ಕಲಬುರ್ಗಿ, ಪನ್ಸಾರೆ, ದಾಭೋಲ್ಕರ್, ಗೌರಿ ಹತ್ಯೆಗಳಲ್ಲಿ ಸಮಾನ ಅಂಶವಿದ್ದರೆ ತನಿಖೆ ನಡೆಸಿ : ಸುಪ್ರೀಂ ಕೋರ್ಟ್

Update: 2018-12-11 10:28 GMT

ಹೊಸದಿಲ್ಲಿ, ಡಿ. 11: ವಿದ್ವಾಂಸ ಎಂ ಎಂ ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಕೊಲೆ ಪ್ರಕರಣಗಳಲ್ಲಿ  ಸಮಾನ ಕೊಂಡಿ ಪತ್ತೆಯಾದಲ್ಲಿ ಈ ಪ್ರಕರಣಗಳ ತನಿಖೆ ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಇಂದು ಸಿಬಿಐಗೆ ಹೇಳಿದೆ.

ಈ ಕುರಿತಂತೆ ಜನವರಿ ಮೊದಲ ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ  ನ್ಯಾಯಮೂರ್ತಿಗಳಾದ ಯು ಯು ಲಲಿತ್ ಹಾಗೂ ನವೀನ್ ಸಿನ್ಹಾ ಅವರನ್ನೊಳಗೊಂಡ ಪೀಠ ಸಿಬಿಐಗೆ ಸೂಚನೆ ನೀಡಿದೆ. ಕರ್ನಾಟಕ ಪೊಲೀಸರು ಸಲ್ಲಿಸಿದ ತನಿಖೆಯ ವರದಿ ಇಂತಹ ಒಂದು ಕೊಂಡಿಯಿರುವ ಸಾಧ್ಯತೆ ಯತ್ತ ಬೊಟ್ಟು ಮಾಡಿದೆ ಎಂದೂ ಸುಪ್ರೀಂ ಕೋರ್ಟ್ ತಿಳಿಸಿದೆ. ದಾಭೋಲ್ಕರ್ ಪ್ರಕರಣವನ್ನು ಸಿಬಿಐ ಈಗಾಗಲೇ ತನಿಖೆ ನಡೆಸುತ್ತಿದೆ.

ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಕಾಣದ ಪ್ರಗತಿಯ ಹಿನ್ನೆಲೆಯಲ್ಲಿ ಕಳೆದ ವಿಚಾರಣೆಯ ಸಂದರ್ಭ ಸುಪ್ರೀಂ ಕೋರ್ಟ್  ಕರ್ನಾಟಕ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೆ ಈ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯನ್ನು ಮೂರು ತಿಂಗಳುಗಳೊಳಗಾಗಿ ಸಲ್ಲಿಸಲಾಗುವುದೆಂದು ರಾಜ್ಯ ಪೊಲೀಸ್ ಇಲಾಖೆ ಈ ಬಾರಿ ಸುಪ್ರೀಂ ಕೋರ್ಟಿಗೆ ಭರವಸೆ ನೀಡಿದೆ.

ತನ್ನ ಪತಿಯ ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕೆಂದು ಕಲಬುರ್ಗಿಯವರ ಪತ್ನಿ ಉಮಾ ದೇವಿ ಅವರು ಸಲ್ಲಿಸಿರುವ ಅಪೀಲಿನ ಮೇಲಿನ ವಿಚಾರಣೆಯನ್ನೂ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕಳೆದ ತಿಂಗಳು ಸಲ್ಲಿಸಿರುವ ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ಸನಾತನ ಸಂಸ್ಥೆಯ ಹೆಸರನ್ನು ಉಲ್ಲೇಖಿಸಿತ್ತಲ್ಲದೆ  ತಮ್ಮ ಸಿದ್ಧಾಂತಕ್ಕೆ ವಿರೋಧ ಸೂಚಿಸುವ ವಿಚಾರವಾದಿಗಳನ್ನು ಟಾರ್ಗೆಟ್ ಮಾಡುವ ಉದ್ದೇಶ ಅದರ ಸದಸ್ಯರಿಗಿತ್ತು  ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News