ರಾಜ್ಯಾದ್ಯಂತ ಅಘೋಷಿತ ಲೋಡ್‌ ಶೆಡ್ಡಿಂಗ್ ಜಾರಿ

Update: 2018-12-11 13:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.11: ರಾಜ್ಯಾದ್ಯಂತ ಅಘೋಷಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದ್ದು, ಕಳೆದ ಮೂರು ದಿನಗಳಿಂದ ಬೆಂಗಳೂರು ನಗರದಲ್ಲಿ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆ ಹಾಗೂ ಉಳಿದ ನಗರಗಳಲ್ಲಿ ದಿನಕ್ಕೊಂದು ಗಂಟೆಯ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹೆಚ್ಚು ಕಾಲ ಲೋಡ್‌ಶೆಡ್ಡಿಂಗ್ ನೆಪದಲ್ಲಿ ವಿದ್ಯುತ್ ಕಡಿತ ಮಾಡುತ್ತಿದ್ದು, ಇದಕ್ಕೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ರಿಪೇರಿ ನೆಪ ಹೇಳುತ್ತಿದ್ದಾರೆ. ಡಿಸೆಂಬರ್‌ನಲ್ಲಿಯೇ ಈ ಸ್ಥಿತಿ ನಿರ್ಮಾಣಗೊಂಡರೆ, ಬೇಸಿಗೆಯಲ್ಲಿನ ಸ್ಥಿತಿ ಹೇಗಿರುತ್ತದೆ ಎಂದು ಜನ ಆತಂಕಕ್ಕೀಡಾಗಿದ್ದಾರೆ.

ರಾಜ್ಯ ಸರಕಾರ ಸ್ವಾವಲಂಬಿಯಾಗಿ ವಿದ್ಯುತ್ ಉತ್ಪಾದನೆ ಮಾಡಿ, ಬೇರೆಯವರಿಗೂ ಮಾರುವಷ್ಟು ಶಕ್ತಿ ನಮ್ಮಲ್ಲಿದೆ ಎಂದು ಹೇಳಿದೆ. ಆದರೆ, ಇಂದು ಸ್ವಯಂಪ್ರೇರಿತವಾಗಿ ಅಘೋಷಿತ ಲೋಡ್‌ಶೆಡ್ಡಿಂಗ್ ಜಾರಿಮಾಡಿರುವುದು ಆತಂಕವನ್ನುಂಟು ಮಾಡಿದೆ ಎಂದು ಜನ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಎಂದು ಸರಕಾರ ಹೇಳಿದೆ. ರಾಜಧಾನಿ ಬೆಂಗಳೂರಿನಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತಗೊಳಿಸುವುದಿಲ್ಲ ಎಂಬ ಆಶ್ವಾಸನೆ ನೀಡಿದೆ. ಆದರೆ, ಬೆಳಗ್ಗೆ- ಸಂಜೆ ಪೀಕ್ ಹವರ್‌ನಲ್ಲಿಯೇ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಮಯ ವಿದ್ಯುತ್ ಇಲ್ಲದಂತೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News