100 ಕೆ.ಜಿ. ತೂಕ ಕಳೆದುಕೊಂಡ 'ಅತಿಭಾರ'ದ ಬಾಲಕ !

Update: 2018-12-09 04:45 GMT

ಹೊಸದಿಲ್ಲಿ, ಡಿ. 9: ಕಳೆದ ವರ್ಷ 273 ಕೆಜಿ ತೂಕವಿದ್ದ ಇಲ್ಲಿನ ಮಿಹಿರ್ ಜೈನ್ ಎಂಬ ಹದಿನಾಲ್ಕರ ಬಾಲಕ ಬೊಜ್ಜಿನಿಂದಾಗಿ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದ. ಮಧುಮೇಹ ನಿಯಂತ್ರಣಕ್ಕಾಗಿ ಇನ್ಸುಲಿನ್ ಅವಲಂಬಿಸಿದ್ದ ಈತ ಇದೀಗ 100 ಕೆ.ಜಿ. ತೂಕ ಕಳೆದುಕೊಂಡಿದ್ದಾನೆ.

"ಆ ವೇಳೆಯಲ್ಲಿ ಕಾಮಿಕ್ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳುವುದು ನನಗೆ ಕನಸಾಗಿತ್ತು. ಆದರೆ ಒಂದು ವರ್ಷದ ಬಳಿಕ ನಾನು ಅದರಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಆಘಾತವಾಗಿದೆ" ಎಂದು ಶನಿವಾರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಮಿಹಿರ್ ಹೇಳಿದ್ದಾನೆ.

ಕಾಮಿಕ್ ಗೇಮ್‌ಗಳಲ್ಲಿ ಅತೀವ ಆಸಕ್ತಿ ಹೊಂದಿದ ಮಿಹಿರ್, ಡಿಸಿ ಕಾಮಿಕ್ಸ್ ಪ್ರೇಮಿ. ಹಕ್ ಹಾಗೂ ಫ್ಲ್ಯಾಷ್ ಈತನ ಫೇವರಿಟ್ ಸೂಪರ್ ಹೀರೊಗಳು. ಕಳೆದ ಜುಲೈಯಲ್ಲಿ ವಿಶ್ವದ ಅತಿಭಾರದ ಬಾಲಕ ಎಂಬ ಕುಖ್ಯಾತಿಗೆ ಮಿಹಿರ್ ಪಾತ್ರನಾಗಿದ್ದ.

ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ ಮತ್ತು ಕಟ್ಟುನಿಟ್ಟಿನ ಆಹಾರ ಕ್ರಮ ಅನುಸರಿಸಲು ಆರಂಭಿಸಿದ ನಾಲ್ಕು ತಿಂಗಳ ಬಳಿಕ ಮಿಹಿರ್ 100 ಕೆ.ಜಿ. ತೂಕ ಕಳೆದುಕೊಂಡಿದ್ದು, ಈಗ 137 ಕೆ.ಜಿ ತೂಕ ಹೊಂದಿದ್ದಾನೆ. ಇನ್ನೂ ನಾನು 50 ಕೆ.ಜಿ. ತೂಕ ಇಳಿಸಿಕೊಳ್ಳಬೇಕು ಎಂದು ಹೇಳಿಕೊಳ್ಳುತ್ತಾನೆ. ತೀರಾ ಸರಳ ಕೆಲಸಗಳನ್ನು ಮಾಡಿಕೊಳ್ಳಲೂ ಅಸಾಧ್ಯವಾಗಿದ್ದ ಯುವಕ ಇದೀಗ ತನ್ನ ಉತ್ತಮ ನಗರ ನಿವಾಸದ ಹೊರಗೆ 10 ನಿಮಿಷಗಳ ವಾಕಿಂಗ್ ಮಾಡಲು ಸಮರ್ಥನಾಗಿದ್ದಾನೆ. ಜತೆಗೆ ತನ್ನ ತಂಗಿ ನಂದಿನಿ ಜತೆ ಬ್ಯಾಡ್ಮಿಂಟನ್ ಆಡುತ್ತಾನೆ.

ಬೊಜ್ಜಿನಿಂದಾಗಿ ಏಳನೇ ವರ್ಷದಲ್ಲೇ ಶಾಲೆಗೆ ಹೋಗುವುದನ್ನು ಮಿಹಿರ್ ನಿಲ್ಲಿಸಿದ್ದ. "ಶಾಲೆ ಬಿಟ್ಟ ಮೊದಲ ವರ್ಷದಿಂದಲೇ ಶಿಕ್ಷಕರು ಈತನ ಮನೆಗೆ ಬಂದು ಪಾಠ ಮಾಡುತ್ತಾರೆ. ಆದರೆ ಉಸಿರಾಟದ ತೊಂದರೆಯಿಂದಾಗಿ ಓದಲು ಸಾಧ್ಯವಾಗದೇ ಅದು ಕೂಡಾ ಅರ್ಧಕ್ಕೇ ನಿಂತಿತ್ತು" ಎಂದು ತಾಯಿ ಪೂಜಾ ಹೇಳುತ್ತಾರೆ. ಮಗನ ಈ ಸ್ಥಿತಿಗೆ ತಾನೇ ಕಾರಣ ಎಂದು ಪೂಜಾ ತಪ್ಪೊಪ್ಪಿಕೊಳ್ಳುತ್ತಾರೆ.

"ಆತ ಏನು ತಿನ್ನಲು ಬಯಸಿದರೂ ನಾನು ಸಿದ್ಧಪಡಿಸಿಕೊಡುತ್ತಿದ್ದೆ ಅಥವಾ ತರಿಸಿಕೊಡುತ್ತಿದ್ದೆ". ಕ್ರಮೇಣ ಪಕೋಡಾ, ಪಾಸ್ತಾ ಮತ್ತು ಫಿಝ್ಝಾ ಆತನ ಅತಿತೂಕಕ್ಕೆ ಕಾರಣವಾಯಿತು. ದಿನವಿಡೀ ಮಲಗಿಯೇ ಇರುತ್ತಿದ್ದ. ಚಲಿಸಲು ಸಾಧ್ಯವಾಗದೇ ಹಾಗೂ ಉಸಿರಾಡಲೂ ಕಷ್ಟ ಎನ್ನುವ ಸ್ಥಿತಿಯಲ್ಲಿದ್ದ ಎಂದು ವಿವರಿಸಿದರು.

ಕಳೆದ ನವೆಂಬರ್‌ನಲ್ಲಿ ಮಧುಮೇಹಕ್ಕೆ ತುತ್ತಾದ ಹಾಗೂ ಅಂತಿಮವಾಗಿ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಡಾ. ಪ್ರದೀಪ್ ಚೌಬೆ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ ನಡೆಸಿ ಮರುಹುಟ್ಟು ನೀಡಿದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News