ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮತ್ತೊಂದು ಚಂಡಮಾರುತ ?

Update: 2018-12-11 03:27 GMT

ಚೆನ್ನೈ, ಡಿ. 11: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ಮತ್ತೊಂದು ಚಂಡಮಾರುತ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ದಕ್ಷಿಣ ಬಂಗಾಲಕೊಲ್ಲಿಯ ಕೇಂದ್ರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಮುಂದಿನ 48 ಗಂಟೆಗಳಲ್ಲಿ ಉತ್ತರ ತಮಿಳುನಾಡು ಮತ್ತು ಆಂಧ್ರಪ್ರದೇಶದ ದಕ್ಷಿಣ ಕರಾವಳಿಯತ್ತ ಸಾಗಿ ಬಳಿಕ ಚಂಡಮಾರುತವಾಗಿ ಪರಿವರ್ತನೆಯಾಗುವ ಲಕ್ಷಣಗಳಿವೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹವಾಮಾನ ಮಾದರಿಯ ಅಂಕಿ ಸಂಖ್ಯೆಗಳ ಆಧಾರದಲ್ಲಿ ವಾಯುಭಾರ ಕುಸಿತ ತೀವ್ರಗೊಳ್ಳುವ ಎಲ್ಲ ಸಾಧ್ಯತೆಗಳಿದ್ದು, ಡಿ.15- 16ರಲ್ಲಿ ಉತ್ತರ ತಮಿಳುನಾಡಿನಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಬ್ಲಾಗರ್ ಪ್ರದೀಪ್ ಜಾನ್ ಎಚ್ಚರಿಸಿದ್ದಾರೆ.

ಸಮುದ್ರದ ಮೇಲ್ಮೈ ಉಷ್ಣಾಂಶ, ಉಷ್ಣವಲಯದ ಚಂಡಮಾರುತದ ಬಿಸಿ ಸಾಧ್ಯತೆ ಮತ್ತು ಗಾಳಿಯ ರಭಸದ ಆಧಾರದಲ್ಲಿ ನೋಡಿದರೆ, ಇದು ಚಂಡಮಾರುತ ತೀವ್ರಗೊಳ್ಳುವ ಲಕ್ಷಣ. ಡಿಸೆಂಬರ್ 15-16ರ ಅವಧಿಯಲ್ಲಿ ಚಂಡಮಾರುತ ಬೀಸಬಹುದು. ಮುಂದಿನ ಎರಡು- ಮೂರು ದಿನಗಳಲ್ಲಿ ಇದು ಸ್ಪಷ್ಟವಾಗಲಿದೆ ಎಂದು ವಿವರಿಸಿದ್ದಾರೆ.

ಸಮುದ್ರ ಮೀನುಗಾರಿಕೆಗೆ ತೆರಳದಂತೆ ಈಗಾಗಲೇ ಎಲ್ಲ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್ 11ರವರೆಗೆ ಅನ್ವಯವಾಗುವಂತೆ ನೀಡಿದ್ದ ಎಚ್ಚರಿಕೆಯನ್ನು ಇದೀಗ ಡಿಸೆಂಬರ್ 12-13ಕ್ಕೂ ವಿಸ್ತರಿಸಲಾಗಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News