ಪೊಲೀಸರು ತಮ್ಮನ್ನು ತಾರತಮ್ಯದಿಂದ ನೋಡುತ್ತಿದ್ದಾರೆ ಎನ್ನುವುದು ಭಾರತೀಯ ಮುಸ್ಲಿಮರ ಅನಿಸಿಕೆ: ಸಮೀಕ್ಷೆ

Update: 2018-12-08 11:33 GMT

ಹೊಸದಿಲ್ಲಿ, ಡಿ.8: ತಮ್ಮ ಗುರುತಿನ ಆಧಾರದಲ್ಲಿ ಪೊಲೀಸರು ತಮ್ಮನ್ನು ಗುರಿಯಾಗಿಸುತ್ತಿದ್ದಾರೆ ಹಾಗೂ ಶೋಷಿಸುತ್ತಿದ್ದಾರೆ ಎನ್ನುವುದು ಮುಸ್ಲಿಮರ ಭಾವನೆ ಎಂದು ಕಾಮನ್ವೆಲ್ತ್ ರೈಟ್ಸ್ ಇನೀಶಿಯೇಟಿವ್ ಹಾಗೂ ಖ್ವಿಲ್ ಫೌಂಡೇಶನ್ ಎಂಟು ನಗರಗಳ ಸುಮಾರು 200 ಮುಸ್ಲಿಮರ ಭಾಗವಹಿಸುವಿಕೆಯಿಂದ ನಡೆಸಿದ ಸಮೀಕ್ಷೆಯಲ್ಲಿ ಕಂಡುಕೊಂಡಿದೆ.

ಪೊಲೀಸರ ಬಗ್ಗೆ ಮುಸ್ಲಿಮರಿಗಿರುವ ಅನಿಸಿಕೆಗಳನ್ನು ತಿಳಿಯಲು ಈ ಸಮೀಕ್ಷೆ ನಡೆಸಲಾಗಿತ್ತು. ಅದಕ್ಕಾಗಿ ಹಲವಾರು ಗುಂಪು ಚರ್ಚೆಗಳು ಹಾಗೂ  ಸುಮಾರು 25 ಮಾಜಿ ಮುಸ್ಲಿಂ ಪೊಲೀಸ್ ಸಿಬ್ಬಂದಿಯ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗಿತ್ತು. ತಮ್ಮನ್ನು ಹಾಗೂ ತಮ್ಮ ಹಕ್ಕುಗಳನ್ನು ಪೊಲೀಸರು ರಕ್ಷಿಸುತ್ತಾರೆಂಬ ವಿಶ್ವಾಸವಿಲ್ಲ ಎಂದೂ ಸಮೀಕ್ಷೆಯಲ್ಲಿ ಭಾಗವಹಿಸಿದ ಹಲವರು ಅಭಿಪ್ರಾಯ ಪಟ್ಟಿದ್ದರು.

ತಮ್ಮನ್ನು ಪೊಲೀಸರು ಬಂಧಿಸುವ ಅಥವಾ ನಿಂದಿಸುವ ಭಯ ಸದಾ ಕಾಡುತ್ತದೆ ಎಂದು ಸಮೀಕ್ಷೆಯುಲ್ಲಿ ಭಾಗವಹಿಸಿದ ಹೆಚ್ಚಿನ ಮುಸ್ಲಿಮರು  ಹೇಳಿದರೆಂದು ವರದಿ ತಿಳಿಸಿದೆ. ಮುಸ್ಲಿಂ ಮಹಿಳೆಯರಂತೂ ಮುಸ್ಲಿಮರಾಗಿರುವ ಜತೆಗೆ ಮಹಿಳೆಯರೂ ಆಗಿರುವ ಎರಡು ಪಟ್ಟು ಹೊರೆ ಅನುಭವಿಸುವ ಭಾವನೆ ಹೊಂದಿದ್ದಾರೆಂದು ಸಮೀಕ್ಷೆ ತಿಳಿಸಿದೆ. ದೇಶದಲ್ಲಿ ಮುಸ್ಲಿಮರ ಜನಸಂಖ್ಯೆಗನುಗುಣವಾಗಿ  ಅವರ ಸಮುದಾಯದ ಮಂದಿ ಪೊಲೀಸ್ ಇಲಾಖೆಯಲ್ಲಿಲ್ಲದೇ ಇರುವುದೂ ಇಂತಹ ಒಂದು ಭಾವನೆಗೆ ಕಾರಣ ಎಂದು ವರದಿ ತಿಳಿಸಿದೆ. ವಿಚಾರಣಾಧೀನ ಕೈದಿಗಳ ಪೈಕಿ ಮುಸ್ಲಿಮರು ಶೇ 21ರಷ್ಟಿದ್ದರೆ, ಅಪರಾಧಿಗಳೆಂದು ಘೋಷಿಸಲ್ಪಟ್ಟು ಶಿಕ್ಷೆ ಅನುಭವಿಸುತ್ತಿರುವವರ ಪೈಕಿ ಶೇ 16ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News