2013ರ ಭೂಒತ್ತುವರಿ ಕಾನೂನು: ಐದು ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ

Update: 2018-12-10 15:50 GMT

ಹೊಸದಿಲ್ಲಿ,ಡಿ.10: 2013ರಲ್ಲಿ ಕೇಂದ್ರ ಜಾರಿಗೆ ತಂದ ಭೂಸ್ವಾಧೀನ ಕಾಯ್ದೆಗೆ ಮಾಡಲಾಗಿರುವ ತಿದ್ದುಪಡಿಗಳ ಅಗತ್ಯತೆಯನ್ನು ಪ್ರಶ್ನಿಸಿ ಹಾಕಲಾಗಿರುವ ಮೇಲ್ಮನವಿಗೆ ಉತ್ತರಿಸುವಂತೆ ಐದು ರಾಜ್ಯಗಳಿಗೆ ಸರ್ವೋಚ್ಚ ನ್ಯಾಯಾಲಯ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಭೂಸ್ವಾಧೀನ, ಪುನರ್ವಸತಿ ಮತ್ತು ಮರುಸ್ಥಾಪನೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಾಯ್ದೆ 2013ಕ್ಕೆ ಗುಜರಾತ್, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಜಾರ್ಖಂಡ್ ಕೆಲವೊಂದು ವಿರೋಧಾಭಾಸದ ತಿದ್ದುಪಡಿಗಳನ್ನು ಮಾಡಿದ್ದು, ಈ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ಕೋರಿ ಹಾಕಲಾದ ಅರ್ಜಿಯ ವಿಚಾರಣೆಯನ್ನು ನಡೆಸಲು ನ್ಯಾಯಾಧೀಶ ಮದನ್ ಬಿ.ಲೊಕುರ್ ಮತ್ತು ದೀಪಕ್ ಗುಪ್ತಾ ಅವರ ನ್ಯಾಯಪೀಠ ಒಪ್ಪಿಗೆ ಸೂಚಿಸಿದೆ.

ಈ ರಾಜ್ಯಗಳು ಮಾಡಿರುವ ತಿದ್ದುಪಡಿಗಳು ಜಮೀನು ಮಾಲಕರು ಮತ್ತು ರೈತರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಹಾಗೂ ಇತರರು ಹಾಕಿರುವ ಮನವಿಯಲ್ಲಿ ಆರೋಪಿಸಲಾಗಿದೆ.

ಈ ತಿದ್ದುಪಡಿಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಮ್ಮತಿಯ ನಿಬಂಧನೆ, ಸಾಮಾಜಿಕ ಪರಿಣಾಮದ ಮೌಲ್ಯಮಾಪನ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಭಾಗವಹಿಸುವಿಕೆಯನ್ನು ಕೈಬಿಟ್ಟಿರುವುದರಿಂದ ಇದು ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಮನವಿದಾರರು ಆರೋಪಿಸಿದ್ದಾರೆ. ಈ ಕಾನೂನಿನ ಮುಖ್ಯ ಉದ್ದೇಶ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸುವುದೇ ಆಗಿದೆ ಎಂದು ಮನವಿದಾರರ ಪರ ವಾದಿಸಿದ ನ್ಯಾಯವಾದಿ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ. ಕಾನೂನು ಪ್ರಕಾರ ರಾಜ್ಯಗಳು ತಿದ್ದುಪಡಿಯನ್ನು ಮಾಡಬಹುದಾಗಿದೆ. ಬದಲಾವಣೆ ಮಾಡಬೇಕೆಂದು ರಾಜ್ಯ ಶಾಸಕಾಂಗ ನಿರ್ಧರಿಸಿದರೆ ನಾವು ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಈ ವೇಳೆ ತಿಳಿಸಿದ್ದಾರೆ.

