ಮಂಡ್ಯ: ಮದ್ಯಪಾನಕ್ಕೆ ಅವಕಾಶ ನಿರಾಕರಣೆ ಹಿನ್ನೆಲೆ; ಉ.ಪ್ರದೇಶ ಕೂಲಿ ಕಾರ್ಮಿಕರ ಮೇಲೆ ಹಲ್ಲೆ

Update: 2018-12-08 18:38 GMT

ಮಂಡ್ಯ, ಡಿ.8: ಆಲೆಮನೆಯಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಕಾರದ ಕಾರಣ ಉತ್ತರಪ್ರದೇಶದ ಕೂಲಿ ಕಾರ್ಮಿಕರ ಮೇಲೆ ಕೆಲವು ಸ್ಥಳೀಯ ಯುವಕರು ಹಲ್ಲೆ ನಡೆಸಿರುವುದಲ್ಲದೇ ಮಹಿಳೆಯರನ್ನು ಎಳೆದಾಡಿರುವ ಘಟನೆ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗೇಟ್ ಬಳಿ ಗುರುವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆಲೆಮನೆ ಬೇವಿನಕುಪ್ಪೆ ಗ್ರಾಮದ ಪೃಥ್ವಿರಾಜ್ ಕುಮಾರ್ ಎಂಬುವರಿಗೆ ಸೇರಿದ್ದು, ಉತ್ತರಪ್ರದೇಶದ ಮುಝಪ್ಫರ್ ನಗರದಿಂದ ಕೂಲಿ ಕೆಲಸಕ್ಕಾಗಿ ಬಂದಿರುವ ಹತ್ತಕ್ಕೂ ಹೆಚ್ಚು ಕಾರ್ಮಿಕರು ಈ ಆಲೆಮನೆಯಲ್ಲಿ ಬೆಲ್ಲ ತಯಾರಿಸುವ ಕೆಲಸ ಮಾಡುತ್ತಿದ್ದಾರೆ.

ಘಟನೆ ವಿವರ: ಪಾಂಡವಪುರ-ಮಂಡ್ಯ ರಸ್ತೆಯಲ್ಲಿನ ಚಿಕ್ಕಮರಳಿ ಗೇಟ್ ಸಮೀಪದ ಲೋಕಪಾವನಿ ಸೇತುವೆ ಪಕ್ಕದ ಈ ಆಲೆಮನೆಗೆ ಗುರುವಾರ ರಾತ್ರಿ ಬೈಕಿನಲ್ಲಿ ಬಂದ ಏಳೆಂಟು ಯುವಕರು ಆಲೆಮನೆಯಲ್ಲಿ ಕುಳಿತು ಮದ್ಯಪಾನ ಮಾಡಲು ಮುಂದಾದಾಗ ಅಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ಸುರೇಶ ಎಂಬವರು ಇಲ್ಲಿ ಮದ್ಯಪಾನ ಮಾಡಬೇಡಿ ಎಂದು ಹೇಳಿದ್ದಾರೆ.

ಇದರಿಂದ ಕುಪಿತಗೊಂಡ ಯುವಕರು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿನ ಜಲ್ಲೆ, ಎತ್ತಿನ ಕಡಗೂಟ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಸುರೇಶ(35), ರಮೇಶ(30), ಬಿಟ್ಟು (40), ರವಿ(40) ಮತ್ತು ಓಂ ಬೀರ್(60) ಎಂಬುವರ ಮೇಲೆ ಹಲ್ಲೆ ನಡೆಸಿ ಎಲ್ಲೆಂದರಲ್ಲಿ ಓಡಾಡಿಸಿಕೊಂಡು ಹೊಡೆದಿದ್ದಾರೆ ಎಂದು ಆಲೆಮನೆ ಮಾಲಕ ಪೃಥ್ವಿರಾಜ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ವೇಳೆ ತಮ್ಮ ಮನೆಯವರಿಗೆ ಹೊಡೆಯುತ್ತಿದ್ದನ್ನು ಕಂಡು ಕಿರುಚಾಡಿದ ಹೆಂಗಸರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿ ಅವರ ಬಟ್ಟೆಯನ್ನು ಎಳೆದಾಡಿದ್ದಾರೆ ಎನ್ನಲಾಗಿದೆ.

