''ಮುಸ್ಲಿಮನೊಬ್ಬ ದನ ಕಡಿದರೆ....'' : ಕಾನೂನು ಪ್ರಶ್ನೆ ಪತ್ರಿಕೆಯಲ್ಲಿ ಹೀಗೊಂದು ಪ್ರಶ್ನೆ

Update: 2018-12-11 07:25 GMT

ಹೊಸದಿಲ್ಲಿ, ಡಿ. 11: ''ಅಹ್ಮದ್ ಎಂಬ ಒಬ್ಬ ಮುಸ್ಲಿಂ ವ್ಯಕ್ತಿ ಮಾರ್ಕೆಟ್‍ನಲ್ಲಿ ಹಿಂದೂಗಳಾಗಿರುವ ರೋಹಿತ್, ತುಷಾರ್, ಮಾನವ್ ಮತ್ತು ರಾಹುಲ್ ಅವರ ಉಪಸ್ಥಿತಿಯಲ್ಲಿ ದನವೊಂದನ್ನು ಕೊಲ್ಲುತ್ತಾನೆ. ಅಹ್ಮದ್ ಮಾಡಿದ್ದು ಅಪರಾಧವೇ ?'' - ಈ ಆಘಾತಕಾರಿ ಪ್ರಶ್ನೆ ಕಂಡು ಬಂದಿದ್ದು ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಮೂರನೇ ಸೆಮಿಸ್ಟರ್ ಕಾನೂನು ವಿದ್ಯಾರ್ಥಿಗಳ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ.

ಡಿ. 7ರಂದು  ನಡೆದ ಲಾ ಆಫ್ ಕ್ರೈಮ್ಸ್ -1  ವಿಷಯದ ಪರೀಕ್ಷೆಯಲ್ಲಿ ಈ ಪ್ರಶ್ನೆ ಎತ್ತಲಾಗಿತ್ತು.  ಈ ನಿರ್ದಿಷ್ಟ ವಿಶ್ವವಿದ್ಯಾಲಯದ ಅಧೀನಕ್ಕೊಳಪಟ್ಟ ಕಾಲೇಜುಗಳ ಪೈಕಿ 10 ಕಾಲೇಜುಗಳು ಎಲ್‍ಎಲ್‍ಬಿ ಕೋರ್ಸುಗಳನ್ನು ನಡೆಸುತ್ತವೆ.

ಈ ಪ್ರಶ್ನೆಯಿರುವ ಪ್ರಶ್ನೆ ಪತ್ರಿಕೆಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಕೂಡಲೇ ವಿಶ್ವವಿದ್ಯಾಲಯ ವಿಷಾದ ವ್ಯಕ್ತಪಡಿಸಿ ಈ ಪ್ರಶ್ನೆಯನ್ನು ಡಿಲಿಟ್ ಮಾಡಲಾಗುವುದು ಹಾಗೂ ವಿದ್ಯಾರ್ಥಿಗಳು ಅದಕ್ಕೆ ಉತ್ತರ ನೀಡಿದ್ದರೂ ನೀಡದೇ ಇದ್ದರೂ ಯಾವುದೇ ಅಂಕಗಳನ್ನು ನೀಡಲಾಗುವುದಿಲ್ಲ ಎಂದಿದೆ.  ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ದಿಲ್ಲಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಪ್ರಶ್ನೆ ಪತ್ರಿಕೆಯ ಚಿತ್ರವನ್ನು ಮೊದಲು ರವಿವಾರ ರಾತ್ರಿ ಟ್ವೀಟ್ ಮಾಡಿದವರು ಸುಪ್ರೀಂ ಕೋರ್ಟ್ ವಕೀಲ ಬಿಲಾಲ್ ಅನ್ವರ್ ಖಾನ್ ಅವರಾಗಿದ್ದರು. ಒಂದಿಡೀ ಸಮುದಾಯವನ್ನು ಅವಮಾನಿಸುತ್ತಿರುವ ಉದಾಹರಣೆಯಿದು ಎಂದು ಬರೆದ ಅವರು ತಮ್ಮ ಟ್ವೀಟ್ ನಲ್ಲಿ  ನರೇಲಾದ ಕಾನೂನು ಕಾಲೇಜಿನ ಮೂರನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ಇದು ಎಂದು ಹೇಳಿದ್ದರು. ಅವರು ಉಲ್ಲೇಖಿಸಿದ್ದ ಕಾಲೇಜು ಚಂದ್ರ ಪ್ರಭು ಜೈನ್ ಕಾಲೇಜ್ ಆಫ್ ಹೈಯರ್ ಸ್ಟಡೀಸ್ ಆ್ಯಂಡ್ ಸ್ಕೂಲ್ ಆಫ್ ಲಾ, ನರೇಲ ಆಗಿತ್ತು.

ಕಾಲೇಜಿನ ಪ್ರಾಂಶುಪಾಲೆ ಪ್ರತಿಕ್ರಿಯಿಸಿ ಈ ನಿರ್ದಿಷ್ಟ ಪ್ರಶ್ನೆಯ ಬಗ್ಗೆ ದೂರಬೇಕೆಂದು ತನಗೆ ಅನಿಸುತ್ತಿಲ್ಲ ಎಂದರಲ್ಲದೆ ''ಇದು ಕಾನೂನಿನ ವಿಚಾರ. ಯಾವುದೇ ಪರಿಸ್ಥಿತಿ ಎದುರಾಗಬಹುದು'' ಎಂದರು.

ವಿವಿಯ ರಿಜಿಸ್ಟ್ರಾರ್ ಸತ್ನಾಂ ಸಿಂಗ್ ಪ್ರತಿಕ್ರಿಯಿಸಿ ಪ್ರಮಾದಕ್ಕೆ ಕ್ಷಮೆ ಕೋರಿದ್ದಾರೆ, ''ಯಾವುದೇ ಪ್ರಶ್ನೆಯನ್ನು ಯಾವುದೇ ಧರ್ಮಕ್ಕೆ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಪ್ರಶ್ನೆಯನ್ನು ಡಿಲಿಟ್ ಮಾಡಲಾಗಿದೆ, ಇನ್ನು ಮುಂದೆ ಇಂತಹ ಪ್ರಶ್ನೆಗಳು ಬಾರದಂತೆ ಕ್ರಮ ಕೈಗೊಳ್ಳಲಾಗುವುದು,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News