2014ರಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ನಂತರ 2013ರ ಕಾನೂನಿಗೆ ತಿದ್ದುಪಡಿ ಮಾಡಲಾಗಿತ್ತು. ಆದರೆ ಇದು ಸಂಸತ್‌ ನಲ್ಲಿ ಅಂಗೀಕರಿಸಲ್ಪಟ್ಟಿರಲಿಲ್ಲ. ಹಾಗಾಗಿ ಈ ಬಗ್ಗೆ ಸುಗ್ರೀವಾಜ್ಞೆ ತಂದರೂ ಅದು 2015ರ ಆಗಸ್ಟ್ 31ಕ್ಕೆ ಕೊನೆಯಾಗಿದೆ. ಈ ತಿದ್ದುಪಡಿಗಳನ್ನು ಸಂಸತ್‌ ನಲ್ಲಿ ಅಂಗೀಕರಿಸಲು ವಿಫಲವಾದ ಕೇಂದ್ರ ಸರಕಾರ ನಂತರ ರಾಜ್ಯಗಳು ಈ ತಿದ್ದುಪಡಿಗಳನ್ನು ಉಪಯೋಗಿಸುವಂತೆ ಸೂಚಿಸಿತ್ತು ಎಂದು ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ರಾಜ್ಯಗಳು ಅಳವಡಿಸಿಕೊಂಡಿರುವ ಈ ತಿದ್ದುಪಡಿಗಳಿಂದ ಕೈಗಾರಿಕಾ ಕಾರಿಡಾರ್, ಎಕ್ಸ್‌ಪ್ರೆಸ್‌ ವೇಗಳು, ಹೆದ್ದಾರಿಗಳನ್ನು ಸಮ್ಮತಿ ನಿಬಂಧನೆ, ಸಾಮಾಜಿಕ ಪರಿಣಾಮ ವೌಲ್ಯಮಾಪನ, ತಜ್ಞರ ಅಭಿಪ್ರಾಯ ಪ್ರಕ್ರಿಯೆ, ಸಾರ್ವಜನಿಕರಿಂದ ಆಲಿಕೆ, ಆಹಾರ ಭದ್ರತೆಯನ್ನು ಸಂರಕ್ಷಿಸಲು ಆಕ್ಷೇಪಗಳು ಮತ್ತು ನಿಬಂಧನೆಗಳು ಇತ್ಯಾದಿಗಳಿಂದ ಹೊರಗಿಡಲಾಗಿದೆ ಎಂದು ಭೂಷಣ್ ತಿಳಿಸಿದ್ದಾರೆ.

2013ರ ಭೂಸ್ವಾಧೀನ ಕಾಯ್ದೆಯಲ್ಲಿ, ಸ್ವಾಧೀನಪಡಿಸಿಕೊಂಡ ಜಮೀನು ಐದು ವರ್ಷಗಳಿಗೂ ಹೆಚ್ಚು ಕಾಲ ಬಳಕೆಯಾಗದೆ ಉಳಿದರೆ ಅಂಥ ಜಮೀನನ್ನು ಮಾಲಕರಿಗೆ ವಾಪಸ್ ನೀಡಬೇಕಾದ, ಪರಿಹಾರ ಘೋಷಿಸಿದ ನಂತರ ಪಾವತಿಸದೆ ಇದ್ದ ಸಂದರ್ಭದಲ್ಲಿ ಮತ್ತೆ ಹೊಸದಾಗಿ ಪರಿಹಾರವನ್ನು ಘೋಷಿಸಬೇಕಾದ ಹಾಗೂ ಭೂಸ್ವಾಧೀನಪಡಿಸಲು ಶೇ.70 ಭೂಮಾಲಕರ ಒಪ್ಪಿಗೆಯ ಅಗತ್ಯದ ನಿಬಂಧನೆಗಳನ್ನು ಹಾಕಲಾಗಿತ್ತು. ಆದರೆ ರಾಜ್ಯ ಸರಕಾರಗಳು ತಿದ್ದುಪಡಿ ಮೂಲಕ ಈ ನಿಬಂಧನೆಗಳನ್ನು ತೆಗೆದು ಹಾಕಿವೆ ಎಂದು ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News