ಮೂರು ತಿಂಗಳಿಂದ ಬಾಡಿಗೆ ಹಣ ನೀಡದ ಹಿನ್ನಲೆ: ಮೈಸೂರು ಮನಪಾ ವಾಹನ ಚಾಲಕರ ಪ್ರತಿಭಟನೆ

Update: 2018-12-10 18:45 GMT

ಮೈಸೂರು,ಡಿ.10: ಮೂರು ತಿಂಗಳಿಂದ ಬಾಡಿಗೆ ಹಣ ನೀಡದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ವಾಹನ ಚಾಲಕರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದರು.

ಟೆಂಡರ್ ಆಧಾರದ ಮೇಲೆ ಮೈಸೂರು ಮಹಾನಗರ ಪಾಲಿಕೆ ವಾಹನಗಳನ್ನು ಬಾಡಿಗೆ ಪಡೆದಿದೆ. ಆದರೆ ಟೆಂಡರ್ ದಾರರು ವಾಹನ ಚಾಲಕರಿಗೆ ಕಳೆದ ಮೂರು ತಿಂಗಳಿನಿಂದ ಬಾಡಿಗೆ ಹಣ ನೀಡಲ್ಲವೆಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಬಾಡಿಗೆ ಹಣ ಹೆಚ್ಚು ಮಾಡಬೇಕು ಮತ್ತು ನಿಗದಿತ ಸಮಯಕ್ಕೆ ವಾಹನದ ಬಾಡಿಗೆ ಹಣ ನೀಡುವಂತೆ ಒತ್ತಾಯಿಸಿ ವಾಹನ ಚಾಲಕರು ಪ್ರತಿಭಟನೆ ನಡೆಸಿದರು.

ಪಾಲಿಕೆ ಆಯುಕ್ತರ ಮುಂದೆ ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಬೇರೆ ವಾಹನ ಕರೆಸಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಾರೆ. ಟೆಂಡರ್ ದಾರ ಸರಿಯಾದ ಸಮಯಕ್ಕೆ ಬಾಡಿಗೆ ಹಣ ನೀಡುತ್ತಿಲ್ಲ. ಹಣ ಕೇಳಿದರೆ ವಾಹನ ಟೆಂಡರ್ ವಾಪಸ್ ಪಡೆಯುವುದಾಗಿ ಬೆದರಿಕೆ ಹಾಕುತ್ತಾರೆ. 3 ತಿಂಗಳಿಂದ ಬಾಡಿಗೆ ನೀಡದಿದ್ದರೆ ನಾವು ಕುಟುಂಬ ನಡೆಸಲು ಕಷ್ಟ. ವಾಹನಗಳ ಸಾಲದ ಕಂತನ್ನು ಕಟ್ಟಲಾಗುತ್ತಿಲ್ಲ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ವಾಹನ ಚಾಲಕರ ಕಷ್ಟ ಆಲಿಸಿದ ಪಾಲಿಕೆ ಆಯುಕ್ತರು, ಇಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಸುತ್ತೇವೆ. ಟೆಂಡರ್ ದಾರ ಮತ್ತು ಅಧಿಕಾರಿಗಳೊಡನೆ ಚರ್ಚಿಸಿ ಬಾಡಿಗೆ ಹಣ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆ ಮುಂದುವರಿಸುವುದಾಗಿ ಚಾಲಕರು ಎಚ್ಚರಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News