ಅಗತ್ಯ ವಸ್ತುಗಳ ಬೆಲೆ ಏರಿಕೆ: ಜಂಟಿ ಕ್ರಿಯಾ ಸಮಿತಿಯಿಂದ ಜ.8, 9 ರಂದು ಮುಷ್ಕರ

Update: 2018-12-10 12:19 GMT

ಮಡಿಕೇರಿ, ಡಿ.10: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಮತ್ತು ಕಾರ್ಮಿಕ ಸಮೂಹ ಹಾಗೂ ಜನಸಾಮಾನ್ಯರ ಪರವಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳನ್ನೊಳಗೊಂಡ ಜಂಟಿ ಕ್ರಿಯಾ ಸಮಿತಿ ಜ.8 ಮತ್ತು 9ರಂದು ದೇಶ ವ್ಯಾಪಿ ಎರಡು ದಿನಗಳ ಸಾರ್ವತ್ರಿಕ ಮುಷ್ಕರ ನಡೆಸಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಂಟಿ ಕ್ರಿಯಾ ಸಮಿತಿ ಮುಖಂಡ ಟಿ.ಪಿ.ರಮೇಶ್ ಹಾಗೂ ಇತರರು, ಅಂತಾರಾಷ್ಟ್ರಿಯ ಮಟ್ಟದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಶೇ.8ರಷ್ಟು ಕಡಿಮೆಯಾಗಿದ್ದರೂ, ದೇಶದಲ್ಲಿ ಅವುಗಳ ಬೆಲೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಪರಿಣಾಮವಾಗಿ ಅಗತ್ಯವಸ್ತುಗಳ ಬೆಲೆ ದಿನದಿಂದಿ ದಿನಕ್ಕೆ ಏರಿಕೆಯಾಗುತ್ತಿದೆ. ಇದರೊಂದಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರಕಾರ ರೂಪಿಸಿದ ನೀತಿಗಳು, ನೋಟು ಅಮಾನ್ಯೀಕರಣ, ಜಿಎಸ್‍ಟಿ ಮುಂತಾದವುಗಳು ಕೂಡಾ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಆರೋಪಿಸಿದರು. ಇದರೊಂದಿಗೆ ನಗದು ವರ್ಗಾವಣೆ ಹೆಸರಿನಲ್ಲಿ ಸಬ್ಸಿಡಿ ಕಡಿತಗೊಳಿಸಿ ಅಡುಗೆ ಅನಿಲ ಬೆಲೆಯನ್ನು ದುಪ್ಪಟ್ಟು ಮಾಡಲಾಗಿದೆ ಎಂದು ದೂರಿದ ಅವರು, ಬೆಲೆ ನಿಯಂತ್ರಿಸಲು ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸಾರ್ವತ್ರಿಕರಣಗೊಳಿಸಿ ಬಲಪಡಿಸುವ ಬದಲು ಸಬ್ಸಿಡಿ ಕಡಿತ ಮಾಡಿ ಇರುವ ರೇಷನ್ ಪದ್ಧತಿಯನ್ನು ರದ್ದುಪಡಿಸಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಟೀಕಿಸಿದರು.

ಅಧಿಕಾರಕ್ಕೆ ಬರುವ ಮುನ್ನ ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರಕಾರದ ಭರವಸೆ ಸಂಪೂರ್ಣ ಹುಸಿಯಾಗಿದೆ ಎಂದು ಟೀಕಿಸಿದ ಅವರು, ಇಂದು ಉನ್ನತ ವಿದ್ಯಾಭ್ಯಾಸ ಅತ್ಯುತ್ತಮ ಉದ್ಯೋಗ ಅವಕಾಶ ಕಲ್ಪಿಸುತ್ತದೆ ಎಂಬ ನಂಬಿಕೆಯನ್ನು ಹುಸಿಯಾಗಿಸಿದೆ ಎಂದರು. ಕೇಂದ್ರ ಸರಕಾರದ ಕೆಲವು ನೀತಿಗಳಿಂದಾಗಿ ಸಣ್ಣ ಮತ್ತು ಲಘು ಪ್ರಮಾಣದ ಉದ್ಯಮಗಳು ಮುಚ್ಚುವುದರೊಂದಿಗೆ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗಿದೆ. ಸರಕಾರ ಸೇವೆಗಳಲ್ಲೂ ವಾರ್ಷಿಕ ಶೇ.3 ರಷ್ಟು ಹುದ್ದೆಗಳನ್ನು ರದ್ದುಪಡಿಸುವ ಮೂಲಕ ದೊಡ್ಡ ಪ್ರಮಾಣದ ಉದ್ಯೋಗ ನಾಶವಾಗುತ್ತಿದೆ ಎಂದು ದೂರಿದರು.

