ವೇತನ ಬೇಕಾದರೆ ಕಾಲಿಗೆ ಬಿದ್ದು ಕ್ಷಮೆ ಕೇಳಿ ಎಂದ ಬಳ್ಳಾರಿ ಮನಪಾ ಮೇಯರ್: ಆರೋಪ

Update: 2018-12-11 13:59 GMT

ಬಳ್ಳಾರಿ, ಡಿ.11: ಬಳ್ಳಾರಿ ಮಹಾನಗರ ಪಾಲಿಕೆ ಆವರಣದಲ್ಲಿ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಪೌರ ಕಾರ್ಮಿಕರಿಗೆ ಮೇಯರ್ ಆರ್.ಸುಶೀಲಾಬಾಯಿ ತಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಹೇಳುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿ ಮಾಡಿ ಎಂದು 600ಕ್ಕೂ ಹೆಚ್ಚು ಪೌರಕಾರ್ಮಿಕರು ಮೇಯರ್ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪಾಲಿಕೆಯ ಮೇಯರ್ ಪೌರ ಕಾರ್ಮಿಕರನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಎದುರು ಪೌರಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಅಲ್ಲದೆ ನಗರದಲ್ಲಿಂದು ವೇತನ ಪಾವತಿಸುವಂತೆ ಕೋರಿ ಮಹಾನಗರ ಪಾಲಿಕೆ ಎದುರು ಪ್ರತಿಭಟನೆಗೆ ಮುಂದಾಗಿದ್ದರು. ಇದರಿಂದ ಆಕ್ರೋಶತರಾಗಿರುವ ಮೇಯರ್, ಸಫಾಯಿ ಕರ್ಮಚಾರಿ ಸದಸ್ಯರ ಬಳಿ ಚಾಡಿ ಹೇಳ್ತೀರಾ, ನಿಮಗೆ ವೇತನವನ್ನು ಅವರೇ ಪಾವತಿಸುತ್ತಾರೆ ಎಂದು ಪೌರಕಾರ್ಮಿಕರಿಗೆ ಹೆದರಿಸಲು ನೋಡಿದ್ದಾರೆ. ವೇತನ ನೀಡಿ ಎಂದು ಕೇಳಿದ್ದಕ್ಕೆ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಿದರೆ ವೇತನ ನೀಡಲಾಗುತ್ತದೆ ಎಂದು ಕಾರ್ಮಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಬಡವರು, ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಆಯೋಗದ ಸದಸ್ಯರು ಕೇಳಿದ್ದಕ್ಕೆ ನಾವು ಸಮಸ್ಯೆ ಹೇಳಿಕೊಂಡಿದ್ದೇವೆ ಎಂದು ಪೌರಕಾರ್ಮಿಕರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News