ಹೂಳು ತೆಗೆಯಲು ಡ್ರೋನ್ ಬಳಕೆ: ಡಿ.ಕೆ.ಶಿವಕುಮಾರ್

Update: 2018-12-11 12:21 GMT

ಬೆಳಗಾವಿ,ಡಿ.11: ರಾಜ್ಯದ ಎಲ್ಲ ಅಣ್ಣೆಕಟ್ಟು ಮತ್ತು ನದಿಗಳಲ್ಲಿ ನೀರಿನ ಮಟ್ಟ ಹಾಗೂ ಹೂಳು ತೆಗೆಯಲು ಡ್ರೋನ್ ಮೂಲಕ ಸಮೀಕ್ಷೆ ನಡೆಸುತ್ತಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.  

ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರು, ಇತ್ತೀಚೆಗೆ ಕೊಡುಗು ಜಿಲ್ಲೆಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಭೂಕುಸಿತದಿಂದಾಗಿ ನದಿಗಳಲ್ಲಿ ಭಾರೀ ಪ್ರಮಾಣದ ಹೂಳು ತುಂಬಿದೆ. ಕೆಲವು ಕಡೆ ನದಿಯ ತಿರುವಿನ ದಿಕ್ಕು ಬದಲಾಗಿದೆ. ಸರಕಾರ ಈ ಬಗ್ಗೆ  ಗಮನಹರಿಸಬೇಕೆಂದು ಸಚಿವರಿಗೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ದಕ್ಷಿಣ, ಉತ್ತರ, ಕರಾವಳಿ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿರುವ ಅಣೆಕಟ್ಟು ಮತ್ತು ನದಿಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯುವ ಸಂಬಂಧ ಆಧುನಿಕ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸುತ್ತಿದ್ದೇವೆ. ಈ ಸಮೀಕ್ಷಾ ವರದಿ ಬಂದ ನಂತರ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಅಣೆಕಟ್ಟು ಮತ್ತು ನದಿಗಳಲ್ಲಿ ವ್ಯಾಪಕ ಪ್ರಮಾಣದ ಹೂಳು ಸಂಗ್ರಹವಾಗಿರುವುದರಿಂದ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಕೂಡ ಲಭ್ಯವಾಗುತ್ತಿಲ್ಲ. ಈಗಾಗಲೇ ಡ್ರೋನ್ ಮೂಲಕ ಸಮೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಹೂಳು ತೆಗೆದರೆ ಎಲ್ಲ ಅಣ್ಣೆಕಟ್ಟು ಮತ್ತು ನದಿಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲಿದೆ ಎಂದರು.

ಈಗಾಗಲೇ ನಾನು ಕೊಡಗಿಗೆ ಭೇಟಿ ನೀಡಿದ್ದೇನೆ. ಜಿಲ್ಲಾಧಿಕಾರಿಗಳು ಸೇರಿದಂತೆ ನಮ್ಮ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಿದ್ದೇವೆ. ಕಾಲ ಮಿತಿಯೊಳಗೆ ಇದನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News