ಏಳನೇ ವೇತನ ಆಯೋಗವು ಕಾರ್ಮಿಕರಿಗೆ ಕನಿಷ್ಟ 18 ಸಾವಿರ ರೂ.ಗಳ ಕನಿಷ್ಟ ವೇತನ ನಿಗದಿಮಾಡುವಂತೆ ಶಿಫಾರಸ್ಸು ಮಾಡಿ ಎರಡು ವರ್ಷಗಳೇ ಕಳೆದಿದ್ದರೂ, ಕೇಂದ್ರ ಸರಕಾರ ಇನ್ನೂ ಕನಿಷ್ಟ ವೇತನ ನಿಗದಿಗೆ ಕಾನೂನು ರೂಪಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ಮಾಲಕರ ಲಾಭ ಶೇ.12ರಿಂದ 45ಕ್ಕೆ ಹೆಚ್ಚಳವಾಗಿದ್ದು, ಕಾರ್ಮಿಕರ ವೇತನ ಗಳಿಕೆ ಶೇ.33ರಿಂದ ಶೇ.9ಕ್ಕೆ ಇಳಿಕೆಯಾಗಿದೆ. ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರ ಕೂಲಿಯೂ ಇಳಿಕೆಯಾಗಿದ್ದು, ಇದರಿಂದ ದೇಶದಲ್ಲಿ ವ್ಯಾಪಾರೋದ್ಯಮ ಮುಂಚೂಣಿಯಲ್ಲಿದ್ದರೂ, ಮಾನ ಅಭಿವೃದ್ಧಿ ಸೂಚ್ಯಂಕದಲ್ಲಿ 119 ರಾಷ್ಟ್ರಗಳಲ್ಲಿ 100ನೇ ಸ್ಥಾನಕ್ಕೆ ಇಳಿದಿದೆ ಎಂದು ರಮೇಶ್ ವಿಶ್ಲೇಷಿಸಿದರು.

ಕಾರ್ಮಿಕ ಕಾನೂನು ತಿದ್ದುಪಡಿ ನಿಲ್ಲಿಸಿ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ಕಾರ್ಮಿಕರ ಪರವಾಗಿ ಜಾರಿಗೆ ತಂದಿದ್ದ 44 ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕರನ್ನು ಮತ್ತೊಮ್ಮೆ ಗುಲಾಮಗಿರಿಗೆ ತಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರರು. ಗುತ್ತಿಗೆ ಹಾಗೂ ಇನ್ನಿತರ ಖಾಯಮೇತರ ಕಾರ್ಮಿಕರ ಖಾಯಂಗೆ ಶಾಸನ ರೂಪಿಸುವ ಬದಲಿಗೆ ವಿವಿಧ ಹೆಸರುಗಳಲ್ಲಿ ಟ್ರೈನಿಗಳನ್ನು ಉತ್ಪಾದನಾ ಕೆಲಸಗಳಲ್ಲಿ ನೇಮಿಸಿಕೊಳ್ಳಲು ಮಾಲಕರಿಗೆ ಮುಕ್ತ ಅವಕಾಶ ನೀಡಲಾಗುತ್ತಿದೆ ಎಂದು ದೂರಿದರು.