ಮಾರಣಾಂತಿಕ ಹೊಡೆತದಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ನುಗ್ಗಿ ಚಿಲಕ ಹಾಕಿಕೊಂಡರೂ ಬಿಡದೆ ಬಾಗಿಲುಗಳನ್ನು ಮುರಿದು ಹಾಕಿ ಮನೆಯೊಳಗಿನಿಂದ ಎಳೆದು ರಸ್ತೆಯಲ್ಲಿ ಎಳೆದಾಡಿ ಹೊಡೆದರು ಎಂದು ಕೂಲಿ ಕಾರ್ಮಿಕ ಸುರೇಶ ಮಾಧ್ಯಮದವರಿಗೆ ತಿಳಿಸಿದರು.

ಗುರುವಾರ ರಾತ್ರಿ ತಮ್ಮ ಆಲೆಮನೆಯಲ್ಲಿ ನಡೆಯುತ್ತಿರುವ ದಾಂಧಲೆಯ ವಿಷಯ ತಿಳಿದ ಪೃಥ್ವಿರಾಜ್ ಸ್ಥಳಕ್ಕೆ ಬೈಕಿನಲ್ಲಿ ಆಗಮಿಸಿದಾಗ ದುಷ್ಕರ್ಮಿ ಯುವಕರು ಕಬ್ಬಿನ ಜಲ್ಲೆಯಿಂದ ಅವರನ್ನೂ ಥಳಿಸಿದರು. ಕೂಡಲೇ ಸ್ಥಳದಿಂದ ಕಾಲುಕಿತ್ತ ಪೃಥ್ವಿರಾಜ್ ಪೊಲೀಸ್ ಕಂಟ್ರೋಲ್ ರೂಂಗೆ ಕರೆಮಾಡಿ ವಿಷಯ ತಿಳಿಸಿದರು. ಕೆಲ ಸಮಯದ ನಂತರ ಪಾಂಡವಪುರ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ದಾಂಧಲೆ ನಡೆಸಿದ ಯುವಕರು ಪರಾರಿಯಾದರು. ಈ ಸಂದರ್ಭದಲ್ಲಿ ಯುವಕರಿಗೆ ಸೇರಿದ ನಾಲ್ಕು ಬೈಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದು, ಪಾಂಡವಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಇನ್ನೂ ಎಫ್‍ಐಆರ್‍ ಆಗಿಲ್ಲ: ಘಟನೆ ನಡೆದು ಮೂರು ದಿನವಾದರೂ ರಾಜಕೀಯ ಒತ್ತಡದಿಂದ ಪೊಲೀಸರು ದುಷ್ಕರ್ಮಿಗಳ ಮೇಲೆ ಎಫ್‍ಐಆರ್ ದಾಖಲಿಸಿಲ್ಲ. ಉತ್ತರಪ್ರದೇಶದ ಕೂಲಿ ಕಾರ್ಮಿಕರಿಂದ ಕಂಪ್ಲೇಂಟ್ ತೆಗೆದುಕೊಂಡರೆ ಅವರು ನಾಳೆ ದಿನ ಕೋರ್ಟಿಗೆ ಹಾಜರಾಗುವುದಿಲ್ಲ ಸ್ವಲ್ಪ ತಡವಾಗುತ್ತದೆ ಅಥವಾ ರಾಜಿ ಮಾಡಿಕೊಳ್ಳಿ ಎಂದು ಪೊಲೀಸರೇ ದೂರುದಾರರ ಮೇಲೆ ಒತ್ತಡ ಹಾಕುತ್ತಿರುವ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News