದು ಹೇಳುತ್ತಾ ರಾಜ್ಯದಲ್ಲಿ ಅಸ್ಥಿರ ವಾತಾವರಣ ಸೃಷ್ಟಿಗೆ ಮುಂದಾಗಿದ್ದಾರೆ. ಇದು ತಿರುಕನ ಕನಸಾಗಿದೆ. ಇಂತಹ ಕೀಳುಬುದ್ದಿಯಿಂದ ಅವರು ಹೊರಬರಬೇಕಾಗಿದೆ ಎಂದು ಹೇಳಿದರು. 

ಒಂದೆಡೆ ಯಡಿಯೂರಪ್ಪರವರು ಸರ್ಕಾರ ಸತ್ತು ಹೋಗಿದೆ ಎಂದು ಹೇಳುತ್ತಾರೆ. ಇನ್ನೊಂದೆಡೆ ಶಿಕಾರಿಪುರ ಕ್ಷೇತ್ರದ ನೀರಾವರಿ ಯೋಜನೆಗಳ ಕಾರ್ಯಗತಕ್ಕೆ ಮನವಿ ಮಾಡಿ, ಸಚಿವ ಡಿ.ಕೆ.ಶಿವಕುಮಾರ್ ರವರ ಮನೆಗೆ ತೆರಳಿ ಮನವಿ ಅರ್ಪಿಸುತ್ತಾರೆ. ಇದು ಯಡಿಯೂರಪ್ಪರ ಇಬ್ಬಗೆ ನೀತಿಗೆ ಸಾಕ್ಷಿಯಾಗಿದೆ ಎಂದು ಕುಟುಕಿದರು. 

ಯಡಿಯೂರಪ್ಪರವರು ಡಿ.ಕೆ.ಶಿವಕುಮಾರ್ ರವರನ್ನು ಭೇಟಿಯಾಗಿ ರಾಜಕಾರಣದ ಸ್ಟಂಟ್ ನಡೆಸಲು ಯತ್ನಿಸಿದ್ದಾರಷ್ಟೆ. ಇಂತಹ ನಾಟಕಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಾಗಲಿ, ಡಿ.ಕೆ.ಶಿವಕುಮಾರ್ ರವರಾಗಲಿ ಬಗ್ಗುವುದಿಲ್ಲ. ಈ ಇಬ್ಬರು ನಾಯಕರು ಸುಮ್ಮನೆ ಕೂರುವ ಜಾಯಮಾನದವರಲ್ಲ. ನಾಟಕ ಮಾಡುತ್ತಿರುವ ಯಡಿಯೂರಪ್ಪಗೆ ಇದು ತಿಳಿದಿರಲಿ ಎಂದು ವಾಗ್ದಾಳಿ ನಡೆಸಿದರು. 

ನೀರಾವರಿ ಯೋಜನೆಗಳೇ ಆಗಿಲ್ಲ ಎಂದು ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ರಾಘವೇಂದ್ರ ಹೇಳುತ್ತಿದ್ದಾರೆ. ಹಾಗಾದರೆ ಇಷ್ಟು ದಿನ ಅವರು ಎಲ್ಲಿ ಹೋಗಿದ್ದರು. ಅವರ ಅಧಿಕಾರಾವದಿಯಲ್ಲಿ ಏಕೆ ಪೂರ್ಣಗೊಳಿಸಲಿಲ್ಲ. ಈಗ ಇವರಿಗೆ ಜ್ಞಾನೋದಯವಾಗಿರುವುದೇಕೆ ಎಂದು ತರಾಟೆಗೆ ತೆಗೆದುಕೊಂಡರು. 
ತುಮರಿ ಸೇತುವೆ, ರೈಲ್ವೆ ಯೋಜನೆಗಳು, ಶಿಕಾರಿಪುರ, ಸೊರಬ ತಾಲೂಕುಗಳ ನೀರಾವರಿ ಯೋಜನೆಗಳ ಬಗ್ಗೆ ಬಿಜೆಪಿಯವರು ಬರೀ ಬೊಗಳೆ ಬಿಡುತ್ತಿದ್ದಾರೆ. ಇದು ಮತದಾರರಿಗೆ ಚೆನ್ನಾಗಿ ಗೊತ್ತಿದೆ. ಆದರೆ ನಾನು ಚುನಾವಣೆಯಲ್ಲಿ ಸೋತರೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಗಮನಹರಿಸುತ್ತೇನೆ. ಸರ್ಕಾರದಿಂದ ಅಗತ್ಯ ನೆರವು ಕಲ್ಪಿಸುತ್ತೇನೆ ಎಂದು ತಿಳಿಸಿದರು. 

ಸಿದ್ದತೆ: ಕಳೆದ ಉಪ ಚುನಾವಣೆಯಲ್ಲಿ ಪೂರ್ವ ಸಿದ್ದತೆಯ ಕೊರತೆ ಮತ್ತಿತರ ಅಂಶಗಳು ಸೋಲಿಗೆ ಕಾರಣವಾಯಿತು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪಕ್ಷ ಸಂಘಟನೆ ಮಾಡಲಾಗುವುದು. ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತೀ.ನಾ.ಶ್ರೀನಿವಾಸ್, ಆರ್.ಎಂ.ಮಂಜುನಾಥಗೌಡ, ಎಂ.ಶ್ರೀಕಾಂತ್, ಶಾರದಾಪೂರ್ಯನಾಯ್ಕ್, ಮಹಮ್ಮದ್ ಯೂಸೂಫ್ ಭಯ್ಯಾ, ನಾಗರಾಜ ಕಂಕಾರಿ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News