ಅಂಗನವಾಡಿ, ಬಿಸಿಯೂಟ, ಆಶಾ, ಎನ್‍ಆರ್‍ಹೆಚ್‍ಎಂ. ಎನ್‍ಹೆಚ್‍ಎಂ, ಎಸ್‍ಎಸ್‍ಎ ಮುಂತಾದ ಯೋಜನೆಗಳಡಿಯಲ್ಲಿ ಕೆಲಸ ಮಾಡುವವರನ್ನು ಕಾರ್ಮಿಕರೆಂದು ಪರಿಗಣಿಸಿ ಖಾಯಂ ಮಾಡುವ ಬದಲು ಐಸಿಡಿಎಸ್‍ಗೆ ಶೇ.75, ಬಿಸಿಯೂಟ, ಆಶಾಕ್ಕೆ ಶೇ.40ರಷ್ಟು ಅನುದಾನ ಕಡಿತ ಮಾಡಿ ಎನ್‍ಜಿಒಗಳಿಗೆ ಕೊಡಗು ಹೊರಟಿದೆ ಎಂದು ಆರೋಪಿಸಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ನೌಕರರ ಇಂದು ಕನಿಷ್ಟ ಕೂಲಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದು ರಮೇಶ್ ಟೀಕಿಸಿದರು.

ಸಾರ್ವಜನಿಕ ರಂಗದ ಉದ್ಯಮಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಹೊರಟಿದೆ ಎಂದು ದೂರಿದ ಅವರು, ಕೃಷಿ ರಂಗದ ಬಿಕ್ಕಟ್ಟು ದಿನೇದಿನೇ ಹೆಚ್ಚುತ್ತಿದ್ದು, ರೈತರು ಬೆಳೆದ ಬೆಲೆಗಳಿಗೆ ಸೂಕ್ತ ಬೆಲೆ ಇಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕನಿಷ್ಟ ಅವರು ಬೆಳೆದ ಬೆಳೆಗಳಿಗೆ ಶೇ.75ರಷ್ಟಾದರೂ ಬೆಂಬಲ ಬೆಲೆ ದೊರಕುವಂತಾಗಬೇಕು ಎಂದು ಆಗ್ರಹಿಸಿದರು. 

ಒಟ್ಟಿನಲ್ಲಿ ದೇಶದ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಮುಂದಿಟ್ಟು ಜ.8ಮತ್ತು 9ರಂದು ದೇಶವ್ಯಾಪಿ ಎಲ್ಲಾ ವಿಧದ ಕಾರ್ಮಿಕರು 48 ಗಂಟೆಗಳ ಸಾರ್ವತ್ರಿಕ ಮುಷ್ಕರ ನಡೆಸಲಿದ್ದು, ಅದಕ್ಕೆ ಪೂರಕವಾಗಿ ಕೊಡಗು ಜಿಲ್ಲೆಯಲ್ಲಿ ಜ.8ರಂದು ಮೂರು ತಾಲೂಕು ಕೇಂದ್ರಗಳಲ್ಲಿ ಮತ್ತು 9ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.

ಜ.9ರಂದು ನಗರದ ಎ.ವಿ.ಶಾಲೆ ಬಳಿಯಿಂದ ಗಾಂಧಿ ಮೈದಾನದವರೆಗೆ ಕಾರ್ಮಿಕರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದು, ಇದಕ್ಕೆ ಪೂರಕವಾಗಿ ಜ.4, 5 ಮತ್ತು 6ರಂದು ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಪ್ರಚಾರ ಜಾಥಾಗಳು ನಡೆಯಲಿವೆ ಎಂದು ಟಿ.ಪಿ.ರಮೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಐಎನ್‍ಟಿಯುಸಿಯ ಎಸ್.ನಾಗರಾಜ್, ಸಿಐಟಿಯುನ ಹೆಚ್.ಬಿ.ರಮೇಶ್ ಹಾಗೂ ಸಿಐಟಿಯುನ ಪಿ.ಆರ್.ಭರತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News