ನಾಗಮಂಗಲ: ಶವಸಂಸ್ಕಾರಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತಡೆ; ಆಕ್ರೋಶಿತ ಹಕ್ಕಿಪಿಕ್ಕಿ ಜನರಿಂದ ಪ್ರತಿಭಟನೆ

Update: 2018-12-10 19:01 GMT

ನಾಗಮಂಗಲ, ಡಿ.10: ಬುಡಕಟ್ಟು ಜನಾಂಗದವರಿಗೆ ಶವಸಂಸ್ಕಾರಕ್ಕೆ ಅವಕಾಶ ನೀಡದ ಅರಣ್ಯ ಇಲಾಖೆ ದಬ್ಬಾಳಿಕೆಯನ್ನು ಖಂಡಿಸಿ ತಾಲೂಕಿನ ಶಿಕಾರಿಪುರ ಗ್ರಾಮದ ಹಕ್ಕಿಪಿಕ್ಕಿ ಜನಾಂಗದವರು ರಸ್ತೆಗೆ ಬೆಂಕಿಹಚ್ಚಿ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.

ತಾಲೂಕಿನ ತುಪ್ಪದಮಡು ಗ್ರಾಮ ಪಂ. ವ್ಯಾಪ್ತಿಯ ಹಕ್ಕಿಪಿಕ್ಕಿ ಜನಾಂಗದವರೇ ವಾಸವಿರುವ ಶಿಕಾರಿಪುರ ಗ್ರಾಮದಲ್ಲಿ ಸೋಮವಾರ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದರು. ಶವ ಸಂಸ್ಕಾರಕ್ಕೆಂದು ಗ್ರಾಮಸ್ಥರು ತೆರಳಿದಾಗ ಇದು ಅರಣ್ಯ ಪ್ರದೇಶ, ಇಲ್ಲಿ ಶವ ಸಂಸ್ಕಾರಕ್ಕೆ ಅವಕಾಶವಿಲ್ಲ ಎಂದು ಅರಣ್ಯ ಇಲಾಖೆಯ ನೌಕರರು ತಡೆಯೊಡ್ಡಿದರು ಎನ್ನಲಾಗಿದೆ. ಇದರಿಂದ ಕೆರಳಿದ ಗ್ರಾಮಸ್ಥರು ಶ್ರವಣಬೆಳಗೊಳ ಬಿಂಡಿಗನವಿಲೆ ರಸ್ತೆಗೆ ಅಡ್ಡಲಾಗಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. 

ನಾವು 100 ವರ್ಷಗಳಿಂದಲೂ ಶಿಕಾರಿಪುರ ಗ್ರಾಮದಲ್ಲಿ ವಾಸವಿದ್ದೇವೆ. ನಾವು ಆಧಾರ್, ವೋಟರ್ ಐಡಿ, ಬ್ಯಾಂಕ್  ಖಾತೆ ಕೂಡ ಹೊಂದಿದ್ದೇವೆ. ಗ್ರಾಮದಲ್ಲಿ ಅಂಗನವಾಡಿ, ಸರಕಾರಿ ಶಾಲೆ ಹೊಂದಿದ್ದು, ಹಲವು ಸರಕಾರಿ ಸೌಲಭ್ಯಗಳನ್ನು ಪಡೆದುಕೊಂಡು ವಾಸವಿದ್ದೇವೆ. ಆದರೆ, ಏಕಾಏಕಿ ಅರಣ್ಯ ಇಲಾಖೆಯವರು ಗ್ರಾಮ ಖಾಲಿ ಮಾಡುವಂತೆ ವರ್ಷಗಳಿಂದಲೂ ತೀವ್ರ ಒತ್ತಡ ಹಾಕುತ್ತಿದ್ದಾರೆ. ನಾವು ವಾಸಿಸುತ್ತಿದ್ದ ದಿನಗಳಿಂದಲೂ ಶವಸಂಸ್ಕಾರ ಮಾಡುತ್ತಿದ್ದ ಜಾಗದಲ್ಲಿ ಈಗ ಶವಸಂಸ್ಕಾರಕ್ಕೂ ಅವಕಾಶ ನೀಡದೆ ದಬ್ಬಾಳಿಕೆ ಮಾಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಹಲವು ಬಾರಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಗ್ರಾಮ ತೊರೆಯಿರಿ ಎಂದರೆ ನಾವು ಎಲ್ಲಿ ಹೋಗಬೇಕು ಎಂದು ಅಸಹಾಯಕತೆಯ ಅಳಲು ತೋಡಿಕೊಂಡ ಹಕ್ಕಿಪಿಕ್ಕಿ ಜನಾಂಗದವರು, ಇದೇ ರೀತಿ ಮುಂದೆ ತೊಂದರೆ ನೀಡಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ಥಳಕ್ಕೆ ಶಾಸಕರು, ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆ ಮಾಡುವುದಾಗಿ ಪಟ್ಟುಹಿಡಿದರು.

ಸರ್ಕಲ್ ಇನ್‍ಸ್ಪೆಕ್ಟರ್ ನಂಜಯ್ಯ ಪ್ರತಿಭಟನಾಕಾರರ ಮನವೊಲಿಸಿ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದರು. ನಂತರದಲ್ಲಿ ತಹಶೀಲ್ದಾರ್ ಅವರನ್ನು ಭೇಟಿ ಮಾಡಿರುವ ಗ್ರಾಮಸ್ಥರಿಗೆ ಶೀಘ್ರವೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯರ್ಥಪಡಿಸುವ ಭರವಸೆಯನ್ನು ತಹಶೀಲ್ದಾರ್ ನಂಜುಂಡಯ್ಯ ನೀಡಿದ್ದಾರೆ ಎನ್ನಲಾಗಿದೆ.

ಮುಖಂಡರಾದ ಚನ್ನಾರೆಡ್ಡಿ, ನವರಂಗ್, ಅಶೋಕ ಮತ್ತು ಹಲವು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News