ಸಮಾನತೆಯ ಸಮಾಜ ಕಟ್ಟಲು ಯುವಜನತೆಯನ್ನು ಬಳಕೆ ಮಾಡಬೇಕಿದೆ: ಡಾ.ಜಿ.ಪರಮೇಶ್ವರ್

Update: 2018-12-07 18:58 GMT

ತುಮಕೂರು,ಡಿ.07: ಬಸವಣ್ಣನವರ ಆಶಯದಂತೆ ಸಮಾನತೆಯ ಸಮಾಜ ಕಟ್ಟಲು ದೇಶದ ಯುವಜನತೆಯನ್ನು ಬಳಕೆ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗಾಜಿನ ಮನೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂ., ಯುವಜನ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಯುವಜನೋತ್ಸವ-2018-19ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಶೇ.80 ರಷ್ಟು ಯುವ ಮಾನವ ಸಂಪನ್ಮೂಲವನ್ನು ಹೊಂದಿರುವ ಭಾರತದ ಪ್ರತಿಭಾವಂತರ ಪಲಾಯನಕ್ಕೆ ಅವಕಾಶ ನೀಡದೆ, ಅವರನ್ನು ದೇಶ ಕಟ್ಟಲು ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.

ಬಸವಣ್ಣನವರ ಆಶಯದಂತೆ ಜಾತಿ ಧರ್ಮವನ್ನು ಮೀರಿ ಸಮಾನತೆಯಿಂದ ಬದುಕುವಂತಹ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಒತ್ತು ನೀಡಬೇಕಾಗಿದೆ. ದುರಾದೃಷ್ಟವಶಾತ್ ಯುವ ಸಮೂಹ ದಾರಿತಪ್ಪುತ್ತಿದೆ. ಯುವ ಜನತೆ ಶಿಕ್ಷಣ ಪಡೆದು ಪಲಾಯನ ಮಾಡುತ್ತಿದೆ. ಶೇ.60ರಷ್ಟು ತಂತ್ರಜ್ಞಾನ ಅಭಿವೃದ್ಧಿ ನಮ್ಮ ರಾಜ್ಯದಲ್ಲಿಯೇ ಆಗುತ್ತಿದ್ದು, ಪ್ರತಿಭಾ ಪಲಾಯನವನ್ನು ಬಿಟ್ಟು ದೇಶದ ಅಭಿವೃದ್ಧಿಗೆ ಹೆಗಲು ಕೊಡಬೇಕಿದೆ. ದೇಶದಲ್ಲಿಯೇ ಶೇ.60ರಷ್ಟು ಜನತೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದು, ಅತ್ತುತ್ಯಮ ಮಾನವ ಸಂಪನ್ಮೂಲ ದೇಶದಲ್ಲಿದೆ. ಯುವಶಕ್ತಿಯನ್ನು ದೇಶ ಕಟ್ಟುವ ಹಾಗೂ ಸಮಾಜ ಕಟ್ಟುವ ಕೆಲಸಕ್ಕೆ ಬಳಕೆಯಾಗಬೇಕಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ತುಮಕೂರು ತನ್ನದೆ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಬಯಲು ಸೀಮೆಗೆ ಸೇರಿದ ಜಿಲ್ಲೆಯಲ್ಲಿ ಯಾವುದೇ ನೀರಾವರಿ ಯೋಜನೆಗಳಿಲ್ಲದಿದ್ದರೂ, ಸಾಹಿತ್ಯ, ಕಲೆಯಲ್ಲಿ ಅದ್ವೀತಿಯವಾದ ಸಾಧನೆಯನ್ನು ಮಾಡಿದೆ. ಹಿರಿಯ ಸಾಹಿತಿಗಳಲ್ಲಿ ಬಿಎಂಶ್ರೀ, ಗುಬ್ಬಿ ವೀರಣ್ಣ ತಮ್ಮ ಕ್ಷೇತ್ರದಲ್ಲಿ ಮೇರು ಪ್ರತಿಮೆಗಳಾಗಿ ಮೆರೆದಿದ್ದಾರೆ. ಇಂದು ಬರಗೂರು ರಾಮಚಂದ್ರಪ್ಪ, ದೊಡ್ಡರಂಗೇಗೌಡ, ಸಿದ್ದರಾಮಯ್ಯ ಅವರು ಅಧುನಿಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ್ದಾರೆ. ಅಮರಶಿಲ್ಪಿ ಜಕಣಾಚಾರಿ ಜನಿಸಿದ ನಾಡು ನಮ್ಮದು ಎಂದರು.

ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗಿದೆ. 8 ಕೋಟಿ ರೂ ವೆಚ್ಚದಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಿಂಥಟಿಕ್ ಟ್ರಾಕ್ ನಿರ್ಮಿಸಲಾಗುತ್ತಿದೆ. ಸ್ಮಾರ್ಟ್ ಸಿಟಿಯನ್ನು ಮತ್ತಷ್ಟು ಸ್ಮಾರ್ಟಾಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ತುಮಕೂರಿನ ಮನೆ ಮಕ್ಕಳು ದಿನದ ಸ್ವಲ್ಪ ಹೊತ್ತು ನೆಮ್ಮದಿಯಾಗಿ, ಸಂತೋಷದಿಂದ ಕಳೆಯುವಂತಹ ಉದ್ಯಾನವನವನ್ನು ಜಿಲ್ಲಾಡಳಿತ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ನಮ್ಮದು ಯಂಗ್ ಇಂಡಿಯಾ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಬೇಕಾದ ಯುವ ಶಕ್ತಿ ನಮ್ಮಲಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ,ಧಾರ್ಮಿಕವಾಗಿ ತನ್ನದೇ ಚಾಪು ಮೂಡಿಸಿರುವ ತುಮಕೂರು ಜಿಲ್ಲೆ, ಕೈಗಾರಿಕಾ ವಲಯದಲ್ಲಿಯೂ ಸಾಕಷ್ಟು ಅಭಿವೃದ್ದಿ ಕಾಣುತ್ತಿದೆ. ಹೆಚ್.ಎ.ಎಲ್. ಮತ್ತು ಇಸ್ರೋ ಜಿಲ್ಲೆಯ ಹೆಸರನ್ನು ಪ್ರಪಂಚಕ್ಕೆ ಪರಿಚಯಿಸಲಿವೆ. ಇಂತಹ ಜಿಲ್ಲೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ಯುವಜನೋತ್ಸವ ಯಶಸ್ವಿಯಾಗಲೆಂದು ಹಾರೈಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಜ್ಯೋತಿಗಣೇಶ್ ಮಾತನಾಡಿ, ದೇಶದ ಅತಿದೊಡ್ಡ ಶಕ್ತಿ ಯುವಜನತೆ, ಇಂತಹ ಯುವಕರಿಗೆ ಸನ್ಮಾರ್ಗ ತೋರಿಸುವ ಕೆಲಸ ಆಗಬೇಕಿದೆ. ಅವರಿಗೆ ಉತ್ತಮ ಮಾರ್ಗದರ್ಶನ ಸಿಗಬೇಕಾಗಿದೆ ಎಂದು ಅವರು, ತುಮಕೂರು ಜಿಲ್ಲೆ ಶೈಕ್ಷಣಿಕವಾಗಿ ಬಹಳ ಎತ್ತರದಲ್ಲಿದ್ದು, ಹೆಣ್ಣು ಮಕ್ಕಳ ಹಾಸ್ಟಲ್ ಕೊರತೆ ಕಾಡುತ್ತಿದೆ. ಯುವಜನತೆಗೆ ಉದ್ಯೋಗ ದೊರೆಯುವಂತೆ ಕೌಶಲ್ಯಾಭಿವೃದ್ದಿ ಯೋಜನೆ ರೂಪಿಸಬೇಕು ಎಂದು ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. 

ವೇದಿಕೆಯಲ್ಲಿ ಜಿ.ಪಂ.ಅಧ್ಯಕ್ಷೆ ಶ್ರೀಮತಿ ಲತಾ, ಉಪಾಧ್ಯಕ್ಷೆ ಶ್ರೀಮತಿ ಶಾರದ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಸಿಇಓ ಶ್ರೀಮತಿ ಅನೀಶ್ ಕೆ.ಜಾಯ್, ಎಸ್.ಪಿ. ಡಾ.ದಿವ್ಯಾಗೋಪಿನಾಥ್, ನಲ್ಮನ ಎಂ.ಡಿ. ಡಾ.ಮಮತ, ಕ್ರೀಡಾ ಇಲಾಖೆಯ ಆಯುಕ್ತ ಶ್ರೀನಿವಾಸ್, ಎಡಿಸಿ ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News